ಬೆಂಗಳೂರು: ‘ಕಲೆ, ಸಾಹಿತ್ಯ, ನಾಟಕ, ಕಾವ್ಯ ಹಾಗೂ ಇತರೆ ಸೃಜನಶೀಲ ಕ್ಷೇತ್ರಗಳು ಇತ್ತೀಚಿನ ದಿನಗಳಲ್ಲಿ ರಾಜಕೀಯ ಪ್ರೇರಿತವಾಗಿ ವಿಷಪೂರಿತಗೊಂಡಿವೆ’ ಎಂದು ಸಾಹಿತಿ ಬಾನು ಮುಷ್ತಾಕ್ ಬೇಸರ ವ್ಯಕ್ತಪಡಿಸಿದರು.
ನಗರದ ಚಿತ್ರಕಲಾ ಪರಿಷತ್‌ನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘ಕಾವ್ಯ ಸಂಜೆ ದಶಮಾನೋತ್ಸವ ಸಂಭ್ರಮ; ಕಾವ್ಯ ಹಬ್ಬ’ವನ್ನು ಸ್ವರಚಿತ ‘ಒದ್ದೆ ಕಣ್ಣಿನ ಬಾಗಿನ’ ಕವಿತೆ ವಾಚಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
‘ಭಾರತೀಯ ಸಮಾಜ ಹಿಮ್ಮುಖವಾಗಿ ಚಲಿಸುತ್ತಿದೆ. ಅಧಿಕಾರ ರಾಜಕಾರಣದ ಲಾಲಸೆ ಹಾಗೂ ಸ್ವಾರ್ಥತೆಯಿಂದ ಕೂಡಿದ ವ್ಯಾಮೋಹಗಳು ಸಾಮಾಜಿಕ, ಸಾಂಸ್ಕೃತಿಕ ಬೇರುಗಳಿಗೂ ವ್ಯಾಪಿಸಿವೆ. ಚರಿತ್ರೆಯ ವ್ಯಕ್ತಿಗಳನ್ನು, ಘಟನೆಗಳನ್ನು, ಕಾಲಘಟ್ಟವನ್ನು ಮತ್ತು ಐತಿಹ್ಯಗಳನ್ನು ಹುಡುಕಿ ತೆಗೆದು ವಿಕೃತವನ್ನಾಗಿ ಮಾಡುವ ದುರುದ್ದೇಶಪೂರಿತ ತಂತ್ರಗಾರಿಕೆಯಿಂದ ವರ್ತಮಾನದ ನೆಲೆಗಳು ಈಗಾಗಲೇ ಕಲುಷಿತವಾಗಿವೆ’ ಎಂದೂ ಅವರು ಹೇಳಿದರು.
ವಿಚ್ಛೇದನಗಳಿಗೆ ಮೊಬೈಲ್ ಕಾರಣ: ‘ಇಂದಿನ ಮೊಬೈಲ್ ಹಾಗೂ ಸಂವಹನಗಳು, ಎಷ್ಟೋ ಬಾಳುಗಳನ್ನು ನಾಶ ಮಾಡುತ್ತಿವೆ. ಶೇ 50ಕ್ಕಿಂತ ಹೆಚ್ಚು ವಿಚ್ಛೇದನಗಳಿಗೆ ಮೊಬೈಲ್ ಕಾರಣವಾಗುತ್ತಿರುವುದನ್ನು ವಕೀಲೆಯಾಗಿ ನಾನು ನೋಡುತ್ತಿದ್ದೇನೆ’ ಎಂದು ಬಾನು ಮುಷ್ತಾಕ್ ತಿಳಿಸಿದರು.
ಕಾವ್ಯ ಹಬ್ಬದಲ್ಲಿ 6 ಕಾವ್ಯ ಗೋಷ್ಠಿಗಳು ನಡೆದವು. ಹಲವು ಕವಿಗಳು ಸ್ವರಚಿತ ಕವಿತೆಗಳನ್ನು ವಾಚಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.