ADVERTISEMENT

‘ಬಾಲಕಿ ತೀರಿಕೊಂಡಾಗ ಬಿಕ್ಕಿ ಬಿಕ್ಕಿ ಅತ್ತಿದ್ದ ವಿಜಯ್: ಕವಿರಾಜ್

ನೊಂದವರಿಗೆ 'ಉಸಿರು‘ ಹಂಚುತ್ತಿದ್ದ ಸಂಚಾರಿ ವಿಜಯ್‌

ಜಿ.ಶಿವಕುಮಾರ
Published 15 ಜೂನ್ 2021, 20:58 IST
Last Updated 15 ಜೂನ್ 2021, 20:58 IST
ಬಾಲಕಿ ಜೊತೆ ಸಂಚಾರಿ ವಿಜಯ್
ಬಾಲಕಿ ಜೊತೆ ಸಂಚಾರಿ ವಿಜಯ್   

ಬೆಂಗಳೂರು: ‘ಸಂಚಾರಿ ವಿಜಯ್‌ ಸಿನಿಮಾದಲ್ಲಷ್ಟೇ ಅಲ್ಲ, ನಿಜ ಜೀವನದಲ್ಲೂ ನಾಯಕರಾಗಿದ್ದರು. ಕೋವಿಡ್‌ನಿಂದಾಗಿ ಜೀವನ್ಮರಣದ ನಡುವೆ ಹೋರಾಡುತ್ತಿದ್ದ 12 ವರ್ಷದ ಹುಡುಗಿಯೊಬ್ಬಳನ್ನು ಉಳಿಸಲು ತುಂಬಾ ಪ್ರಯತ್ನ ಪಟ್ಟಿದ್ದರು. ಸತತ ಮೂರು ದಿನ ಹಗಲು ರಾತ್ರಿ ಎನ್ನದೇ, ಸರಿಯಾಗಿ ಊಟ, ನಿದ್ರೆ ಕೂಡ ಮಾಡದೇ ಓಡಾಡಿದ್ದರು. ಕೊನೆಗೂ ಆ ಹುಡುಗಿ ಬದುಕಲಿಲ್ಲ. ಆಗ ಬಿಕ್ಕಿ ಬಿಕ್ಕಿ ಅತ್ತಿದ್ದರು. ಅವರನ್ನು ನಾವೇ ಸಮಾಧಾನಪಡಿಸಬೇಕಾಗಿತ್ತು’ ...

ಚಿತ್ರ ಸಾಹಿತಿ ಕವಿರಾಜ್‌ ಹೀಗೆ ಹೇಳುವಾಗ ಅವರ ಮನಸ್ಸು ಭಾರವಾದಂತಿತ್ತು.

‘ನಾವು ‘ಉಸಿರು’ ತಂಡ ಕಟ್ಟಿ ಕೊಂಡು ಕೆಲಸ ಮಾಡುತ್ತಿರುವುದು ಗೊತ್ತಾದ ಬಳಿಕ ಸಂದೇಶ ರವಾನಿಸಿದ್ದ ಅವರು ನನ್ನನ್ನೂ ನಿಮ್ಮ ತಂಡದಲ್ಲಿ ಸೇರಿಸಿಕೊಳ್ಳಿ ಎಂದು ವಿನಮ್ರದಿಂದ ವಿನಂತಿಸಿದ್ದರು. ತಾನು ರಾಷ್ಟ್ರಪ್ರಶಸ್ತಿ ವಿಜೇತ ನಟ ಎಂಬ ಅಹಂ ಅವರಲ್ಲಿ ಕಿಂಚಿತ್ತೂ ಇರಲಿಲ್ಲ. ಆಹಾರದ ಕಿಟ್‌ ಗಾಗಿ ರಾಜ್ಯದ ವಿವಿಧೆಡೆಯಿಂದ ಕರೆಗಳು ಬರುತ್ತಿದ್ದವು. ಅಲ್ಲಿಗೆ ತಾವೇ ಹೊರಟು ಬಿಡುತ್ತಿದ್ದರು. ನೀವು ಬೇಡ ಬೇರೆ ಯಾರನ್ನಾದರೂ ಕಳಿಸೋಣ ವೆಂದರೂ ಒಪ್ಪುತ್ತಿರ ಲಿಲ್ಲ. ನಾನೇ ಹೋಗುತ್ತೇನೆ ಎಂದು ಹಟ ಹಿಡಿದುಬಿಡುತ್ತಿದ್ದರು. ಆಶ್ಚರ್ಯಪಡುವಷ್ಟು ಒಳ್ಳೆಯತನ ಅವರಲ್ಲಿತ್ತು’ ಎಂದು ಸ್ಮರಿಸಿದರು.

ADVERTISEMENT

‘ಕಷ್ಟದಲ್ಲಿರುವವರಿಗೆ ಸಹಾಯ ಮಾಡಲು ಸದಾ ಹಾತೊರೆಯುತ್ತಿದ್ದರು. ಎಷ್ಟೇ ಹೊತ್ತಾದರೂ ಸರಿ ಅಪರಿಚಿತರ ಮನೆ ಬಾಗಿಲು ತಟ್ಟಿ ಆಹಾರದ ಕಿಟ್‌ ಕೊಟ್ಟು ಬರುತ್ತಿದ್ದರು. ನಟನೆಯ ಜೊತೆಗೆ ಸಮಾಜ ಸೇವೆಗೂ ತಮ್ಮನ್ನು ಸಮರ್ಪಿಸಿಕೊಂಡಿದ್ದರು. ತಂಡದಲ್ಲಿ ಸಾಮಾನ್ಯ ಕೆಲಸಗಾರನ ಹಾಗೆ ಇದ್ದರು. ಅವರ ಒಳ್ಳೆಯ ಗುಣಗಳನ್ನು ನೋಡಿ ನಾನು ದಂಗಾಗಿದ್ದೆ. ಕಿಟ್‌ಗಳು ಅರ್ಹರ ಕೈ ಸೇರುತ್ತಿಲ್ಲ ಎಂಬ ಭಾವನೆ ಅವರಲ್ಲಿ ಮೂಡಿತ್ತು. ಅದನ್ನು ನಮ್ಮ ಬಳಿ ಹೇಳಿಕೊಂಡಿದ್ದರು. ನಂತರ ನಾವೇ ಬಂಡೀಪುರ, ನಾಗರಹೊಳೆಗೆ ಹೋಗಿ ಅಲ್ಲಿನ ಹಾಡಿಗಳಲ್ಲಿ ವಾಸಿಸುತ್ತಿದ್ದ ಆದಿವಾಸಿಗಳಿಗೆ ಕಿಟ್‌ ವಿತರಿಸಿದ್ದೆವು’ ಎಂದು ನೆನಪಿಸಿಕೊಂಡರು.

‘ಆದಿವಾಸಿಗಳ ಮನೆಯ ಮೇಲ್ಚಾ ವಣಿಗಳು ಕಿತ್ತು ಹೋಗಿರುವುದನ್ನು ಕಂಡು ತುಂಬಾ ನೊಂದಿದ್ದರು. ಅವರ ಮನೆಗಳಿಗೆಲ್ಲಾ ಟಾರ್ಪಾಲಿನ್‌ ಹಾಕಿಸ ಬೇಕು ಎಂಬ ಆಸೆ ಅವರಿಗಿತ್ತು. ಅದು ಸಾಕಾರಗೊಳ್ಳುವ ಮುನ್ನವೇ ಹೋಗಿಬಿಟ್ಟರು. ಅವರ ಆಸೆ ನಾವು ಈಡೇರಿಸುತ್ತೇವೆ’ ಎಂದರು.

‘ರಾತ್ರಿ2 ಅಥವಾ 3 ಗಂಟೆಯೇ ಆಗಿರಲಿ, ಯಾರು ಎಲ್ಲೇ ಕರೆದರೂ ಒಂದಿಷ್ಟೂ ಯೋಚಿಸದೆ ಬೈಕ್‌ ಅಥವಾ ಕಾರು ಹತ್ತಿ ಹೊರಟೇ ಬಿಡು ತ್ತಿದ್ದರು. ಸಿನಿಮಾವೊಂದಕ್ಕೆ ತಾವು ತೆಗೆದು ಕೊಳ್ಳುವ ಸಂಭಾವನೆಯ ಒಂದಷ್ಟು ಮೊತ್ತವನ್ನು ಸಮಾಜ ಸೇವೆಗಾಗಿಯೇ ಮೀಸಲಿಟ್ಟಿದ್ದರು. ಆ ಕ್ಷಣಕ್ಕೆ ತಮ್ಮ ಬಳಿ ಹಣ ಇಲ್ಲದಿದ್ದರೆ ಸ್ನೇಹಿತರಿಂದ ಪಡೆದು ಕಷ್ಟದಲ್ಲಿದ್ದವರಿಗೆ ಕೊಡುತ್ತಿದ್ದರು. ಅವರು ಅಷ್ಟು ಉದಾರಿ. ಅಂತಹ ಒಳ್ಳೆಯ ವ್ಯಕ್ತಿಯನ್ನು ಭಗವಂತ ಇಷ್ಟು ಬೇಗ ಕರೆದುಕೊಳ್ಳಬಾರದಿತ್ತು’
ಎನ್ನುತ್ತಾ ಸ್ನೇಹಿತರೊಬ್ಬರು ಭಾವುಕರಾದರು.

‘ಕೋವಿಡ್‌ ಎರಡನೇ ಅಲೆ ವೇಳೆ ಅವರು ಒಂದೇ ಒಂದು ದಿನ ಮನೆಯಲ್ಲಿದ್ದವರಲ್ಲ. ಕೊಡಗು ದುರಂತ ಹಾಗೂ ಉತ್ತರ ಕರ್ನಾಟಕದಲ್ಲಿ ನೆರೆ ಹಾವಳಿಯಿಂದ ಜನ ಸಂಕಷ್ಟಕ್ಕೆ ಸಿಲುಕಿದ್ದಾಗಲೂ ಆಹಾರದ ಕಿಟ್‌ಗಳಿದ್ದ ಕಾರನ್ನು ತಾವೇ ಚಲಾಯಿಸಿಕೊಂಡು ಹೋಗಿ ಅವುಗಳನ್ನು ಕೊಟ್ಟು ಬಂದಿ ದ್ದರು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.