ADVERTISEMENT

ಕೆಂಪೇಗೌಡ ಬಡಾವಣೆ: 'ರ್‍ಯಾಂಪ್ ನಿರ್ಮಿಸಲು ಒತ್ತಾಯ'

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2025, 15:47 IST
Last Updated 1 ಸೆಪ್ಟೆಂಬರ್ 2025, 15:47 IST
ಬಿಡಿಎ
ಬಿಡಿಎ   

ಬೆಂಗಳೂರು: ‌ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ನಿರ್ಮಿಸಿರುವ ನಾಡಪ್ರಭು ಕೆಂಪೇಗೌಡ ಬಡಾವಣೆಯ ಪ್ರಮುಖ ಮುಖ್ಯ ರಸ್ತೆಯಿಂದ (ಎಂಎಆರ್‌)  ಮೈಸೂರು ರಸ್ತೆಯ ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸಲು ಅಗತ್ಯವಾದ ರ‍್ಯಾಂಪ್‌ಗಳನ್ನು ನಿರ್ಮಿಸುವಂತೆ ನಾಡಪ್ರಭು ಕೆಂಪೇಗೌಡ ಬಡಾವಣೆ ಮುಕ್ತ ವೇದಿಕೆ ಒತ್ತಾಯಿಸಿದೆ.

ಈ ಸಂಬಂಧ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಪತ್ರ ಬರೆದಿರುವ ವೇದಿಕೆ ಅಧ್ಯಕ್ಷ ಬಸವರಾಜ್, ‘ಕೆಂಗೇರಿ ಹೋಬಳಿಯ ಯಶವಂತಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೆಂಪೇಗೌಡ ಬಡಾವಣೆಯ ಮಧ್ಯಭಾಗದಲ್ಲಿ ಮಾಗಡಿ ಮತ್ತು ಮೈಸೂರು ರಸ್ತೆ ಸಂಪರ್ಕಿಸಲು 10.7 ಕಿಲೋ ಮೀಟರ್‌ ರಸ್ತೆ ನಿರ್ಮಿಸಲಾಗುತ್ತಿದೆ. ಈ ರಸ್ತೆ ಚಲ್ಲಘಟ್ಟ ಮೆಟ್ರೊ ನಿಲ್ದಾಣ ಮತ್ತು ರಾಜರಾಜೇಶ್ವರಿ ವೈದ್ಯಕೀಯ ಮಹಾವಿದ್ಯಾಲಯ ಬಳಿ ಸಂರ್ಪಕಿಸುತ್ತದೆ’ ಎಂದು ವಿವರಿಸಿದ್ದಾರೆ.

‘ಬಡಾವಣೆಯ ಪ್ರಮುಖ ಮುಖ್ಯ ರಸ್ತೆಯಿಂದ ಬರುವ ವಾಹನಗಳು ಕುಂಬಳಗೋಡು, ಬಿಡದಿವರೆಗೂ ಸರ್ವಿಸ್ ರಸ್ತೆಯಲ್ಲಿ ಸಾಗಿ ಹೆದ್ದಾರಿ ಸಂಪರ್ಕಿಸಬೇಕು ಮತ್ತು ಮೈಸೂರಿನಿಂದ ಬರುವ ವಾಹನಗಳು ಕುಂಬಳಗೋಡು, ಬಿಡದಿಯಿಂದ ಸರ್ವಿಸ್‌ ರಸ್ತೆಯಲ್ಲಿ ಸಾಗಿ ಎಂಎಆರ್ ಪ್ರವೇಶಿಸಬೇಕು. ಪಂಚಮುಖಿ ದೇವಾಲಯದ ಬಳಿ ಮೈಸೂರು ರಸ್ತೆಯ ಮೇಲ್ಸೇತುವೆ ಹತ್ತಲು ಕೆಂಪೇಗೌಡ ಬಡಾವಣೆಯ ಎಂಎಆರ್‌ನಿಂದ ಬರುವ ವಾಹನಗಳಿಗೆ ಅವಕಾಶವಿಲ್ಲ. ಕೆಂಗೇರಿವರೆಗೂ ತೆರಳಿ ಯೂ ಟರ್ನ್ ಪಡೆದು, ಹೆದ್ದಾರಿ ಮೇಲ್ಸೇತುವೆ ಸಂಪರ್ಕಿಸುವುದು ಮತ್ತು ಎಂಎಆರ್ ಪ್ರವೇಶ ಪಡೆಯುವುದು ಹಾಸ್ಯಾಸ್ಪದ’ ಎಂದು ಹೇಳಿದ್ದಾರೆ.

ADVERTISEMENT

ಪ್ರಮುಖ ಮುಖ್ಯ ರಸ್ತೆಯಿಂದ ಮೈಸೂರು ರಸ್ತೆ ಸಂಪರ್ಕಿಸಲು ರ್‍ಯಾಂಪ್ ನಿರ್ಮಿಸುವುದರಿಂದ ಲಕ್ಷಾಂತರ ಜನರಿಗೆ ಅನುಕೂಲವಾಗುತ್ತದೆ. ಆದ್ದರಿಂದ ಈ ವಿಷಯದ ಬಗ್ಗೆ ಸಂಬಂಧಪಟ್ಟ ಇಲಾಖೆಗೆ ಸೂಕ್ತ ಕ್ರಮ ತೆಗೆದುಕೊಳ್ಳಲು ನಿರ್ದೇಶನ ನೀಡುವಂತೆ ಅವರು ಮನವಿ ಮಾಡಿದ್ದಾರೆ.

ಮನವಿಗೆ ಸ್ಪಂದಿಸಿರುವ ಶೋಭಾ ಕರಂದ್ಲಾಜೆ, ‘ಮೈಸೂರು ರಸ್ತೆಯ ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸಲು ಅಗತ್ಯವಾಗಿರುವ ರ‍್ಯಾಂಪ್‌ ನಿರ್ಮಾಣದ ಕಾರ್ಯಸಾಧ್ಯತೆ ಕುರಿತು ಪರಿಶೀಲಿಸಬೇಕು. ಇದರಿಂದ ಸರ್ವಿಸ್ ರಸ್ತೆಯಲ್ಲಿ ವಾಹನ ದಟ್ಟಣೆ ಕಡಿಮೆ ಆಗಲಿದೆ. ಸಾರ್ವಜನಿಕರು ಮತ್ತು ಈ ಭಾಗದ ಶಿಕ್ಷಣ ಸಂಸ್ಥೆಗಳಿಗೂ ಅನುಕೂಲವಾಗಲಿದೆ’ ಎಂದು ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಗೆ ಪತ್ರ ಬರೆದಿದ್ದಾರೆ. ಈ ಪತ್ರವನ್ನು ಗಡ್ಕರಿ ಅವರು ಎನ್‌ಎಚ್‌ಎಐ ಅಧಿಕಾರಿಗಳಿಗೆ ರವಾನಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.