ADVERTISEMENT

ಕೆಂಬತ್ತಹಳ್ಳಿ ಕೆರೆ: ಸ್ಮಶಾನ, ದೇವಸ್ಥಾನ!– ಹಸಿರು ನ್ಯಾಯಮಂಡಳಿಗೆ ಬಿಬಿಎಂಪಿ

ರಾಷ್ಟ್ರೀಯ ಹಸಿರು ನ್ಯಾಯಮಂಡಳಿಗೆ ಬಿಬಿಎಂಪಿ ಪ್ರಮಾಣಪತ್ರ

​ಪ್ರಜಾವಾಣಿ ವಾರ್ತೆ
Published 6 ಜನವರಿ 2023, 20:25 IST
Last Updated 6 ಜನವರಿ 2023, 20:25 IST
ಕೆಂಬತ್ತಹಳ್ಳಿ ಕೆರೆ
ಕೆಂಬತ್ತಹಳ್ಳಿ ಕೆರೆ   

ನವದೆಹಲಿ: ಬೆಂಗಳೂರಿನ ಅಂಜನಾಪುರ ವಾರ್ಡ್‌ನ ಕೆಂಬತ್ತಹಳ್ಳಿ ಕೆರೆಯಂಗಳದಲ್ಲಿ ಎರಡು ಸ್ಮಶಾನ ಹಾಗೂ ಒಂದು ದೇವಸ್ಥಾನ ಇರುವುದು ನಿಜ ಎಂದು ಬಿಬಿಎಂಪಿ ಒಪ್ಪಿಕೊಂಡಿದೆ.

ಕೆರೆಯಂಗಳ ಒತ್ತುವರಿ ಮಾಡಿ ಸ್ಮಶಾನ ನಿರ್ಮಿಸಲಾಗಿದೆ ಎಂದು ಆರೋಪಿಸಿ ಸ್ಥಳೀಯ ನಿವಾಸಿ ವಿಲಾಸಿನಿ ರಾಮ್‌ ಕುಮಾರ್ ಹಾಗೂ ಇತರರು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ (ಎನ್‌ಜಿಟಿ) ಪ್ರಧಾನ ಪೀಠದಲ್ಲಿ ಪ್ರಕರಣ ದಾಖಲಿಸಿದ್ದರು. ಈ ಬಗ್ಗೆ ಪರಿಶೀಲಿಸಲು ಅಧಿಕಾರಿಗಳ ಜಂಟಿ ಸಮಿತಿ ರಚಿಸುವಂತೆ ಪ್ರಧಾನ ಪೀಠವು ಕರ್ನಾಟಕ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು. ಬೆಂಗಳೂರು ನಗರ ಜಿಲ್ಲಾಧಿಕಾರಿಯವರ ನೇತೃತ್ವದಲ್ಲಿ ಜಂಟಿ ಸಮಿತಿ ರಚಿಸಲಾಗಿತ್ತು. ಈ ಸಮಿತಿ ಪರಿಶೀಲನೆ ನಡೆಸಿ ವರದಿ ಸಲ್ಲಿಸಿತ್ತು. ಇದೀಗ, ಬಿಬಿಎಂಪಿಯು ಎನ್‌ಜಿಟಿಗೆ ವರದಿ ಸಲ್ಲಿಸಿದೆ.

‘ಈ ಜಲಕಾಯ ಈ ಹಿಂದೆ ಬಿಡಿಎ ಸುಪರ್ದಿಯಲ್ಲಿತ್ತು. 2020ರಲ್ಲಷ್ಟೇ ಬಿಬಿಎಂಪಿಗೆ ಕೆರೆ ಹಸ್ತಾಂತರ ಆಗಿದೆ. ಜಲಕಾಯದ ಅಭಿವೃದ್ಧಿಗೆ ಕ್ರಮಕೈಗೊಳ್ಳಲಾಗುತ್ತಿದೆ. 12 ಗುಂಟೆ ಜಾಗದಲ್ಲಿ ದೇವಸ್ಥಾನ, 20 ಗುಂಟೆಯಲ್ಲಿ ಒಂದು ಸ್ಮಶಾನ ಹಾಗೂ 1 ಎಕರೆ 8 ಗುಂಟೆಯಲ್ಲಿ ಮತ್ತೊಂದು ಸ್ಮಶಾನ ಇದೆ. ಇದು ಭಾವನಾತ್ಮಕ ವಿಚಾರ. ಏಕಾಏಕಿ ತೆರವುಗೊಳಿಸುವುದು ಕಷ್ಟ. ಸ್ಮಶಾನಕ್ಕೆ ಪರ್ಯಾಯ ಜಾಗ ಒದಗಿಸುವಂತೆ ಸ್ಥಳೀಯರು ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸಿದ್ದಾರೆ’ ಎಂದು
ಪ್ರಮಾಣಪತ್ರದಲ್ಲಿ ತಿಳಿಸಲಾಗಿದೆ.

ADVERTISEMENT

ಸ್ಮಶಾನಕ್ಕೆ ಎರಡು ಎಕರೆ ಜಾಗ ಮೀಸಲಿಡುವ ಸಂಬಂಧ ತಹಶೀಲ್ದಾರ್ ಅವರು ಉಪವಿಭಾಗಾಧಿಕಾರಿ ಅವರಿಗೆ ಈಗಾಗಲೇ ಪ್ರಸ್ತಾವ ಸಲ್ಲಿಸಿದ್ದಾರೆ ಎಂದು ಪ್ರಮಾಣಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಕೆರೆ, ಕಾಲುವೆಗಳ ಒತ್ತುವರಿಗೆ ಅವಕಾಶ ಕಲ್ಪಿಸಬಾರದು ಎಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಹಾಗೂ ಹೈಕೋರ್ಟ್‌ ಪದೇ ಪದೇ ಆದೇಶ ಮಾಡುತ್ತಲೇ ಇವೆ. ಕೆರೆಗಳು ಸೇರಿದಂತೆ ಯಾವುದೇ ಜಲಕಾಯಗಳ ಜಾಗವನ್ನು ಸರ್ಕಾರವಾಗಲೀ ಖಾಸಗಿಯವರಾಗಲೀ ಅನ್ಯ ಉದ್ದೇಶಕ್ಕೆ ಬಳಸಲೇಬಾರದು ಎಂದು ಕಂದಾಯ ಇಲಾಖೆಯು 2020ರ ಜುಲೈ 14ರಂದು ಸುತ್ತೋಲೆ ಹೊರಡಿಸಿದೆ. ಈ ಆದೇಶ ಹೊರಬಿದ್ದ ಬಳಿಕವೇ, ಈ ಕೆರೆಗೆ ಸಂಬಂಧಿಸಿದ ಜಾಗದಲ್ಲಿ ಸ್ಮಶಾನ ಅಭಿವೃದ್ಧಿಗಾಗಿ ಆವರಣ ಗೋಡೆ ನಿರ್ಮಿಸಲಾಗಿದೆ ಎಂದು ಸ್ಥಳೀಯರು ದೂರುತ್ತಾರೆ.

ಕಂದಾಯ ಇಲಾಖೆಯ ದಾಖಲೆ ಪ್ರಕಾರ ಕೆಂಬತ್ತಹಳ್ಳಿ ಕೆರೆ ಎಂಟು ಎಕರೆ ಏಳು ಗುಂಟೆ ಪ್ರದೇಶದಲ್ಲಿ ವ್ಯಾಪಿಸಿದೆ. ಕೆರೆಯ ಸ್ವಲ್ಪ ಭಾಗ ಒತ್ತುವರಿಯಾಗಿದೆ. ಈ ಕೆರೆಗೆ ಸಂಬಂಧಿಸಿದ ಜಾಗದಲ್ಲಿ ಗ್ರಾಮಸ್ಥರು ಹೆಣಗಳನ್ನು ಹೂಳುತ್ತಿದ್ದರು. ಈ ಜಾಗವನ್ನೇ ಸ್ಮಶಾನ ಎಂದು ಗುರುತಿಸಿ, ಅದಕ್ಕೆ ತಡೆಗೋಡೆ ಕಟ್ಟುವ ಪ್ರಯತ್ನ ನಡೆಸಲಾಗುತ್ತಿದೆ. ಇಂತಹ ಪ್ರಯತ್ನಗಳು ಪದೇ ಪದೇ ಮರುಕಳಿಸುತ್ತಿವೆ ಎಂಬುದು ಈ ಕೆರೆ ಉಳಿಸಲು ಹೋರಾಟ ನಡೆಸುತ್ತಿರುವ ಕಾರ್ಯಕರ್ತರ ಆರೋಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.