ADVERTISEMENT

ಬಿಡಿಎ | ಕೆಂಪೇಗೌಡ ಬಡಾವಣೆ ಅಭಿವೃದ್ಧಿಗೆ ವೇಗ

ರಸ್ತೆಗಳಿಗೆ ಡಾಂಬರೀಕರಣ, ಮತ್ತೊಂದು ವಿದ್ಯುತ್ ಉಪಕೇಂದ್ರ ನಿರ್ಮಾಣ

ಕೆ.ಎಸ್.ಸುನಿಲ್
Published 26 ಏಪ್ರಿಲ್ 2025, 22:30 IST
Last Updated 26 ಏಪ್ರಿಲ್ 2025, 22:30 IST
ಕೊಮ್ಮಘಟ್ಟದಲ್ಲಿ ನಿರ್ಮಿಸಿರುವ ವಿದ್ಯುತ್ ಉಪಕೇಂದ್ರ
ಕೊಮ್ಮಘಟ್ಟದಲ್ಲಿ ನಿರ್ಮಿಸಿರುವ ವಿದ್ಯುತ್ ಉಪಕೇಂದ್ರ   

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಅಭಿವೃದ್ಧಿಪಡಿಸುತ್ತಿರುವ ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಮೂಲಸೌಕರ್ಯ ಕಲ್ಪಿಸುವ ಕಾರ್ಯಕ್ಕೆ ವೇಗ ನೀಡಲಾಗಿದೆ.

ಒಂಬತ್ತು ಬ್ಲಾಕ್‌ಗಳಲ್ಲೂ ರಸ್ತೆ, ವಿದ್ಯುತ್, ಚರಂಡಿ ವ್ಯವಸ್ಥೆ ಸೇರಿ ಮುಂತಾದ ಮೂಲಸೌಕರ್ಯ ಒದಗಿಸುವ ಕಾಮಗಾರಿಗಳು ನಡೆಯುತ್ತಿದೆ. ಶೇಕಡ 80ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು, ಬಾಕಿ ಕಾಮಗಾರಿಗಳು ಭರದಿಂದ ಸಾಗುತ್ತಿವೆ. ‌

ಮೈಸೂರು ರಸ್ತೆ ಹಾಗೂ ಮಾಗಡಿ ರಸ್ತೆ ನಡುವೆ ನಿರ್ಮಿಸಿರುವ ಈ ಬಡಾವಣೆಯ ನಿವೇಶನಗಳು 2016 ಮತ್ತು 2018ರಲ್ಲಿ ಹಂಚಿಕೆ ಆಗಿದ್ದವು. ಬಡಾವಣೆಯಲ್ಲಿ 9 ಬ್ಲಾಕ್‌ಗಳಿವೆ. 29 ಸಾವಿರ ನಿವೇಶನಗಳಿವೆ. 70 ಕುಟುಂಬಗಳಷ್ಟೇ ಮನೆ ನಿರ್ಮಿಸಿಕೊಂಡಿವೆ. 50ಕ್ಕೂ ಅಧಿಕ ಮನೆಗಳು ನಿರ್ಮಾಣ ಹಂತದಲ್ಲಿವೆ.  

ADVERTISEMENT

2022ರಿಂದ ಬಡಾವಣೆಯ ನಿವಾಸಿಗಳು, ನಿವೇಶನದಾರರು ಮೂಲಸೌಕರ್ಯ ಕಲ್ಪಿಸಲು ಕೋರಿ ನಗರಾಭಿವೃದ್ಧಿ ಇಲಾಖೆ, ರೇರಾ, ವಿಧಾನಮಂಡಲದ ಅರ್ಜಿ ಸಮಿತಿಗೂ ಮನವಿ ಸಲ್ಲಿಸಿದ್ದರು. ಭೂಸ್ವಾಧೀನ ವಿಳಂಬ ಹಾಗೂ ಹಣದ ಕೊರತೆಯಿಂದ ಮೂಲಸೌಕರ್ಯ ಒದಗಿಸುವ ಗಡುವು ವಿಸ್ತರಿಸಲಾಗುತ್ತಿತ್ತು. ಈಗ ಬಿಡಿಎ, ಅಭಿವೃದ್ಧಿಗೆ ವೇಗ ನೀಡಿದೆ.

‘ವಿದ್ಯುತ್ ಪೂರೈಕೆ ಇಲ್ಲ. ಒಳಚರಂಡಿ ವ್ಯವಸ್ಥೆ ಸರಿ ಆಗಿಲ್ಲ. ಮನೆ ನಿರ್ಮಾಣಕ್ಕೆ ನೀರು ಸಿಗುತ್ತಿಲ್ಲ. ಹಾಗಾಗಿ ಮನೆ ಕಟ್ಟಲು ನಿವೇಶನ ಮಾಲೀಕರು ಮುಂದಾಗುತ್ತಿಲ್ಲ. ಕಾಮಗಾರಿ ಮುಗಿದಿದ್ದರೂ ಕೊಮ್ಮಘಟ್ಟ ವಿದ್ಯುತ್ ಉಪಕೇಂದ್ರ ಕಾರ್ಯಾರಂಭ ಮಾಡಿಲ್ಲ. ಮನೆ ನಿರ್ಮಾಣ ಪ್ರಾರಂಭಿಸಿರುವವರು ಹಾಗೂ ನಿವಾಸಿಗಳು ಸ್ವಂತ ವೆಚ್ಚದಲ್ಲಿ ಅಕ್ಕಪಕ್ಕದ ಹಳ್ಳಿಗಳು, ಖಾಸಗಿ ಬಡಾವಣೆಗಳ ವಿದ್ಯುತ್ ಕಂಬಗಳ ಮೂಲಕ ವಿದ್ಯುತ್ ಸಂಪರ್ಕವನ್ನು ಪಡೆಯಬೇಕಾಗಿದೆ’ ಎಂದು ನಾಡಪ್ರಭು ಕೆಂಪೇಗೌಡ ಬಡಾವಣೆ ಮುಕ್ತ ವೇದಿಕೆಯ ಜಂಟಿ ಕಾರ್ಯದರ್ಶಿ ಸೂರ್ಯಕಿರಣ್‌ ಆರೋಪಿಸಿದರು.  

‘ಕೆಂಪೇಗೌಡ ಬಡಾವಣೆಯ 1, 2, 3, 4, 8 ಮತ್ತು 9ನೇ ಬ್ಲಾಕ್‌ನ ರಸ್ತೆಗಳ ಡಾಂಬರೀಕರಣಕ್ಕೆ ಟೆಂಡರ್‌ ಕರೆಯಲಾಗಿದ್ದು, ಕಾಮಗಾರಿ ಪೂರ್ಣಗೊಳಿಸಲು 24 ತಿಂಗಳು ನೀಡಲಾಗಿದೆ. 6 ಮತ್ತು 7ನೇ ಬ್ಲಾಕ್ ರಸ್ತೆಗಳ ಡಾಂಬರೀಕರಣ ಶೇಕಡ 90 ಹಾಗೂ 5ನೇ ಬ್ಲಾಕ್ ರಸ್ತೆ ಡಾಂಬರೀಕರಣ ಶೇಕಡ 60 ಪೂರ್ಣಗೊಂಡಿದೆ’ ಎಂದು ಬಿಡಿಎ ಕಾರ್ಯಪಾಲಕ ಎಂಜಿನಿಯರ್ ತಿಳಿಸಿದರು.

ಆದರೆ, ಬಡಾವಣೆ ನಿವಾಸಿಗಳ ವಾದವೇ ಬೇರೆ. ‘ಶಿವರಾಮ ಕಾರಂತ ಬಡಾವಣೆ ನಿರ್ಮಾಣ ಯೋಜನೆಯಲ್ಲಿ ಒಂಬತ್ತು ಏಜೆನ್ಸಿಗಳನ್ನು (ಪ್ರತಿ ಬ್ಲಾಕ್‌ಗೆ ಒಂದು) ಬಿಡಿಎ ಬಳಸಿತ್ತು. ಇದರಿಂದ ಕಾಮಗಾರಿ ಬೇಗ ಪೂರ್ಣಗೊಂಡಿತ್ತು. ಅದೇ ಮಾದರಿಯಲ್ಲಿ ಅಭಿವೃದ್ಧಿ ಪಡಿಸಬೇಕು’ ಎಂದು ಒತ್ತಾಯಿಸಿದ್ದಾರೆ.

ಅಭಿವೃದ್ಧಿ ಕಾಮಗಾರಿಗಳು ಪ್ರಗತಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಬಿಡಿಎ ಆಯುಕ್ತ ಎನ್.ಜಯರಾಂ ‘ಕೆಂಪೇಗೌಡ ಬಡಾವಣೆಯಲ್ಲಿ ಮೂಲಸೌಕರ್ಯಗಳ ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿವೆ. ಶೇಕಡ 80ರಷ್ಟು ಮುಗಿದಿದೆ. ಕೆಲಸವೇ ನಡೆದಿಲ್ಲ ಎಂಬ ಆರೋಪ ಸರಿಯಲ್ಲ. ಕೆಲ ಜಮೀನು ಮಾಲೀಕರು ಹೈಕೋರ್ಟ್‌ಗೆ ಹೋಗಿದ್ದರು. ಹಾಗಾಗಿ ವಿಳಂಬವಾಗಿತ್ತು. ಈಗ ಕೆಲಸಕ್ಕೆ ವೇಗ ನೀಡಿದ್ದು ಶೀಘ್ರದಲ್ಲಿ ಪೂರ್ಣಗೊಳ್ಳಲಿವೆ’ ಎಂದು ಹೇಳಿದರು. ‘ನೀರು ರಸ್ತೆ ಒಳಚರಂಡಿ ವ್ಯವಸ್ಥೆ ಕಲ್ಪಿಸಲಾಗಿದೆ. ಮುಖ್ಯರಸ್ತೆಗಳಿಗೆ ಡಾಂಬರೀಕರಣ ಆಗಿದೆ. ಒಳರಸ್ತೆಗಳ ಡಾಂಬರೀಕರಣ ಬಾಕಿ ಇದೆ.  ಮನೆಗಳಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸಲಾಗಿದೆ. ಮತ್ತೊಂದು ವಿದ್ಯುತ್ ಉಪ ಕೇಂದ್ರವನ್ನು ಸಹ ನಿರ್ಮಿಸಲಾಗುತ್ತಿದೆ’ ಎಂದರು.

107 ಸಿ.ಎ ನಿವೇಶನ

ಕೆಂಪೇಗೌಡ ಬಡಾವಣೆಯನ್ನು 4,043 ಎಕರೆ ವಿಸ್ತೀರ್ಣದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ನಾಗರಿಕ ಸೌಲಭ್ಯ ನಿವೇಶನ (ಸಿ.ಎ) ಉದ್ದೇಶಕ್ಕೆ 387 ಎಕರೆ 20 ಗುಂಟೆ ಮೀಸಲಿಡಲಾಗಿದೆ.

ಭೂಸ್ವಾಧೀನ ಸಮಸ್ಯೆಯಿಂದಾಗಿ ಸದ್ಯ 2,694 ಎಕರೆ 24 ಗುಂಟೆ ಪ್ರದೇಶದಲ್ಲಿ ಬಡಾವಣೆ ಅಭಿವೃದ್ಧಿಪಡಿಸುತ್ತಿದ್ದು 232 ಎಕರೆ 2 ಗುಂಟೆಯಲ್ಲಿ 177 ಸಿ.ಎ ನಿವೇಶನ ರಚಿಸಬೇಕಿದೆ. ಸದ್ಯ 107 ನಿವೇಶನ ರಚಿಸಲಾಗಿದೆ. ಈ ಪೈಕಿ 90 ಅನ್ನು ಗುತ್ತಿಗೆ ಆಧಾರದಲ್ಲಿ ನೀಡಲು ಅಧಿಸೂಚನೆ ಹೊರಡಿಸಲಾಗಿದೆ.

ಅಭಿವೃದ್ಧಿ ಕಾಮಗಾರಿಗಳು ಪ್ರಗತಿ

‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಬಿಡಿಎ ಆಯುಕ್ತ ಎನ್.ಜಯರಾಂ, ‘ಕೆಂಪೇಗೌಡ ಬಡಾವಣೆಯಲ್ಲಿ ಮೂಲಸೌಕರ್ಯಗಳ ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿವೆ. ಶೇಕಡ 80ರಷ್ಟು ಮುಗಿದಿದೆ. ಕೆಲಸವೇ ನಡೆದಿಲ್ಲ ಎಂಬ ಆರೋಪ ಸರಿಯಲ್ಲ. ಕೆಲ ಜಮೀನು ಮಾಲೀಕರು ಹೈಕೋರ್ಟ್‌ಗೆ ಹೋಗಿದ್ದರು. ಹಾಗಾಗಿ ವಿಳಂಬವಾಗಿತ್ತು. ಈಗ ಕೆಲಸಕ್ಕೆ ವೇಗ ನೀಡಿದ್ದು, ಶೀಘ್ರದಲ್ಲಿ ಪೂರ್ಣಗೊಳ್ಳಲಿವೆ’ ಎಂದು ಹೇಳಿದರು.

‘ನೀರು, ರಸ್ತೆ, ಒಳಚರಂಡಿ ವ್ಯವಸ್ಥೆ ಕಲ್ಪಿಸಲಾಗಿದೆ. ಮುಖ್ಯರಸ್ತೆಗಳಿಗೆ ಡಾಂಬರೀಕರಣ ಆಗಿದೆ. ಒಳರಸ್ತೆಗಳ ಡಾಂಬರೀಕರಣ ಬಾಕಿ ಇದೆ.  ಮನೆಗಳಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸಲಾಗಿದೆ. ಮತ್ತೊಂದು ವಿದ್ಯುತ್ ಉಪ ಕೇಂದ್ರವನ್ನು ಸಹ ನಿರ್ಮಿಸಲಾಗುತ್ತಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.