ADVERTISEMENT

‘ಕೆಂಪಾಂಬುಧಿ’ಗೆ ಥೀಮ್‌ ಪಾರ್ಕ್‌ ಆಕರ್ಷಣೆ

ಬಸವನಗುಡಿ: ಪಾರಂಪರಿಕ ತಾಣವಾಗಿಸುವ ಒಂದನೇ ಹಂತ ಪೂರ್ಣ

Published 18 ನವೆಂಬರ್ 2022, 21:06 IST
Last Updated 18 ನವೆಂಬರ್ 2022, 21:06 IST
ಥೀಮ್‌ ಪಾರ್ಕ್‌ನ ದ್ವಾರದಲ್ಲಿ ಗಾಜಿನ ಮನೆ
ಥೀಮ್‌ ಪಾರ್ಕ್‌ನ ದ್ವಾರದಲ್ಲಿ ಗಾಜಿನ ಮನೆ   

ಬೆಂಗಳೂರು: ನಾಡಪ್ರಭು ಕೆಂಪೇಗೌಡರು ಕಟ್ಟಿಸಿದ ಕೆಂಪಾಂಬುಧಿ ಕೆರೆಗೆ ಹೊಸರೂಪ ಕೊಡುವ ನೀಲನಕ್ಷೆ ಸಿದ್ಧವಾಗಿದ್ದು, ಪಾರಂಪರಿಕ ತಾಣವನ್ನಾಗಿಸಲು ಯೋಜನೆ ಸಿದ್ಧವಾಗಿದೆ. ಇದಕ್ಕೆ ಮುನ್ನುಡಿಯಾಗಿ ಕೆರೆಗೆ ಹೊಂದಿಕೊಂಡಂತಿರುವ ಜಿಂಕೆ ಪಾರ್ಕ್‌ ಅನ್ನು ಥೀಮ್‌ ಪಾರ್ಕ್‌ ಅನ್ನಾಗಿ ರೂಪಿಸಲಾಗಿದೆ.

ಕೆಂಪಾಂಬುಧಿ ಕೆರೆಗೆ ಹೊಂದಿ ಕೊಂಡಂತಿರುವ ಜಿಂಕೆ ಪಾರ್ಕ್‌ ಸಾಕಷ್ಟು ಸಮಸ್ಯೆಗಳಿಂದ ಹಲವು ಸೌಲಭ್ಯಗಳಿಂದ ವಂಚಿತವಾಗಿತ್ತು. 2019ರಲ್ಲಿ ಪುನರುಜ್ಜೀವನ ಯೋಜನೆ ಆರಂಭವಾಗಿದ್ದು, ಪ್ರಥಮ ಹಂತದಲ್ಲಿ ಹಲವು ಸೌಲಭ್ಯಗಳನ್ನು ಒದಗಿಸಲಾಗಿದೆ. ಎಲ್ಲ ವಯೋಮಾನದವರಿಗೂ ಸೌಕರ್ಯಗಳಿವೆ.

ಎರಡನೇ ಹಂತದಲ್ಲಿ ಜಿಂಕೆ ಪಾರ್ಕ್‌ನಿಂದ ಕೆಂಪಾಂಬುಧಿ ಕೆರೆಯ ದಡಕ್ಕೆ ರೋಪ್‌ ವೇ ಮಾಡಲು ಯೋಚಿಸಲಾಗಿದೆ. ಕೆರೆಯಲ್ಲಿ ಸುರಕ್ಷಿತ ಹಾಗೂ ಆಕರ್ಷಣೆಯ ಬೋಟಿಂಗ್ವ್ಯವಸ್ಥೆ ಕಲ್ಪಿಸಲಾಗುತ್ತದೆ.

ADVERTISEMENT

ಕೆರೆ ಸೇರಿ ಸುಮಾರು 45 ಎಕರೆ ಪ್ರದೇಶದಲ್ಲಿರುವ ಥೀಮ್‌ ಪಾರ್ಕ್‌ನಲ್ಲಿ ಎರಡನೇ ಹಂತದಲ್ಲಿ ಲೇಸರ್‌ ಷೋ, ಮ್ಯೂಸಿಕಲ್‌ ಫೌಂಟೇನ್‌ ಸ್ಥಾಪಿಸಲಾಗುತ್ತಿದೆ. ಇಲ್ಲಿದ್ದ ರೈಲು ಮಕ್ಕಳ ಆಕರ್ಷಣೆಯ ತಾಣವಾಗಿತ್ತು. ಅದರ ಬದಲು ಕೇಬಲ್‌ ಕಾರ್‌ ಇಲ್ಲಿಆರಂಭವಾಗಲಿದೆ.

ಕೆರೆಯೊಳಗೆ ಎಂದಿಗೂ ನೀರು ಇರಬೇಕು ಎಂದು ತ್ಯಾಜ್ಯ ನೀರು ಸಂಸ್ಕರಣೆ ಘಟಕದಿಂದ (ಎಸ್‌ಟಿಪಿ) ಮಾತ್ರ ನೀರು ಹರಿಸಲು ಯೋಜಿಸಲಾಗಿದೆ. ಬೇರೆಡೆಯಿಂದ ಬರುತ್ತಿರುವ ಎಲ್ಲ ರೀತಿಯ ಕಲ್ಮಶಕ್ಕೂ ತಡೆ ಹಾಕಲಾಗುತ್ತದೆ. ಶುದ್ಧವಾಗಿರುವ ನೀರು ಮಾತ್ರ ಕೆರೆಯಲ್ಲಿರುವಂತೆ ಮಾಡುವ ವ್ಯವಸ್ಥೆ ಕಲ್ಪಿಸಲಾಗಿದೆ.

ನೂರಾರು ವರ್ಷಗಳ ಇತಿಹಾಸ ಹೊಂದಿರುವ ಕೆಂಪಾಂಬುಧಿ ಕೆರೆ ಕುಡಿಯುವ ನೀರಿನ ತಾಣವಾಗಿತ್ತು. ಗವಿಗಂಗಾಧರ ದೇವಸ್ಥಾನದ ಸಮೀಪದಲ್ಲಿರುವ ಕೆರೆ ಕಲ್ಮಶದ ತಾಣವಾಗಿತ್ತು. ಇದೀಗ ಕಲ್ಮಶದ ಹರಿವಿಗೆ ತಡೆಯಾಗಿದ್ದು, ಕಡಲೆಕಾಯಿ ಪರಿಷೆ ಅಂಗವಾಗಿ 13 ವರ್ಷಗಳ ನಂತರ ಕೆರೆಯಲ್ಲಿ ತೆಪ್ಪೋತ್ಸವ ನಡೆಯುತ್ತಿದೆ. 2008ರಲ್ಲಿ ನಡೆದ ಕೊನೆಯದಾಗಿ ತೆಪ್ಪೋತ್ಸವ ನಡೆದಿತ್ತು.

ಕೆಂಪೇಗೌಡರು ನಿರ್ಮಿಸಿದ ಗೋಪುರ ಕೆರೆಯ ದಡದಲ್ಲಿದೆ. ಅದನ್ನು ಅಭಿವೃದ್ಧಿಗೊಳಿಸುವ ಜೊತೆಗೆ ಕೆಂಪೇಗೌಡ ಪ್ರತಿಮೆ ಸ್ಥಾಪಿಸಲಾಗುತ್ತದೆ. ಥೀಮ್‌ ಪಾರ್ಕ್‌ ಹಾಗೂ ಕೆರೆಗೆ ಒಂದನೇ ಹಂತದಲ್ಲಿ ₹10 ಕೋಟಿ ವೆಚ್ಚ ಮಾಡಲಾಗಿದೆ. ಎರಡನೇ ಹಂತದಲ್ಲಿ ಇನ್ನೂ ₹10 ಕೋಟಿ ವೆಚ್ಚವಾಗಲಿದೆ. ಥೀಮ್‌ ಪಾರ್ಕ್‌ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇದೇ 20ರಂದು (ಭಾನುವಾರ) ಚಾಲನೆ ನೀಡಲಿದ್ದಾರೆ ಎಂದು ಶಾಸಕ ರವಿ ಸುಬ್ರಮಣ್ಯ ತಿಳಿಸಿದರು.

ಥೀಮ್‌ ಪಾರ್ಕ್‌ನಲ್ಲಿರುವ ಸೌಲಭ್ಯಗಳು: ವೃತ್ತಾಕಾರದ ಫೌಂಟೇನ್‌, ಡೈನೊಸಾರ್‌ ಪಾರ್ಕ್‌, ಯೋಗ ಕೇಂದ್ರ, ಜಿಮ್‌ ಸಲಕರಣೆ, ಅಂಬ್ರೆಲಾ ಗಜೆಬೊ, ಗ್ಲಾಸ್‌ ಹೌಸ್‌, ಮಕ್ಕಳಿಗೆ ಆಟದ ಪ್ರದೇಶ, ವಿಶೇಷ ಆಸನ ವ್ಯವಸ್ಥೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.