ಬೆಂಗಳೂರು: ಕರ್ನಾಟಕ ಲಲಿತಕಲಾ ಅಕಾಡೆಮಿಯು ‘ಮನೆಗೊಂದು ಕಲಾಕೃತಿ’ ಯೋಜನೆಯಡಿ ಇದೇ 18ರಿಂದ 21ರವರೆಗೆ ಬೆಳಿಗ್ಗೆ 10ರಿಂದ ಸಂಜೆ 7ರವರೆಗೆ ಕುಮಾರಕೃಪಾ ರಸ್ತೆಯಲ್ಲಿರುವ ಕರ್ನಾಟಕ ಚಿತ್ರಕಲಾ ಪರಿಷತ್ತಿನ ಗ್ಯಾಲರಿಗಳಲ್ಲಿ ಆಯ್ದ 600 ಕಲಾಕೃತಿಗಳ ಪ್ರದರ್ಶನ ಮತ್ತು ಮಾರಾಟ ಹಮ್ಮಿಕೊಂಡಿದೆ.
ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಕಾಡೆಮಿ ಅಧ್ಯಕ್ಷ ಪ.ಸ. ಕುಮಾರ್, ‘ಅಕಾಡೆಮಿಯು ಹಲವು ವರ್ಷಗಳಿಂದ ಯುವ ಕಲಾವಿದರಿಗೆ ತರಬೇತಿ, ಕಾರ್ಯಾಗಾರ, ಶಿಬಿರಗಳನ್ನು ನಡೆಸುಕೊಂಡು ಬರುತ್ತಿದೆ. ಈ ಅವಧಿಯಲ್ಲಿ ನೂರಾರು ಕಲಾವಿದರಿಂದ ಸಾವಿರಾರು ಕಲಾಕೃತಿಗಳು ರಚಿತವಾಗಿವೆ. ಅವುಗಳಲ್ಲಿ ಅತ್ಯುತ್ತಮವಾದ 600 ಕಲಾಕೃತಿಗಳನ್ನು ಆಯ್ಕೆ ಮಾಡಿ, ದರ ನಿಗದಿ ಮಾಡಲಾಗಿದೆ. ಈ ಪ್ರಕ್ರಿಯೆಗೆ ಪ್ರತ್ಯೇಕ ಸಮಿತಿ ರಚಿಸಲಾಗಿತ್ತು. ಕಲಾಕೃತಿಯು ಮನೆಯ ಅಂದ ಹೆಚ್ಚಿಸುವ ಜತಗೆ ನಮ್ಮ ಮನಃಸ್ಥಿತಿ, ಅಭಿರುಚಿ, ಸಂವೇದನೆಯನ್ನು ಸದಾಕಾಲ ಪೋಷಿಸುತ್ತದೆ. ಆದ್ದರಿಂದ ಅತ್ಯಂತ ಕಡಿಮೆ ದರದಲ್ಲಿ ಕಲಾಕೃತಿಗಳನ್ನು ಮಾರಾಟ ಮಾಡಲಾಗುತ್ತಿದೆ. ಈ ಪ್ರದರ್ಶನವನ್ನು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಉದ್ಘಾಟಿಸುತ್ತಾರೆ’ ಎಂದರು.
‘ಪರಿಷತ್ತಿನ ಏಳು ಗ್ಯಾಲರಿಗಳಲ್ಲಿ ಈ ಪ್ರದರ್ಶನ ನಡೆಯಲಿದೆ. ಈ ಅವಧಿಯಲ್ಲಿಯೇ ಹಣ ಪಾವತಿಸಿ, ಕಲಾಕೃತಿಗಳನ್ನು ಕಾಯ್ದಿರಿಸಿಕೊಳ್ಳಬಹುದಾಗಿದೆ. ಡ್ರಾಯಿಂಗ್‌ಗಳಿಗೆ ₹1 ಸಾವಿರದಿಂದ ₹2 ಸಾವಿರ ನಿಗದಿಪಡಿಸಿದರೆ, ಪೇಂಟಿಂಗ್‌ಗಳಿಗೆ ₹3 ಸಾವಿರದಿಂದ ₹30 ಸಾವಿರದವರೆಗೆ ದರ ಗೊತ್ತುಪಡಿಸಲಾಗಿದೆ. 3x3 ಅಡಿವರೆಗಿನ ಅಳತೆಯ ಕಲಾಕೃತಿಗಳಿವೆ. ಪ್ರದರ್ಶನದಲ್ಲಿ ಇರುವ ಕಲಾಕೃತಿಗಳ ಒಟ್ಟು ಮೌಲ್ಯ ₹12 ಲಕ್ಷವಾಗಿದ್ದು, ಈ ಹಣವನ್ನು ಕಲಾ ವಿದ್ಯಾರ್ಥಿಗಳಿಗೆ ಸ್ಪರ್ಧೆ ಏರ್ಪಡಿಸಲು ಹಾಗೂ ಕಲಾಕೃತಿಗಳ ರಕ್ಷಣೆಗೆ ಬಳಸಿಕೊಳ್ಳಲಾಗುತ್ತದೆ. ಕಲೆ ಹಾಗೂ ಕಲಾವಿದರನ್ನು ಪ್ರೋತ್ಸಾಹಿಸಲು ‘ನಿಮ್ಮೊಂದಿಗೆ ನಾವು’ ಸೇರಿ ವಿವಿಧ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ’ ಎಂದು ವಿವರಿಸಿದರು.
ಅಕಾಡೆಮಿ ರಿಜಿಸ್ಟ್ರಾರ್ ಬಿ. ನೀಲಮ್ಮ, ‘ಕಲಾಕೃತಿಗಳು ಕೈಗೆಟುಕುವ ದರದಲ್ಲಿ ಸಿಗಬೇಕೆಂಬ ಉದ್ದೇಶದಿಂದ ಈ ಪ್ರದರ್ಶನ ಮತ್ತು ಮಾರಾಟ ಹಮ್ಮಿಕೊಳ್ಳಲಾಗಿದೆ. ರಾಜ್ಯದ ಕಲಾ ಪರಂಪರೆ ಅನಾವರಣವಾಗುವ ಜತೆಗೆ ಕಲೆ ಹಾಗೂ ಕಲಾವಿದರನ್ನು ಪ್ರೋತ್ಸಾಹಿಸಲು ಸಹಕಾರಿಯಾಗಲಿದೆ’ ಎಂದರು.
ಭಿನ್ನ ಮಾಧ್ಯಮ ಹಾಗೂ ಶೈಲಿಯ ಕಲಾಕೃತಿಗಳು ಪ್ರದರ್ಶನದಲ್ಲಿ ಕೈಗೆಟಕುವ ದರದಲ್ಲಿ ದೊರೆಯಲಿವೆ. ಕಲಾಸಕ್ತರು ಇದರ ಲಾಭ ಪಡೆದುಕೊಳ್ಳಬೇಕುಪ.ಸ.ಕುಮಾರ್ ಕರ್ನಾಟಕ ಲಲಿತಕಲಾ ಅಕಾಡೆಮಿ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.