ADVERTISEMENT

‘ಹೋರಾಟದ ಮೊದಲ ಧ್ವನಿ ಕಸಾಪ’: ಹಿರಿಯ ಸಾಹಿತಿ ದೊಡ್ಡರಂಗೇಗೌಡ ಅಭಿಮತ

​ಪ್ರಜಾವಾಣಿ ವಾರ್ತೆ
Published 5 ಮೇ 2019, 19:17 IST
Last Updated 5 ಮೇ 2019, 19:17 IST
ದೊಡ್ಡರಂಗೇಗೌಡ ಮತ್ತು ಮನು ಬಳಿಗಾರ್‌ ಚರ್ಚಿಸಿದರು (ಎಡದಿಂದ) ಲೇಖಕ ಎಂ.ಜಿ.ನಾಗರಾಜ, ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ರಾಜಶೇಖರ ಹತಗುಂದಿ ಮತ್ತು ವ.ಚ.ಚನ್ನೇಗೌಡ ಇದ್ದರು
ದೊಡ್ಡರಂಗೇಗೌಡ ಮತ್ತು ಮನು ಬಳಿಗಾರ್‌ ಚರ್ಚಿಸಿದರು (ಎಡದಿಂದ) ಲೇಖಕ ಎಂ.ಜಿ.ನಾಗರಾಜ, ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ರಾಜಶೇಖರ ಹತಗುಂದಿ ಮತ್ತು ವ.ಚ.ಚನ್ನೇಗೌಡ ಇದ್ದರು   

ಬೆಂಗಳೂರು: ‘ಕನ್ನಡ ಸಾಹಿತ್ಯ ಪರಿಷತ್ತು ನಾಡು, ನುಡಿ ಸಂಬಂಧಿತ ಸಮಸ್ಯೆಗಳ ವಿರುದ್ಧದ ಹೋರಾಟದಮೊದಲ ಧ್ವನಿ. ಅದಕ್ಕೆ ಪರಂಪರೆಯ ಬೇರಿನ ಜೊತೆಗೆ ಹೊಸ ಚಿಗುರಿನ ಸಂಕಲ್ಪವಿದೆ’ ಎಂದುಸಾಹಿತಿ ದೊಡ್ಡರಂಗೇಗೌಡ ಅಭಿ‍ಪ್ರಾಯಪಟ್ಟರು.

ಕನ್ನಡ ಸಾಹಿತ್ಯ ಪರಿಷತ್ತುನಗರದಲ್ಲಿ ಭಾನುವಾರ ಆಯೋಜಿಸಿದ್ದ ‘ಕನ್ನಡ ಸಾಹಿತ್ಯ ಪರಿಷತ್ತು–105 ಸಂಸ್ಥಾಪನಾ ದಿನಾಚರಣೆ ಒಂದು ಚಿಂತನೆ’ ಉಪನ್ಯಾಸಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ನಾಡಿನ ಸಾಂಸ್ಕೃತಿಕ ಸಂಪತ್ತು ಎನ್ನುವುದಕ್ಕೆ ಕನ್ನಡ ಸಾಹಿತ್ಯ ಪರಿಷತ್ತು ಅನ್ವರ್ಥದಂತಿದೆ. ಬೇರೆ ಯಾವ ರಾಜ್ಯದಲ್ಲೂ ಮಾತೃ ಭಾಷೆಯನ್ನುಪ್ರತಿನಿಧಿಸುವ ಇಷ್ಟು ದೊಡ್ಡ ಸಂಸ್ಥೆ ಇಲ್ಲ.ವಿದ್ವಾಂಸರ ಸಂಸರ್ಗ ಬೆಳಸಿಕೊಂಡು, ಅವರ ಸಲಹೆ ಪಡೆದು ಸರ್ಕಾರದ ಹಂಗಿಲ್ಲದೆ ಸಾಹಿತ್ಯ ಸಮ್ಮೇಳನಗಳನ್ನು ನಡೆಸುವಂತಾಗಬೇಕು’ ಎಂದು ಹೇಳಿದರು.

ADVERTISEMENT

‘ಸರ್.ಎಂ.ವಿಶ್ವೇಶ್ವರಯ್ಯ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪನೆಗೆ ಒತ್ತಾಸೆಯಾಗಿ‌ದ್ದರು. ಆದರೆ, ಇಂದು ಹಲವು ಸಾಹಿತಿಗಳು ಅವರ ಕುರಿತು ಹಗುರವಾಗಿ ಮಾತನಾಡುತ್ತಿರುವುದು ದುರಂತ’ ಎಂದರು.

‘ಕೆಲವುಸಾಹಿತಿಗಳು ಉದ್ದೇಶಪೂರ್ವಕವಾಗಿ ಅದೃಶ್ಯದ ಪರದೆಗಳನ್ನು ಎಳೆದುಕೊಂಡಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನೊಂದಿಗೆ ಗುರುತಿಸಿಕೊಳ್ಳುತ್ತಿಲ್ಲ. ಅವರು ಆರೋಗ್ಯಕರ ಕಣ್ಣಿನಿಂದ ಸಮಾಜವನ್ನು ನೋಡಬೇಕು. ಜಾತ್ಯತೀತವಾಗಿ ಮತ್ತು ಪಕ್ಷಾತೀತವಾಗಿ ಯೋಚಿಸಬೇಕು’ ಎಂದು ಅವರು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಮನು ಬಳಿಗಾರ್ ಮಾತನಾಡಿ, ‘₹30 ಲಕ್ಷ ವೆಚ್ಚದಲ್ಲಿ ದಲಿತ ಸಾಹಿತ್ಯ ಸಂಪುಟಗಳನ್ನು ತರುತ್ತಿದ್ದೇವೆ. ಇನ್ನೂ ಒಂದು ತಿಂಗಳಲ್ಲಿ 15 ಸಂಪುಟಗಳು ಬರಲಿವೆ’ ಎಂದು ಹೇಳಿದರು.

‘ಉದ್ಯೋಗಕ್ಕಾಗಿ ಪ್ರತ್ಯೇಕ ಜಾಲತಾಣವನ್ನು ಆರಂಭಿಸಿದ್ದೇವೆ. ಮೊದಲ ಬಾರಿಗೆ ಕೃಷಿ ಹಾಗೂ ಹಳಗನ್ನಡ ಸಮ್ಮೇಳನಗಳನ್ನು ನಡೆಸಿದ್ದೇವೆ. ಮೈಸೂರಿನ ಭಾರತೀಯ ಭಾಷಾ ಸಂಸ್ಥಾನದ ಜೊತೆ ಒಪ್ಪಂದ ಮಾಡಿಕೊಂಡು 140 ಪುಸ್ತಕಗಳನ್ನು ಡಿಜಿಟಲೀಕರಣ ಮಾಡುತ್ತಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.