ADVERTISEMENT

ಕತ್ತಲಿನಲ್ಲಿಟ್ಟು ಆಡಳಿತ ನಡೆಸಿದರು: ಕಸಾಪ ಅಧ್ಯಕ್ಷರ ವಿರುದ್ಧ ಕ್ರಮಕ್ಕೆ ಮನವಿ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2025, 23:30 IST
Last Updated 29 ಅಕ್ಟೋಬರ್ 2025, 23:30 IST
ಎಂ.ಪ್ರಕಾಶಮೂರ್ತಿ ಮನವಿ ಪತ್ರ ಪ್ರದರ್ಶಿಸಿದರು. ಡಿ.ಮಂಜುನಾಥ್, ಮಡ್ಡೀಕೆರೆ ಗೋಪಾಲ್, ಕೇಶವ ಕಾಮತ್, ಬಿ.ಎನ್‌.ವಾಸರೆ, ತಮಿಳು ಸೆಲ್ವಿ ಮತ್ತು ಸಿದ್ದಪ್ಪ ಹೊಟ್ಟಿ ಉಪಸ್ಥಿತರಿದ್ದರು
ಎಂ.ಪ್ರಕಾಶಮೂರ್ತಿ ಮನವಿ ಪತ್ರ ಪ್ರದರ್ಶಿಸಿದರು. ಡಿ.ಮಂಜುನಾಥ್, ಮಡ್ಡೀಕೆರೆ ಗೋಪಾಲ್, ಕೇಶವ ಕಾಮತ್, ಬಿ.ಎನ್‌.ವಾಸರೆ, ತಮಿಳು ಸೆಲ್ವಿ ಮತ್ತು ಸಿದ್ದಪ್ಪ ಹೊಟ್ಟಿ ಉಪಸ್ಥಿತರಿದ್ದರು   

ಬೆಂಗಳೂರು: ‘ಕನ್ನಡ ಸಾಹಿತ್ಯ ಪರಿಷತ್ತಿನ (ಕಸಾಪ) ಅಧ್ಯಕ್ಷ ಮಹೇಶ ಜೋಶಿ ಅವರು ಚುನಾಯಿತ ಪ್ರತಿನಿಧಿಗಳಾದ ನಮ್ಮನ್ನು ಕತ್ತಲಿನಲ್ಲಿಟ್ಟು ಆಡಳಿತ ನಡೆಸಿದ್ದಾರೆ. ಅವರ ತಪ್ಪುಗಳನ್ನು ಬಯಲಿಗೆಳೆಯುವ ಮೂಲಕ ಪರಿಷತ್ತಿನ ಪಾವಿತ್ರ್ಯ ಮತ್ತು ಘನತೆಯನ್ನು ಕಾಪಾಡಬೇಕು’ ಎಂದು ಕಸಾಪ ಜಿಲ್ಲಾ ಹಾಗೂ ಗಡಿನಾಡು ಘಟಕಗಳ ಅಧ್ಯಕ್ಷರು ಆಗ್ರಹಿಸಿದ್ದಾರೆ. 

ಈ ಬಗ್ಗೆ ಕಸಾಪ ಬೆಂಗಳೂರು ನಗರ ಘಟಕದ ಎಂ.ಪ್ರಕಾಶಮೂರ್ತಿ, ಶಿವಮೊಗ್ಗ ಘಟಕದ ಡಿ.ಮಂಜುನಾಥ್, ಮೈಸೂರು ಘಟಕದ ಮಡ್ಡೀಕೆರೆ ಗೋಪಾಲ್, ಕೊಡಗು ಘಟಕದ ಕೇಶವ ಕಾಮತ್, ಉತ್ತರ ಕನ್ನಡ ಘಟಕದ ಬಿ.ಎನ್‌.ವಾಸರೆ, ತಮಿಳುನಾಡು ಘಟಕದ ತಮಿಳ್ ಸೆಲ್ವಿ ಹಾಗೂ ಯಾದಗಿರಿ ಘಟಕದ ಸಿದ್ದಪ್ಪ ಹೊಟ್ಟಿ ಅವರು ಆಡಳಿತಾಧಿಕಾರಿ ಕೆ.ಎಂ. ಗಾಯಿತ್ರಿ ಅವರಿಗೆ ಮನವಿ ಸಲ್ಲಿಸಿದ್ದಾರೆ. 

‘ಕಸಾಪ ಅಧ್ಯಕ್ಷರ ಆರ್ಥಿಕ ಅಶಿಸ್ತು ಮತ್ತು ದುರಾಡಳಿತದ ಕಾರಣದಿಂದಾಗಿ ನೇಮಕಗೊಂಡಿರುವ ಆಡಳಿತಾಧಿಕಾರಿ ಅವರು ನಿಷ್ಪಕ್ಷಪಾತ ಮತ್ತು ನ್ಯಾಯಬದ್ಧವಾದ ವಿಚಾರಣೆ ನಡೆಸಿ, ಅಧ್ಯಕ್ಷರಿಂದ ಆಗಿರುವ ತಪ್ಪುಗಳನ್ನು ಬಯಲಿಗೆಳೆಯಬೇಕು. ಅವರ ತಪ್ಪುಗಳು ಸಾಬೀತಾದಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಅಗತ್ಯ ಬಿದ್ದಲ್ಲಿ ನಾವು ಸಹ ನ್ಯಾಯಸಮ್ಮತ ಕಾನೂನು ಹೋರಾಟಕ್ಕೆ ಸಹಕರಿಸುತ್ತೇವೆ’ ಎಂದು ಹೇಳಿದ್ದಾರೆ.

ADVERTISEMENT

‘ಕಳೆದ ಮೂರು ವರ್ಷ ಹನ್ನೊಂದು ತಿಂಗಳ ಅವಧಿಯಲ್ಲಿ ಮಹೇಶ ಜೋಶಿ ಅವರು ತೆಗೆದುಕೊಂಡ ಏಕಸ್ವಾಮ್ಯ ತೀರ್ಮಾನ, ಕಾನೂನು ಬಾಹಿರವಾದ ಬೈ–ಲಾ ತಿದ್ದುಪಡಿಯನ್ನು ರದ್ದು ಮಾಡಬೇಕು. ಅಲ್ಲದೆ, ಈವರೆಗೆ ಅವರು ತೆಗೆದುಕೊಂಡಿರುವ ಆರ್ಥಿಕ ಹಾಗೂ ಆಡಳಿತಾತ್ಮಕ ನಿರ್ಧಾರಗಳಿಗೆ ಸಂಬಂಧಿಸಿದಂತೆ ನಾವು ನೀಡಿದ ಯಾವುದೇ ಸಲಹೆ, ಸೂಚನೆ, ಅಭಿಪ್ರಾಯಗಳನ್ನು ಅವರು ಪ‍ರಿಗಣಿಸಿರಲಿಲ್ಲ. ಆದ್ದರಿಂದ ಅವರು ತೆಗೆದುಕೊಂಡಿರುವ ಎಲ್ಲ ತೀರ್ಮಾನಗಳಿಗೂ ಅವರೊಬ್ಬರೇ ನೇರ ಹೊಣೆ. ಇದರಲ್ಲಿ ನಾವುಗಳು ಯಾವುದೇ ರೀತಿಯಲ್ಲೂ ಭಾಗೀದಾರರಲ್ಲ’ ಎಂದು ತಿಳಿಸಿದ್ದಾರೆ. 

‘ಬಳ್ಳಾರಿಯಲ್ಲಿ ನಡೆಯಲಿರುವ 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಂಬಂಧಿಸಿದಂತೆ ನೀಡಲಾಗುವ ಜವಾಬ್ದಾರಿಗಳನ್ನು ನಿರ್ವಹಿಸಲು ಸಿದ್ಧರಿದ್ದೇವೆ. ಜಿಲ್ಲಾ ಮತ್ತು ಗಡಿನಾಡು ಘಟಕಗಳ ಪೂರ್ವನಿಯೋಜಿತ ಕಾರ್ಯಕ್ರಮಗಳಾದ ಸಮ್ಮೇಳನಗಳು, ವಿಚಾರಸಂಕಿರಣ, ದತ್ತಿ ಕಾರ್ಯಕ್ರಮ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ಅಗತ್ಯ ಅನುದಾನ ಒದಗಿಸಬೇಕು’ ಎಂದು ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.