ADVERTISEMENT

ಕೆಪಿಎಸ್‌ಸಿ ನೇಮಕಾತಿ ಸಕ್ರಮ ಸುಗ್ರೀವಾಜ್ಞೆ: ಎಚ್ಚರಿಕೆ ಹೆಜ್ಜೆಗೆ ಸ್ಪೀಕರ್‌ ಸಲಹೆ

​ಪ್ರಜಾವಾಣಿ ವಾರ್ತೆ
Published 4 ಜೂನ್ 2019, 19:37 IST
Last Updated 4 ಜೂನ್ 2019, 19:37 IST

ಬೆಂಗಳೂರು: ಕೆಎಎಸ್‌ ಅಧಿಕಾರಿಗಳ ಅಕ್ರಮ ನೇಮಕಾತಿ ಸಕ್ರಮಗೊಳಿಸುವ ಉದ್ದೇಶದಿಂದ ಸುಗ್ರೀವಾಜ್ಞೆ ಹೊರಡಿಸಲು ಮುಂದಾಗಿರುವರಾಜ್ಯ ಸರ್ಕಾರ ನಿರಪರಾಧಿಗಳಿಗೆ ತೊಂದರೆ ಆಗದಂತೆ ಎಚ್ಚರಿಕೆಯ ಹೆಜ್ಜೆ ಇಡಬೇಕು ಎಂದು ವಿಧಾನಸಭಾ ಸ್ಪೀಕರ್‌ ರಮೇಶ್‌ ಕುಮಾರ್‌ ಸಲಹೆ ನೀಡಿದ್ದಾರೆ.

ಈ ಸಂಬಂಧ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಪತ್ರ ಬರೆದಿದ್ದು,‘ರಾಜ್ಯ ಸರ್ಕಾರ ನೌಕರರ ಸೇವಾ ಜೇಷ್ಠತೆಯನ್ನು ಪರಿಗಣಿಸುವಾಗ ಜಾಗರೂಕತೆಯಿಂದ ಹೆಜ್ಜೆ ಇಡಬೇಕು’ ಎಂದೂ ಹೇಳಿದ್ದಾರೆ.

ಮೇ 27 ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ‘ಕರ್ನಾಟಕ ಸಿವಿಲ್‌ ಸೇವೆಗಳ ಅಧ್ಯಾದೇಶ 2019’ ಮಸೂದೆಯನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಲು ತೀರ್ಮಾನಿಸಲಾಗಿತ್ತು. ಈ ಸಂಬಂಧ ಹಲವು ಶಾಸಕರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ ಎಂದು ರಮೇಶ್‌ ಕುಮಾರ್ ಪತ್ರದಲ್ಲಿ ತಿಳಿಸಿದ್ದಾರೆ.

ADVERTISEMENT

‘ಸರ್ಕಾರಿ ನೌಕರರ ಸೇವಾ ಭದ್ರತೆಯನ್ನು ಒದಗಿಸುವ ಸರ್ಕಾರಿ ನಿರ್ಣಯಕ್ಕೆ ನಮ್ಮ ಆಕ್ಷೇಪ ಇರಬಾರದು. ಆದರೆ, ಸೇವಾ ಜೇಷ್ಠತೆಯನ್ನು ಪರಿಗಣಿಸುವಾಗ ಅತ್ಯಂತ ಜಾಗರೂಕತೆಯಿಂದ ಹೆಜ್ಜೆ ಇಡಬೇಕಾಗುತ್ತದೆ. ಯಾವುದೇ ಒಂದು ಸದುದ್ದೇಶದಿಂದ ಮಾಡುವ ಕೆಲಸ ನಮ್ಮ ಅರಿವಿಲ್ಲದೆ ನಿರಪರಾಧಿಗಳಾದ ಇತರರಿಗೆ ವಿನಾ ಕಾರಣ ಅನ್ಯಾಯ ಆಗದಂತೆ ಜಾಗ್ರತೆ ವಹಿಸಬೇಕು. ಈ ಹಿನ್ನೆಲೆಯಲ್ಲಿ ಶಾಸಕರ ಪತ್ರ ಅವಲೋಕಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.