ADVERTISEMENT

ಕೆ.ಸಿ.ಜನರಲ್‌ ಆಸ್ಪತ್ರೆಯಲ್ಲಿ ಜಯದೇವ ಹೃದ್ರೋಗ ಘಟಕ

50 ಹಾಸಿಗೆ ಸಾಮರ್ಥ್ಯದ ಘಟಕ ಆಗಸ್ಟ್‌ನಲ್ಲಿ ಆರಂಭ: ಉಭಯ ಆಸ್ಪತ್ರೆಗಳ ಮುಖ್ಯಸ್ಥರಿಂದ ಒಪ್ಪಂದಕ್ಕೆ ಸಹಿ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2021, 18:33 IST
Last Updated 30 ಮಾರ್ಚ್ 2021, 18:33 IST
ಒಪ್ಪಂದ ಪತ್ರವನ್ನು ಡಾ.ಸಿ.ಎನ್‌.ಮಂಜುನಾಥ್‌ ಹಾಗೂ ಡಾ.ವೆಂಕಟೇಶಯ್ಯ ಪರಸ್ಪರ ವಿನಿಮಯ ಮಾಡಿಕೊಂಡರು
ಒಪ್ಪಂದ ಪತ್ರವನ್ನು ಡಾ.ಸಿ.ಎನ್‌.ಮಂಜುನಾಥ್‌ ಹಾಗೂ ಡಾ.ವೆಂಕಟೇಶಯ್ಯ ಪರಸ್ಪರ ವಿನಿಮಯ ಮಾಡಿಕೊಂಡರು   

ಬೆಂಗಳೂರು: ಮಲ್ಲೇಶ್ವರದ ಕೆ.ಸಿ.ಜನರಲ್‌ ಆಸ್ಪತ್ರೆಯಲ್ಲಿ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಘಟಕವು ಸ್ಥಾಪನೆಯಾಗಲಿದೆ. 50 ಹಾಸಿಗೆಗಳ ಸಾಮರ್ಥ್ಯದ ಹೃದ್ರೋಗ ಘಟಕ ಸ್ಥಾಪನೆ ಸಲುವಾಗಿ ಜಯದೇವ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್‌ ಹಾಗೂ ಕೆ.ಸಿ.ಜನರಲ್‌ ಆಸ್ಪತ್ರೆ ಅಧೀಕ್ಷಕ ಡಾ.ವೆಂಕಟೇಶಯ್ಯ ಅವರು ಮಂಗಳವಾರ ಒಪ್ಪಂದಕ್ಕೆ ಸಹಿ ಹಾಕಿದರು.

ಕೆ.ಸಿ.ಜನರಲ್‌ ಆಸ್ಪತ್ರೆಯ ಎರಡನೇ ಮಹಡಿಯಲ್ಲಿ 20 ಸಾವಿರ ಚದರ ಅಡಿ ಜಾಗದಲ್ಲಿ ಹೃದ್ರೋಗ ಘಟಕ ತಲೆ ಎತ್ತಲಿದೆ. ಒಪ್ಪಂದದ ಪ್ರಕಾರ, ಹೃದ್ರೋಗ ಘಟಕಕ್ಕೆ ಅಗತ್ಯವಾದ ಜಾಗ, ನೀರು ಮತ್ತಿತರ ಸೌಕರ್ಯಗಳನ್ನು ಕೆ.ಸಿ.ಜನರಲ್‌ ಆಸ್ಪತ್ರೆ ಒದಗಿಸುತ್ತದೆ. ಉಳಿದಂತೆ ವೈದ್ಯಕೀಯ ಪರಿಕರಗಳು, ಯಂತ್ರೋಪಕರಣಗಳು, ಸಿಬ್ಬಂದಿ ಇತ್ಯಾದಿ ಸೌಲಭ್ಯಗಳನ್ನು ಜಯದೇವ ಆಸ್ಪತ್ರೆ ವ್ಯವಸ್ಥೆ ಮಾಡಲಿದ.

‘ಮುಂಬರುವ ಆಗಸ್ಟ್‌ ವೇಳೆಗೆ ಈ ಹೃದ್ರೋಗ ಘಟಕ ಕಾರ್ಯಾರಂಭ ಮಾಡಲಿದೆ. ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ಸಿಗುವ ಎಲ್ಲ ಸೌಕರ್ಯಗಳು ಈ ಘಟಕದಲ್ಲೂ ಸಿಗಲಿವೆ. ಮಲ್ಲೇಶ್ವರ ಮತ್ತು ಸುತ್ತಮುತ್ತಲಿನ ಪ್ರದೇಶಗಳೂ ಸೇರಿದಂತೆ ಬೆಂಗಳೂರು ಉತ್ತರ ಭಾಗದ ಜನರಿಗೆ ಈ ಘಟಕ ಹೆಚ್ಚು ಉಪಯುಕ್ತವಾಗಲಿದೆ. ಹೃದಯದ ಸಮಸ್ಯೆ ಕಂಡುಬಂದಾಗ ಈ ಭಾಗದ ಜನರು ಜಯದೇವ ಆಸ್ಪತ್ರೆಗೆ ಹೋಗುವ ಅಗತ್ಯವಿಲ್ಲ’ ಎಂದು ಮಲ್ಲೇಶ್ವರ ಕ್ಷೇತ್ರದ ಶಾಸಕರೂ ಆಗಿರುವ ಉಪಮುಖ್ಯಮಂತ್ರಿ ಸಿ.ಎನ್‌.ಅಶ್ವತ್ಥನಾರಾಯಣ ತಿಳಿಸಿದರು.

ADVERTISEMENT

ಈ ಘಟಕ ಸ್ಥಾಪಿಸಲು ಒಪ್ಪಿಗೆ ನೀಡಿದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮತ್ತು ಸಹಕಾರ ನೀಡಿದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಅವರಿಗೆ ಅಶ್ವತ್ಥನಾರಾಯಣ ಧನ್ಯವಾದ ಸಲ್ಲಿಸಿದರು.

‘ಕೆ.ಸಿ.ಜನರಲ್‌ ಆಸ್ಪತ್ರೆಯಲ್ಲಿ 100 ಹಾಸಿಗೆಗಳ ಸುಸಜ್ಜಿತ ಮಾಡ್ಯುಲರ್ ತುರ್ತು ನಿಗಾ ಘಟಕವನ್ನು ಈಗಾಗಲೇ ಸ್ಥಾಪಿಸಲಾಗಿದೆ. ಟ್ರಾಮಾ ಕೇಂದ್ರವನ್ನು ಶೀಘ್ರವೇ ಸ್ಥಾಪನೆ ಮಾಡುವ ಉದ್ದೇಶವಿದೆ. ಈ ಆಸ್ಪತ್ರೆಗೆ ಇನ್ನಷ್ಟು ಸೌಕರ್ಯ ಕಲ್ಪಿಸಲಾಗುವುದು’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.