
ಬೆಂಗಳೂರು: ಮಲ್ಲತ್ತಹಳ್ಳಿಯ ಕಲಾ ಗ್ರಾಮದಲ್ಲಿ ಯು.ಆರ್. ಅನಂತಮೂರ್ತಿ ಮತ್ತು ಜಿ.ಎಸ್. ಶಿವರುದ್ರಪ್ಪ ಅವರ ಅಂತ್ಯಸಂಸ್ಕಾರ ನಡೆದಿದ್ದ ಸ್ಥಳದಲ್ಲಿನ ಕಟ್ಟೆಯನ್ನು ವೇದಿಕೆಯನ್ನಾಗಿ ಪರಿವರ್ತಿಸಿದ ಸಾಹಿತಿಗಳು ಹಾಗೂ ಸಾಮಾಜಿಕ ಕಾರ್ಯಕರ್ತರು, ಅಲ್ಲಿಯೇ ಕವಿಗೋಷ್ಠಿ ನಡೆಸುವ ಮೂಲಕ ನುಡಿ ನಮನ ಸಲ್ಲಿಸಿದರು.
ಸಮಾನ ಮನಸ್ಕರು ಡಾ.ಜಿ.ಎಸ್. ಶಿವರುದ್ರಪ್ಪ ಮತ್ತು ಡಾ.ಯು.ಆರ್. ಅನಂತಮೂರ್ತಿಯವರ ಪುಣ್ಯಸ್ಥಳ ಗೌರವ ಕ್ರಿಯಾ ಸಮಿತಿ ರಚಿಸಿಕೊಂಡಿದ್ದು, ಕೆಲ ದಿನಗಳ ಹಿಂದೆ ಅಂತ್ಯಸಂಸ್ಕಾರ ನಡೆದಿದ್ದ ಸ್ಥಳದಲ್ಲಿನ ಕಟ್ಟೆಗೆ ನಾಮಫಲಕ ಹಾಗೂ ಭಾವಚಿತ್ರವನ್ನು ಅಳವಡಿಸಿದ್ದರು. ಶಿವರುದ್ರಪ್ಪ ಅವರ 96ನೇ ಜಯಂತಿಯ ಪ್ರಯುಕ್ತ ಅಲ್ಲಿ ವಿಶೇಷ ಕಾರ್ಯಕ್ರಮ ನಡೆಸಿದರು.
ವಡ್ಡಗೆರೆ ನಾಗರಾಜಯ್ಯ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ 20 ಕವಿಗಳು ಕವನ ವಾಚನ ಮಾಡಿದರು. ಸಂತವಾಣಿ ಪಿ. ಸುಧಾಕರ್ ಮತ್ತು ಡಾ. ನಾಗೇಶ್ ಕೆ.ಎನ್ ಅವರ ಸುಗಮ ಸಂಗೀತ ಕಲಾವಿದರ ತಂಡದ ಗಾಯಕರು ಶಿವರುದ್ರಪ್ಪ ಅವರ ಹಲವಾರು ಭಾವಗೀತೆಗಳನ್ನು ಹಾಡಿದರು. ಕಲಾವಿದ ಸಿ. ಚಂದ್ರ ಶೇಖರ್, ಸಾಹಿತಿ ಬಿ.ಟಿ. ಲಲಿತಾ ನಾಯಕ್, ರಂಗ ಕಲಾವಿದೆ ಮಾಲತಿ ಸುಧೀರ್, ಮಲ್ಲಿಕಾರ್ಜುನಸ್ವಾಮಿ ಮಹಾಮನೆ, ಸುನೀತಾ ರಾಮಾಚಾರಿ, ತಿಮ್ಮಯ್ಯ, ಫಾಲನೇತ್ರ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.