ADVERTISEMENT

ತಂತ್ರಜ್ಞಾನ ಆಧಾರಿತ ಚಿಕಿತ್ಸೆ ಲಭ್ಯವಾಗಲಿ: ಮುಖ್ಯ ಚುನಾವಣಾ ಅಧಿಕಾರಿ ಮೀನಾ ಅಭಿಮತ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2024, 16:06 IST
Last Updated 23 ಆಗಸ್ಟ್ 2024, 16:06 IST
ಕಾವೇರಿ ಆಸ್ಪತ್ರೆಯಲ್ಲಿ ರೋಬೊಟಿಕ್ಸ್ ತಂತ್ರಜ್ಞಾನ ಆಧಾರಿತ ಚಿಕಿತ್ಸಾ ವ್ಯವಸ್ಥೆಗೆ ಮನೋಜ್ ಕುಮಾರ್ ಮೀನಾ ಚಾಲನೆ ನೀಡಿದರು. ಕಾವೇರಿ ಆಸ್ಪತ್ರೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ.ವಿಜಯ್ ಭಾಸ್ಕರ್, ಮೂಳೆ ಚಿಕಿತ್ಸೆ ವಿಭಾಗದ ಮುಖ್ಯಸ್ಥ ಡಾ. ರಘು ನಾಗರಾಜ್ ಹಾಗೂ ವೈದ್ಯರು ಉಪಸ್ಥಿತರಿದ್ದರು.
ಕಾವೇರಿ ಆಸ್ಪತ್ರೆಯಲ್ಲಿ ರೋಬೊಟಿಕ್ಸ್ ತಂತ್ರಜ್ಞಾನ ಆಧಾರಿತ ಚಿಕಿತ್ಸಾ ವ್ಯವಸ್ಥೆಗೆ ಮನೋಜ್ ಕುಮಾರ್ ಮೀನಾ ಚಾಲನೆ ನೀಡಿದರು. ಕಾವೇರಿ ಆಸ್ಪತ್ರೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ.ವಿಜಯ್ ಭಾಸ್ಕರ್, ಮೂಳೆ ಚಿಕಿತ್ಸೆ ವಿಭಾಗದ ಮುಖ್ಯಸ್ಥ ಡಾ. ರಘು ನಾಗರಾಜ್ ಹಾಗೂ ವೈದ್ಯರು ಉಪಸ್ಥಿತರಿದ್ದರು.   

ಬೆಂಗಳೂರು: ‘ಆಧುನಿಕ ತಂತ್ರಜ್ಞಾನ ಆಧಾರಿತ ಚಿಕಿತ್ಸೆ, ಶಸ್ತ್ರಚಿಕಿತ್ಸೆ ಹಾಗೂ ಆರೈಕೆ ಸೌಲಭ್ಯಗಳು ಜನಸಾಮಾನ್ಯರಿಗೂ ಸುಲಭವಾಗಿ ಲಭ್ಯವಾಗಬೇಕು’ ಎಂದು ಕರ್ನಾಟಕ ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ತಿಳಿಸಿದರು.

ಮಾರತ್ತಹಳ್ಳಿಯ ಕಾವೇರಿ ಆಸ್ಪತ್ರೆಯು ಕೀಲು ಜೋಡಣೆ, ಮೂಳೆ ಶಸ್ತ್ರಚಿಕಿತ್ಸೆಗೆ ಅಳವಡಿಸಿಕೊಂಡಿರುವ ರೋಬೊಟಿಕ್ಸ್ ತಂತ್ರಜ್ಞಾನ ವ್ಯವಸ್ಥೆಗೆ ಶುಕ್ರವಾರ ಚಾಲನೆ ನೀಡಿ, ಮಾತನಾಡಿದರು. 

‘ವೈದ್ಯಕೀಯ ಕ್ಷೇತ್ರದಲ್ಲಿ ತಂತ್ರಜ್ಞಾನ ಅಳವಡಿಕೆಯ ಕಾರ್ಯ ವೇಗವಾಗಿ ನಡೆಯುತ್ತಿದೆ. ಯಂತ್ರ ಚಾಲಿತ ಉಪಕರಣಗಳು, ಕೃತಕ ಬುದ್ಧಿಮತ್ತೆ ಹಾಗೂ ರೋಬೊಟಿಕ್ ತಂತ್ರಜ್ಞಾನ ಚಿಕಿತ್ಸೆಯಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತಿವೆ. ಇದರಿಂದ ಸುಲಭವಾಗಿ ಕಾಯಿಲೆ ಪತ್ತೆ, ನಿಖರ ಚಿಕಿತ್ಸೆ, ಶಸ್ತ್ರಚಿಕಿತ್ಸೆ ಹಾಗೂ ಉತ್ತಮ ಆರೈಕೆ ಸಾಧ್ಯವಾಗುತ್ತಿದೆ. ಜನಸಾಮಾನ್ಯರಿಗೆ ಕೈಗೆಟಕುವ ದರದಲ್ಲಿ ಗುಣಮಟ್ಟದ ಆರೋಗ್ಯ ಸೇವೆ ಒದಗಿಸಲೂ ತಂತ್ರಜ್ಞಾನ ಸಹಕಾರಿಯಾಗಿದೆ’ ಎಂದು ಹೇಳಿದರು.

ADVERTISEMENT

‘ವೇಗವಾಗಿ ಪ್ರಗತಿಯಾಗುತ್ತಿರುವ ತಂತ್ರಜ್ಞಾನವನ್ನು ವೈದ್ಯಕೀಯ ಕ್ಷೇತ್ರದಲ್ಲಿ ಅಳವಡಿಸಿಕೊಳ್ಳುವ ಜತೆಗೆ ಅದರ ಪ್ರಯೋಜನ ಜನಸಾಮಾನ್ಯರಿಗೂ ಲಭ್ಯವಾಗುವಂತೆ ನೋಡಿಕೊಳ್ಳಬೇಕು. ಜನರ ಆರೋಗ್ಯ ಕಾಪಾಡಿದಲ್ಲಿ ಉತ್ತಮ ರಾಷ್ಟ್ರ ನಿರ್ಮಾಣ ಸಾಧ್ಯ’ ಎಂದು ತಿಳಿಸಿದರು.

‘ಮೂಳೆ ಚಿಕಿತ್ಸೆಗೆ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಆಧಾರಿತ ರೋಬೊಟಿಕ್ ತಂತ್ರಜ್ಞಾನವನ್ನು ಆಸ್ಪತ್ರೆಯಲ್ಲಿ ಅಳವಡಿಸಿಕೊಳ್ಳಲಾಗಿದೆ. ಇದು ಮಂಡಿನೋವು ಚಿಕಿತ್ಸೆ, ಅಪಘಾತಗಳಲ್ಲಿ ಸಂಭವಿಸುವ ಗಾಯಗಳ ಚಿಕಿತ್ಸೆ, ಕೀಲು ಜೋಡಣೆ ಮೊದಲಾದ ಶಸ್ತ್ರಚಿಕಿತ್ಸೆಗಳಿಗೆ ಅನುಕೂಲಕರವಾಗಿದೆ. ರೋಗಿಯು ವೇಗವಾಗಿ ಗುಣಮುಖ ಹೊಂದಿ, ದೈನಂದಿನ ಕೆಲಸಗಳಲ್ಲಿ ತೊಡಗಿಸಿಕೊಳ್ಳಲು ಸಹಕಾರಿ’ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.