ADVERTISEMENT

ಸರ್ಕಾರಿ ಗೌರವ‌ದೊಂದಿಗೆ ಬೆಂಗಳೂರಿನಲ್ಲಿ ವಿಜ್ಞಾನಿ ಕಸ್ತೂರಿರಂಗನ್ ಅಂತ್ಯಕ್ರಿಯೆ

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2025, 15:07 IST
Last Updated 27 ಏಪ್ರಿಲ್ 2025, 15:07 IST
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಸ್ರೊ ಮಾಜಿ ಅಧ್ಯಕ್ಷ ಕೆ.ಕಸ್ತೂರಿ ರಂಗನ್ ಅವರ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಸ್ರೊ ಮಾಜಿ ಅಧ್ಯಕ್ಷ ಕೆ.ಕಸ್ತೂರಿ ರಂಗನ್ ಅವರ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು.   

ಬೆಂಗಳೂರು: ಶುಕ್ರವಾರ ನಿಧನರಾದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ(ಇಸ್ರೊ) ಮಾಜಿ ಅಧ್ಯಕ್ಷ ಕೆ. ಕಸ್ತೂರಿರಂಗನ್ ಅವರ ಅಂತ್ಯಕ್ರಿಯೆಯು ಭಾನುವಾರ ಮಧ್ಯಾಹ್ನ 2.30ರ ವೇಳೆಗೆ ಹೆಬ್ಬಾಳದ ಚಿತಾಗಾರದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು.

ಇದಕ್ಕೂ ಮುನ್ನ ಕಸ್ತೂರಿರಂಗನ್ ಅವರ ಪಾರ್ಥಿವ ಶರೀರವನ್ನು ಸದಾಶಿವನಗರದ ರಾಮನ್‌ ರೀಸರ್ಚ್‌ ಇನ್‌ಸ್ಟಿಟ್ಯೂಟ್ ಆವರಣದಲ್ಲಿ ಬೆಳಿಗ್ಗೆ 9ರಿಂದ 12ರ ವರೆಗೆ ಸಾರ್ವಜನಿಕ ದರ್ಶನಕ್ಕೆ ಇಡಲಾಗಿತ್ತು.

ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವರಾದ ಎಚ್‌.ಸಿ. ಮಹದೇವಪ್ಪ, ಬೋಸರಾಜು, ಜಮೀರ್ ಅಹಮದ್ ಖಾನ್, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ಶಾಸಕ ಸಿ.ಎನ್‌. ಅಶ್ವತ್ಥ ನಾರಾಯಣ ಸೇರಿದಂತೆ ಹಲವು ರಾಜಕೀಯ ನಾಯಕರು ಅಂತಿಮ ನಮನ ಸಲ್ಲಿಸಿದರು.

ADVERTISEMENT

ಶಿಕ್ಷಣ ತಜ್ಞ ಎಂ.ಕೆ. ಶ್ರೀಧರ್, ಇಸ್ರೊ ಸಂಸ್ಥೆಯ ಹಾಲಿ ಹಾಗೂ ಮಾಜಿ ವಿಜ್ಞಾನಿಗಳಿಗಳು, ವಿವಿಧ ಕ್ಷೇತ್ರಗಳಲ್ಲಿನ ಒಡನಾಡಿಗಳು ಅಂತಿಮ ದರ್ಶನ ಪಡೆದರು.

ಪಾರ್ಥಿವ ಶರೀರದ ಮೇಲೆ ತ್ರಿವರ್ಣ ಧ್ವಜವನ್ನು ಹೊದಿಸಲಾಯಿತು. ಪೊಲೀಸರು ಗೌರವಾರ್ಥ ಮೂರು ಸುತ್ತು ಕುಶಾಲು ತೋಪು ಹಾರಿಸಿದರು. ನಂತರ ಪಾರ್ಥಿವ ಶರೀರವನ್ನು ಹೆಬ್ಬಾಳದ ಚಿತಾಗಾರಕ್ಕೆ ಕೊಂಡೊಯ್ದು, ಅಂತಿಮ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು. ಪುತ್ರರಾದ ಸಂಜಯ್ ಮತ್ತು ರಾಜೇಶ್ ಅವರು ಚಿತೆಗೆ ಅಗ್ನಿಸ್ಪರ್ಶ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.