ADVERTISEMENT

ಸೌಲಭ್ಯಕ್ಕೆ ಎಷ್ಟು ವರ್ಷ ಕಾಯಬೇಕು?: ಕೆಂಪೇಗೌಡ ಬಡಾವಣೆ ನಿವೇಶನದಾರರ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2021, 20:24 IST
Last Updated 16 ನವೆಂಬರ್ 2021, 20:24 IST
ನಾಡಪ್ರಭು ಕೆಂಪೇಗೌಡ ಬಡಾವಣೆ
ನಾಡಪ್ರಭು ಕೆಂಪೇಗೌಡ ಬಡಾವಣೆ   

ಬೆಂಗಳೂರು: ನಗರದ ವ್ಯವಸ್ಥಿತ ಬೆಳವಣಿಗೆಯಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ನಿರ್ಮಿಸಿದ ಬಡಾವಣೆಗಳ ಪಾತ್ರವೂ ಮಹತ್ವದ್ದು. ನಗರದ ವಸತಿ ಸಮಸ್ಯೆ ನಿವಾರಿಸಲು ಸರ್ಕಾರ ಆರಂಭಿಸಿದ ಮಹತ್ವಾಕಾಂಕ್ಷಿ ಯೋಜನೆ ನಾಡಪ್ರಭು ಕೆಂಪೇಗೌಡ ಬಡಾವಣೆ. ಈ ಬಡಾವಣೆಗೆ ಮೂಲಸೌಕರ್ಯ ಕಲ್ಪಿಸುವ ಕಾರ್ಯ ಆರಂಭದಲ್ಲೇ ಹಳಿ ತಪ್ಪಿದೆ ಎಂಬ ಟೀಕೆ ವ್ಯಕ್ತವಾಗಿದೆ.

ಈ ಬಡಾವಣೆಯಲ್ಲಿ 2016ರಲ್ಲೇ ಮೊದಲ ಹಂತದ ನಿವೇಶನ ಹಂಚಿಕೆ ಮಾಡಲಾಗಿದೆ. ಆದರೂ, ಮನೆ ನಿರ್ಮಿ
ಸಲು ಅಗತ್ಯವಿರುವಷ್ಟು ಮೂಲಸೌಕರ್ಯವನ್ನು ಈ ಬಡಾವಣೆಯ ಯಾವುದೇ ಬ್ಲಾಕ್‌ನಲ್ಲೂ ಇದುವರೆಗೆ ಕಲ್ಪಿಸಲಾಗಿಲ್ಲ. ಹಂಚಿಕೆ ಮಾಡಿರುವ ನಿವೇಶನಗಳಿಗೆ 2021ರ ಡಿಸೆಂಬರ್‌ ಒಳಗೆ ಮೂಲಸೌಕರ್ಯ ಕಲ್ಪಿ ಸುತ್ತೇವೆ ಎಂದು ರಿಯಲ್‌ ಎಸ್ಟೇಟ್‌ ನಿಯಂತ್ರಣ ಪ್ರಾಧಿಕಾರಕ್ಕೆ (ರೇರಾ)ಬಿಡಿಎ ವಾಗ್ದಾನ ನೀಡಿತ್ತು. ಆದರೆ, ಇದುವರೆಗೆ ಈ ಕಾರ್ಯವು ಶೇ 50ರಷ್ಟೂ ಪೂರ್ಣಗೊಂಡಿಲ್ಲ ಎನ್ನುವುದು ಇಲ್ಲಿನ ನಿವೇಶನದಾರರ ಅಳಲು.

ಭೂಸ್ವಾಧೀನ ಪ್ರಕ್ರಿಯೆ ಕಗ್ಗಂಟು, ಮೂಲ ಸೌಕರ್ಯ ಕಲ್ಪಿಸುವ ಕಾರ್ಯ ಸಕಾಲದಲ್ಲಿ ಪೂರ್ಣ ಗೊಳ್ಳದಿರುವುದು, ಹೆಚ್ಚುವರಿ ಕಾಮಗಾರಿಗಳ ವೆಚ್ಚ ಭರಿಸುವಲ್ಲಿ ಪ್ರಾಧಿಕಾರ ಮೀನಮೇಷ ಮಾಡುತ್ತಿರು ವುದು... ಮುಂತಾದ ಸಮಸ್ಯೆಗಳಿಂದ ಬಿಡಿಎ ಮೇಲೆ ಜನ ವಿಶ್ವಾಸ ಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾಗುತ್ತಿದೆ.

ADVERTISEMENT

ಈ ಬಡಾವಣೆಯ ಮೂಲಸೌಕರ್ಯ ಅಭಿವೃದ್ಧಿ ವಿಳಂಬದಿಂದ ಎದುರಾದ ಸಮಸ್ಯೆಗಳ ಕುರಿತು ನಿವೇಶನ ದಾರರು ಇಲ್ಲಿ ನೋವು ಹಂಚಿಕೊಂಡಿದ್ದಾರೆ. ಬಿಡಿಎ ಆಯುಕ್ತರ ಪ್ರತಿಕ್ರಿಯೆಯೂ ಇಲ್ಲಿದೆ.

***

‘ಮನೆ ಕಟ್ಟಲಾಗುತ್ತಿಲ್ಲ ಆದರೆ, ಸಾಲ ಕಟ್ಟಲೇಬೇಕಿದೆ’

ಮೂಲಸೌಕರ್ಯವಿಲ್ಲದ ಕಾರಣ ಈ ಬಡಾವಣೆಯಲ್ಲಿ ಮನೆ ಕಟ್ಟಲು ಸಾಧ್ಯವಾಗುತ್ತಿಲ್ಲ. ಆದರೆ, ಈ ನಿವೇಶನ ಖರೀದಿಗಾಗಿ ಮಾಡಿರುವ ಸಾಲದ ಜೊತೆಗೆ ಮನೆಬಾಡಿಗೆಯನ್ನೂ ಕಟ್ಟಬೇಕಾಗಿದೆ.

ಈ ಬಡಾವಣೆಯಲ್ಲಿ ಮನೆ ನಿರ್ಮಿಸಲು ಶೇ 6.5 ಬಡ್ಡಿದರದಲ್ಲಿ ಗೃಹ ಸಾಲ ಪಡೆದ ಅನೇಕರು ಈಗ ಅದಕ್ಕೆ ವಾಣಿಜ್ಯ ದರದ (ಶೇ 11ರವರೆಗೆ) ಪ್ರಕಾರ ಬಡ್ಡಿ ಕಟ್ಟುತ್ತಿದ್ದಾರೆ. ಇನ್ನೊಂದೆಡೆ ಸಿಮೆಂಟ್‌, ಮರಳು, ಕಬ್ಬಿಣದ ದರ ಗಗನಕ್ಕೇರುತ್ತಿದೆ. ಈಗಿನ ಪರಿಸ್ಥಿತಿಯಲ್ಲಿ ಪ್ರಕಾರ ಮನೆ ನಿರ್ಮಿಸಲು ಮೊದಲು ಲೆಕ್ಕ ಹಾಕಿದ್ದಕ್ಕಿಂತ 15 ಲಕ್ಷದಷ್ಟು ಹೆಚ್ಚು ವೆಚ್ಚ ಮಾಡಬೇಕಾದ ಅನಿವಾರ್ಯ ಸೃಷ್ಟಿಯಾಗಿದೆ.

ಎರಡು ತಿಂಗಳಿನಿಂದ ಮೂಲಸೌಕರ್ಯ ಕಾಮಗಾರಿಯಲ್ಲಿ ಯಾವುದೇ ಪ್ರಗತಿಯಾಗಿಲ್ಲ. ಹೆಚ್ಚುವರಿ ಕಾಮಗಾರಿಗಳಿಗೆ ಸಂಬಂಧಿಸಿದ ವೆಚ್ಚ ಭರಿಸಲು ಬಿಡಿಎ ಮೀನಮೇಷ ಎಣಿಸುತ್ತಿದೆ. ಹಾಗಾಗಿ ಗುತ್ತಿಗೆದಾರರು ಕೆಲಸವನ್ನು ನಿಲ್ಲಿಸಿ ಬಿಟ್ಟಿದ್ದಾರೆ. ಇದರಿಂದ ಕುಡಿಯುವ ನೀರು, ಒಳಚರಂಡಿ, ರಸ್ತೆ ಸಂಪರ್ಕಗಳನ್ನು ಪ್ರತಿ ನಿವೇಶನಕ್ಕೆ ತಲುಪಿಸಲು ಸಮಸ್ಯೆ ಆಗಿದೆ.

ಕಟ್ಟಡ ನಿರ್ಮಿಸಲು ವಿದ್ಯುತ್‌ ಸಂಪರ್ಕ ಅನಿವಾರ್ಯ. ಆದರೆ, ವಿದ್ಯುತ್‌ ಸಂಪರ್ಕ ಕಲ್ಪಿಸುವ ಕೆಲಸ ಇನ್ನೂ ಆರಂಭವೇ ಆಗಿಲ್ಲ. ಕಂದಾಯ ನಿವೇಶನಗಳಿಗೆ ವಿದ್ಯುತ್‌ ಸಂಪರ್ಕ ಸುಲಭದಲ್ಲಿ ಸಿಗುತ್ತದೆ. ಬಿಡಿಎ ಬಡಾವಣೆಗೆ ಸಿಗುತ್ತಿಲ್ಲ ಎಂಬುದು ವಿಪರ್ಯಾಸ.

- ಸೂರ್ಯಕಿರಣ್‌,ಬಡಾವಣೆಯ ನಿವೇಶನದಾರ

***

‘ಕಾಮಗಾರಿ ಶೇ 40ರಷ್ಟೂ ಪೂರ್ಣಗೊಂಡಿಲ್ಲ’

ಬಡಾವಣೆಯ ಮೂಲಸೌಕರ್ಯ ಕಾಮಗಾರಿ ಶೇ 40ರಷ್ಟೂ ಪೂರ್ಣಗೊಂಡಿಲ್ಲ. ನಿವೇಶನದಾರರು ಇಲ್ಲಿ ಮನೆ ನಿರ್ಮಿಸುವುದಾದರೂ ಹೇಗೆ. ನಿವೇಶನಗಳಿಗೆ ಮೂಲಸೌಕರ್ಯ ಕಲ್ಪಿಸದಿರುವುದನ್ನು ಪ್ರಶ್ನಿಸಿ ನಾವು ರೇರಾದಲ್ಲಿ ದಾವೆ ಹೂಡಿದ್ದೆವು. ಕೊಟ್ಟ ಮಾತಿನಂತೆ 2021ರ ಡಿಸೆಂಬರ್‌ ಒಳಗೆ ಮೂಲಸೌಕರ್ಯ ಕಾಮಗಾರಿ ಪೂರ್ಣಗೊಳಿಸುವ ಯಾವುದೇ ಲಕ್ಷಣಗಳೂ ಕಾಣಿಸುತ್ತಿಲ್ಲ. ಭೂಸ್ವಾಧೀನಕ್ಕೆ ಸಂಬಂಧಿಸಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವುದಕ್ಕೂ ಪ್ರಾಧಿಕಾರಕ್ಕೆ ಸಾಧ್ಯವಾಗಿಲ್ಲ. ನಿವೇಶನ ಹಂಚಿಕೆ ಆಗಿ ಐದು ವರ್ಷ ಕಳೆದ ಬಳಿಕವೂ ಯಾವುದೇ ನಿವೇಶನಕ್ಕೂ ಪೂರ್ಣಪ್ರಮಾಣದಲ್ಲಿ ಕುಡಿಯುವ ನೀರು, ಒಳಚರಂಡಿ, ರಸ್ತೆ ಸಂಪರ್ಕ ಕಲ್ಪಿಸಿಲ್ಲ.ಮನೆಗಳು ನಿರ್ಮಾಣವಾದರೆ ಮಾತ್ರ ಬಡಾವಣೆಯ ನಿವೇಶನಗಳಿಗೆ ಬೇಡಿಕೆ ಹೆಚ್ಚುತ್ತದೆ. ಬಿಡಿಎ ತನ್ನಲ್ಲೇ ಉಳಿಸಿಕೊಂಡಿರುವ ಮೂಲೆ ನಿವೇಶನಗಳೂ ಉತ್ತಮ ಬೆಲೆಗೆ ಮಾರಾಟವಾಗುತ್ತವೆ. ಈ ಸತ್ಯವನ್ನು ಅರಿತು ಬಿಡಿಎ ತ್ವರಿತವಾಗಿ ಮೂಲಸೌಕರ್ಯ ಕಲ್ಪಿಸಬೇಕು. ಇಲ್ಲದಿದ್ದರೆ ಕಾನೂನು ಹೋರಾಟ ಅನಿವಾರ್ಯ.

-ಎನ್‌.ಶ್ರೀಧರ್‌,ನಾಡಪ್ರಭು ಕೆಂಪೇಗೌಡ ಬಡಾವಣೆ ನಿವೇಶನದಾರರ ಮುಕ್ತ ವೇದಿಕೆಯ ಅಧ್ಯಕ್ಷ

***

‘ಬಿಕ್ಕಟ್ಟುಗಳನ್ನು ಶೀಘ್ರ ಬಗೆಹರಿಸುತ್ತೇವೆ’

ಬಡಾವಣೆಗೆ ಮೂಲಸೌಕರ್ಯ ಕಲ್ಪಿಸುವಲ್ಲಿ ಎದುರಾಗಿರುವ ಬಿಕ್ಕಟ್ಟುಗಳನ್ನು ಒಂದೊಂದಾಗಿ ಬಗೆಹರಿಸಲು ಶಕ್ತಿಮೀರಿ ಪ್ರಯತ್ನ ಮಾಡುತ್ತಿದ್ದೇವೆ. ಮಳೆಯಿಂದಾಗಿ ಎರಡು ತಿಂಗಳುಗಳಿಂದ ಕಾಮಗಾರಿ ನಿಧಾನವಾಗಿರುವುದು ನಿಜ. ಕಾಮಗಾರಿಯೇ ನಡೆಯುತ್ತಿಲ್ಲ ಎಂಬ ಆರೋಪ ಒಪ್ಪಲಾಗದು. ನಾವೇ ಖುದ್ದು ಸ್ಥಳ ಪರಿಶೀಲನೆ ನಡೆಸಿದಾಗಲೂ ಕಾಮಗಾರಿಗಳು ನಡೆಯುತ್ತಿದ್ದವು. ಕೋವಿಡ್‌ನಿಂದ ಸ್ವಲ್ಪ ವಿಳಂಬವಾಗಿದ್ದ ಕಾಮಗಾರಿ ಮತ್ತೆ ಬಿರುಸಿನಿಂದ ನಡೆಯಲಿದೆ.

ರೇರಾಕ್ಕೆ ನೀಡಿರುವ ವಾಗ್ದಾನದಂತೆ ನಿವೇಶನಗಳಿಗೆ ಗಡುವಿನ ಒಳಗೆ ಮೂಲಸೌಕರ್ಯ ಕಲ್ಪಿಸಲು ಕ್ರಮ ವಹಿಸಿದ್ದೇವೆ. ವಹಿಸಿಕೊಂಡ ಕಾಮಗಾರಿಯನ್ನು ಗಡುವಿನ ಒಳಗೆ ಪೂರ್ಣಗೊಳಿಸುವುದು ಗುತ್ತಿಗೆದಾರರ ಕರ್ತವ್ಯ. ಹೆಚ್ಚುವರಿ ಕಾಮಗಾರಿಗೆ ಸಂಬಂಧಿಸಿದ ವೆಚ್ಚ ಭರಿಸುವುದಕ್ಕೂ ಬಿಡಿಎ ಆಡಳಿತ ಮಂಡಳಿ ಸಭೆಯಲ್ಲಿ ಒಪ್ಪಿಗೆ ಸಿಕ್ಕಿದೆ. ಅದೇನೇ ಇದ್ದರೂ, ಗುತ್ತಿಗೆದಾರರು ನಡೆಸಿರುವಷ್ಟು ಕಾಮಗಾರಿಯ ವೆಚ್ಚ ಭರಿಸುವುದಕ್ಕೆ ಯಾವುದೇ ಸಮಸ್ಯೆ ಇಲ್ಲ. ಇದಕ್ಕೆ ಹಣಕಾಸಿನ ಕೊರತೆಯೂ ಇಲ್ಲ.

ಭೂಸ್ವಾಧೀನ ಸಮಸ್ಯೆಗಳು ಎದುರಾಗಿದ್ದರಿಂದ ಮೂಲಸೌಕರ್ಯ ಕಾಮಗಾರಿ ನಡೆಸಲು ಸ್ವಲ್ಪ ಸಮಸ್ಯೆ ಆಗಿದ್ದು ನಿಜ. ಈ ವ್ಯಾಜ್ಯಗಳೂ ಶೀಘ್ರವೇ ಇತ್ಯರ್ಥಗೊಳ್ಳಲಿವೆ. ಈ ಬಡಾವಣೆಯ ನಿವೇಶನದಾರರು ಎದುರಿಸುತ್ತಿರುವ ಆತಂಕಗಳ ಅರಿವು ನಮಗೂ ಇದೆ. ಹಾಗಾಗಿ ಇಲ್ಲಿ ಮನೆ ನಿರ್ಮಿಸುವುದಕ್ಕೆ ಏನೆಲ್ಲ ಸೌಕರ್ಯಗಳು ಅಗತ್ಯವಿದೆಯೋ ಅವುಗಳೆಲ್ಲವನ್ನೂ ಆದಷ್ಟು ಬೇಗ ಒದಗಿಸಲು ಪ್ರಾಧಿಕಾರವು ಕ್ರಮಕೈಗೊಳ್ಳಲಿದೆ.

-ಎಂ.ಬಿ.ರಾಜೇಶ ಗೌಡ, ಆಯುಕ್ತ, ಬಿಡಿಎ

***

‘ಸಮಸ್ಯೆಗಳನ್ನು ಶೀಘ್ರ ಬಗೆಹರಿಸುತ್ತೇವೆ’

ಬಡಾವಣೆಗೆ ಮೂಲಸೌಕರ್ಯ ಕಲ್ಪಿಸುವಲ್ಲಿ ಎದುರಾಗಿರುವ ಸಮಸ್ಯೆಗಳನ್ನು ಒಂದೊಂದಾಗಿ ಬಗೆಹರಿಸಲು ಶಕ್ತಿಮೀರಿ ಪ್ರಯತ್ನ ಮಾಡುತ್ತಿದ್ದೇವೆ. ಮಳೆಯಿಂದಾಗಿ ಎರಡು ತಿಂಗಳುಗಳಿಂದ ಕಾಮಗಾರಿ ನಿಧಾನವಾಗಿರುವುದು ನಿಜ. ಕಾಮಗಾರಿಯೇ ನಡೆಯುತ್ತಿಲ್ಲ ಎಂಬ ಆರೋಪ ಒಪ್ಪಲಾಗದು. ನಾವೇ ಖುದ್ದು ಸ್ಥಳ ಪರಿಶೀಲನೆ ನಡೆಸಿದಾಗಲೂ ಕಾಮಗಾರಿಗಳು ನಡೆಯುತ್ತಿದ್ದವು. ಕೋವಿಡ್‌ನಿಂದ ಸ್ವಲ್ಪ ವಿಳಂಬವಾಗಿದ್ದ ಕಾಮಗಾರಿ ಮತ್ತೆ ಬಿರುಸಿನಿಂದ ನಡೆಯಲಿದೆ.

ರೇರಾಕ್ಕೆ ನೀಡಿರುವ ವಾಗ್ದಾನದಂತೆ ನಿವೇಶನಗಳಿಗೆ ಗಡುವಿನ ಒಳಗೆ ಮೂಲಸೌಕರ್ಯ ಕಲ್ಪಿಸಲು ಕ್ರಮ ವಹಿಸಿದ್ದೇವೆ. ವಹಿಸಿಕೊಂಡ ಕಾಮಗಾರಿಯನ್ನು ಗಡುವಿನ ಒಳಗೆ ಪೂರ್ಣಗೊಳಿಸುವುದು ಗುತ್ತಿಗೆದಾರರ ಕರ್ತವ್ಯ. ಹೆಚ್ಚುವರಿ ಕಾಮಗಾರಿಗೆ ಸಂಬಂಧಿಸಿದ ವೆಚ್ಚ ಭರಿಸುವುದಕ್ಕೂ ಬಿಡಿಎ ಆಡಳಿತ ಮಂಡಳಿ ಸಭೆಯಲ್ಲಿ ಒಪ್ಪಿಗೆ ಸಿಕ್ಕಿದೆ. ಅದೇನೇ ಇದ್ದರೂ, ಗುತ್ತಿಗೆದಾರರು ನಡೆಸಿರುವಷ್ಟು ಕಾಮಗಾರಿಯ ವೆಚ್ಚ ಭರಿಸುವುದಕ್ಕೆ ಯಾವುದೇ ಸಮಸ್ಯೆ ಇಲ್ಲ. ಇದಕ್ಕೆ ಹಣಕಾಸಿನ ಕೊರತೆಯೂ ಇಲ್ಲ.

ಭೂಸ್ವಾಧೀನ ಸಮಸ್ಯೆಗಳು ಎದುರಾಗಿದ್ದರಿಂದ ಮೂಲಸೌಕರ್ಯ ಕಾಮಗಾರಿ ನಡೆಸಲು ಸ್ವಲ್ಪ ಸಮಸ್ಯೆ ಆಗಿದ್ದು ನಿಜ. ಈ ವ್ಯಾಜ್ಯಗಳೂ ಶೀಘ್ರವೇ ಇತ್ಯರ್ಥಗೊಳ್ಳಲಿವೆ. ಈ ಬಡಾವಣೆಯ ನಿವೇಶನದಾರರು ಎದುರಿಸುತ್ತಿರುವ ಆತಂಕಗಳ ಅರಿವು ನಮಗೂ ಇದೆ. ಹಾಗಾಗಿ ಇಲ್ಲಿ ಮನೆ ನಿರ್ಮಿಸುವುದಕ್ಕೆ ಏನೆಲ್ಲ ಸೌಕರ್ಯಗಳು ಅಗತ್ಯವಿದೆಯೋ ಅವುಗಳೆಲ್ಲವನ್ನೂ ಆದಷ್ಟು ಬೇಗ ಒದಗಿಸಲು ಪ್ರಾಧಿಕಾರವು ಕ್ರಮಕೈಗೊಳ್ಳಲಿದೆ.

-ಎಂ.ಬಿ.ರಾಜೇಶ ಗೌಡ,ಆಯುಕ್ತ, ಬಿಡಿಎ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.