ADVERTISEMENT

ಸೌಹಾರ್ದ ಬದುಕಿನ ಮೌಲ್ಯ ಕಟ್ಟಿಕೊಟ್ಟಿರುವ ಕರೀಗೌಡ: ಅಗ್ರಹಾರ ಕೃಷ್ಣಮೂರ್ತಿ

ಕರೀಗೌಡ ಬೀಚನಹಳ್ಳಿ ಅವರ ಬದುಕು–ಕೃತಿಗಳ ವಿಮರ್ಶಾ ಗ್ರಂಥ ‘ಸಾಂಗತ್ಯ’ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2022, 21:06 IST
Last Updated 6 ಏಪ್ರಿಲ್ 2022, 21:06 IST
ಡಾ.ಕರೀಗೌಡ ಬೀಚನಹಳ್ಳಿ ಅವರ ಬದುಕು– ಕೃತಿಗಳ ವಿಮರ್ಶಾ ಗ್ರಂಥವನ್ನು ಸಚಿವ ಸಿ.ಎನ್.ಅಶ್ವತ್ಥನಾರಾಯಣ ಬಿಡುಗಡೆ ಮಾಡಿದರು. ಅಗ್ರಹಾರ ಕೃಷ್ಣಮೂರ್ತಿ, ಪ್ರೊ.ಮಲ್ಲೇಪುರ ಜಿ. ವೆಂಕಟೇಶ್, ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಕೆ.ಆರ್.ವೇಣುಗೋಪಾಲ್, ಕೆ.ಮರುಳ ಸಿದ್ದಪ್ಪ, ಡಾ.ಕರೀಗೌಡ ಬೀಚನಹಳ್ಳಿ ಇದ್ದರು
ಡಾ.ಕರೀಗೌಡ ಬೀಚನಹಳ್ಳಿ ಅವರ ಬದುಕು– ಕೃತಿಗಳ ವಿಮರ್ಶಾ ಗ್ರಂಥವನ್ನು ಸಚಿವ ಸಿ.ಎನ್.ಅಶ್ವತ್ಥನಾರಾಯಣ ಬಿಡುಗಡೆ ಮಾಡಿದರು. ಅಗ್ರಹಾರ ಕೃಷ್ಣಮೂರ್ತಿ, ಪ್ರೊ.ಮಲ್ಲೇಪುರ ಜಿ. ವೆಂಕಟೇಶ್, ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಕೆ.ಆರ್.ವೇಣುಗೋಪಾಲ್, ಕೆ.ಮರುಳ ಸಿದ್ದಪ್ಪ, ಡಾ.ಕರೀಗೌಡ ಬೀಚನಹಳ್ಳಿ ಇದ್ದರು   

ಕೆಂಗೇರಿ: ‘ಗ್ರಾಮೀಣ ಭಾಗದ ಜನಜೀವನ ಮತ್ತು ಮೌಲ್ಯಗಳನ್ನು ಲೇಖಕ ಕರೀಗೌಡ ಬೀಚನಹಳ್ಳಿ ಅವರು 40 ವರ್ಷಗಳ ತಮ್ಮ ಸಾಹಿತ್ಯದಲ್ಲಿ ಕಟ್ಟಿಕೊಟ್ಟಿದ್ದಾರೆ’ ಎಂದು ಲೇಖಕ ಅಗ್ರಹಾರ ಕೃಷ್ಣಮೂರ್ತಿ ತಿಳಿಸಿದರು.

ಸಂಚಲನ ಸಾಂಸ್ಕೃತಿಕ ವೇದಿಕೆ, ಕಿರಂ ಪ್ರಕಾಶನ ಆಯೋಜಿಸಿದ್ದ ಡಾ.ಕರೀಗೌಡ ಬೀಚನಹಳ್ಳಿ ಅವರ ಬದುಕು–ಕೃತಿಗಳ ವಿಮರ್ಶಾ ಗ್ರಂಥ ‘ಸಾಂಗತ್ಯ’ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ತಮ್ಮ ಕಥಾ ಗುಚ್ಛದೊಳಗೆ ಸಾಂಗತ್ಯದ ಪರಿಕಲ್ಪನೆಯನ್ನು ಅನೇಕ ಪಾತ್ರಗಳ ಮೂಲಕ ಕಟ್ಟಿಕೊಟ್ಟಿದ್ದಾರೆ. ಗ್ರಾಮೀಣ ಬದುಕಿನಲ್ಲಿ ಮುಸಲ್ಮಾನರು ಇತರ ಸಮುದಾಯಗಳ ಜತೆಗೆ ಹೇಗೆ ಸೌಹಾರ್ದಯುತವಾಗಿ ಜೀವನ ನಡೆಸುತ್ತಿದ್ದರು. ಒಂದೇ ಮನೆಯವರಂತೆ ಬದುಕುತ್ತಿದ್ದರು ಎಂಬುದನ್ನೂ ತಮ್ಮ ಬರಹಗಳಲ್ಲಿ ವಿವರಿಸಿದ್ದಾರೆ’ ಎಂದರು.

ADVERTISEMENT

‘700 ಪುಟಗಳ ಈ ಸಾಂಗತ್ಯದಲ್ಲಿ ಕರೀಗೌಡರ ಅನೇಕ ಗೆಳೆಯರು, ಶಿಷ್ಯರು, ಪಿಎಚ್‌.ಡಿ ಮಾರ್ಗದರ್ಶನ ಪಡೆದ ವಿದ್ಯಾರ್ಥಿಗಳು ಲೇಖನಗಳನ್ನು ಬರೆದಿದ್ದಾರೆ. ಕರೀಗೌಡರ ಬದುಕು ಮತ್ತು ಕೃತಿಗಳ ವಿಮರ್ಶೆಯಷ್ಟೇ ಅಲ್ಲದೇ, ಸಾಹಿತ್ಯದ ಹಲವು ಪ್ರಕಾರಗಳ ವಿಮರ್ಶೆಯನ್ನೂ ಈ ಕೃತಿ ಒಳಗೊಂಡಿದೆ. ಈ ಭಾಗವು ಕೃತಿಯ ಮೌಲ್ಯವನ್ನು ಇನ್ನಷ್ಟು ಹೆಚ್ಚಿಸಿದೆ. ಓದುಗರಿಗೆ ಉಪಯುಕ್ತವೂ ಆಗಿದೆ’ ಎಂದು ವಿವರಿಸಿದರು.

ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಕೆ.ಮರುಳಸಿದ್ದಪ್ಪ ಮಾತನಾಡಿ, ‘ಅನ್ಯ ಭಾಷೆಗಳಿಗೆ ಹೋಲಿಸಿದರೆ ಕನ್ನಡ ಕಥಾ ಪರಂಪರೆ ಅತ್ಯಂತ ಶ್ರೀಮಂತವಾಗಿದೆ. ಕರೀಗೌಡ ಬೀಚನಹಳ್ಳಿ ಅವರಂತೆ ನೂರಾರು ಲೇಖಕರು ಕನ್ನಡ ಕಥಾ ಪರಂಪರೆಯನ್ನು ಸೃಜನಶೀಲವಾಗಿಸಿದ್ದಾರೆ’ ಎಂದು ಬಣ್ಣಿಸಿದರು.

‘ಸತ್ಸಮಾಜ ನಿರ್ಮಾಣದಲ್ಲಿ ಸಾಹಿತಿಗಳು ಹಾಗೂ ಶಿಕ್ಷಕರ ಪಾತ್ರ ಅತೀ ಮುಖ್ಯ’ ಎಂದು ಕರೀಗೌಡ ಬೀಚನಹಳ್ಳಿ ಹೇಳಿದರು. ‌ಉನ್ನತ ಶಿಕ್ಷಣ ಸಚಿವ ಸಿ.ಎನ್.ಅಶ್ವತ್ಥನಾರಾಯಣ ಅವರು ಕೃತಿ ಬಿಡುಗಡೆ ಮಾಡಿ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.