ADVERTISEMENT

ಶೀಲ ಶಂಕೆ: ಎರಡನೇ ಪತ್ನಿಯನ್ನು ಕೊಂದ ಆರೋಪಿ ಬಂಧನ

ಕೆಂಗೇರಿಯಲ್ಲಿ ಮೃತದೇಹ ಪತ್ತೆಯಾಗಿದ್ದ ಪ್ರಕರಣ

​ಪ್ರಜಾವಾಣಿ ವಾರ್ತೆ
Published 13 ಜುಲೈ 2022, 5:25 IST
Last Updated 13 ಜುಲೈ 2022, 5:25 IST
   

ಬೆಂಗಳೂರು: ಕೆಂಗೇರಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ನಗೀನಾ ಖಾನಂ ಎಂಬುವವರ ಕೊಲೆ ಪ್ರಕರಣ ಸಂಬಂಧ, ಅವರ ಪತಿ ರಫೀಕ್ ಹಾಗೂ ಆತನ ಸ್ನೇಹಿತ ಪ್ರಜ್ವಲ್‌ ಅವರನ್ನು ಪೊಲೀಸರು ಬಂಧಿಸಿದ್ದಾರೆ.

‘ನಗೀನಾ ಅವರ ಮೃತದೇಹ ಸುಟ್ಟ ಸ್ಥಿತಿಯಲ್ಲಿ ಜುಲೈ 3ರಂದು ಪತ್ತೆಯಾಗಿತ್ತು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ರಫೀಕ್ ಹಾಗೂ ಪ್ರಜ್ವಲ್‌ನನ್ನು ವಿಜಯಪುರದಲ್ಲಿ ಬಂಧಿಸಿ ನಗರಕ್ಕೆ ಕರೆತರಲಾಗಿದೆ’ ಎಂದು ಪೊಲೀಸರು ಹೇಳಿದರು.

ಎರಡನೇ ಮದುವೆ: ‘ಯಾದಗಿರಿಯ ರಫೀಕ್‌ ಕೆಲಸಕ್ಕಾಗಿ ಬೆಂಗಳೂರಿಗೆ ಬಂದಿದ್ದ. ವಾಹನ ಚಾಲಕನಾಗಿ ಕೆಲಸ ಆರಂಭಿಸಿದ್ದ. ಮೊದಲ ಪತ್ನಿಯಿಂದ ದೂರವಿದ್ದ ರಫೀಕ್‌ಗೆ ನಗೀನಾ ಪರಿಚಯವಾಗಿತ್ತು. ಸಲುಗೆಯೂ ಬೆಳೆದಿತ್ತು. ಪತಿ ತೊರೆದಿದ್ದ ನಗೀನಾ, ರಫೀಕ್‌ನನ್ನು ಎರಡನೇ ಮದುವೆಯಾಗಿದ್ದರು’ ಎಂದು ಪೊಲೀಸರು ತಿಳಿಸಿದರು.

‘ಪರ ಪುರುಷನ ಜೊತೆ ನಗೀನಾ ಅಕ್ರಮ ಸಂಬಂಧವಿಟ್ಟುಕೊಂಡಿದ್ದ ಸಂಶಯ ರಫೀಕ್‌ಗೆ ಬಂದಿತ್ತು. ಇದೇ ವಿಚಾರಕ್ಕೆ ಹಲವು ಬಾರಿ ಮನೆಯಲ್ಲಿ ಜಗಳ ಆಗಿತ್ತು. ಕೆಲ ದಿನಗಳ ಹಿಂದೆಯಷ್ಟೇ ಪರ ಪುರುಷನ ಜೊತೆ ನಗೀನಾ ಇದ್ದಿದ್ದನ್ನು ರಫೀಕ್ ನೋಡಿದ್ದ. ಅಂದಿನಿಂದಲೇ ಆಕೆಯನ್ನು ಕೊಲೆ ಮಾಡಬೇಕೆಂದು ಸಂಚು ರೂಪಿಸುತ್ತಿದ್ದ.’

‘ಕೆಲಸದ ಸ್ಥಳದಲ್ಲಿ ಪರಿಚಯವಾಗಿದ್ದ ಪ್ರಜ್ವಲ್‌ಗೆ ವಿಷಯ ತಿಳಿಸಿದ್ದ. ಪತ್ನಿಯನ್ನು ಕೊಲ್ಲಲು ಸಹಾಯ ಮಾಡುವಂತೆ ಕೋರಿದ್ದರು. ಅದಕ್ಕೆ ಪ್ರಜ್ವಲ್ ಒಪ್ಪಿಕೊಂಡಿದ್ದ’ ಎಂದೂ ಹೇಳಿದರು.

ಕರೆ ಮಾಡಿ, ಕರೆಸಿ ಹತ್ಯೆ: ‘ನಗೀನಾ ಅವರಿಗೆ ಕರೆ ಮಾಡಿದ್ದ ರಫೀಕ್, ‘ನಾನು ಮದ್ಯ ಕುಡಿದು ಬಿದ್ದಿದ್ದೇನೆ. ಬಂದು ಕರೆದುಕೊಂಡು ಹೋಗು’ ಎಂದಿದ್ದ. ಮಾತು ನಂಬಿದ್ದ ನಗೀನಾ, ನೈಸ್ ರಸ್ತೆಗೆ ಹೊಂದಿಕೊಂಡಿರುವ ರಾಮಸಂದ್ರ ಬಳಿಯ ನಿರ್ಜನ ಪ್ರದೇಶಕ್ಕೆ ಹೋಗಿದ್ದರು’ ಎಂದು ಪೊಲೀಸರು ತಿಳಿಸಿದರು.

‘ನಗೀನಾ ಬರುತ್ತಿದ್ದಂತೆ ಜಗಳ ತೆಗೆದಿದ್ದ ರಫೀಕ್ ಹಲ್ಲೆ ಮಾಡಿದ್ದ. ನಂತರ, ಪ್ರಜ್ವಲ್‌ ಜೊತೆ ಸೇರಿ ಕತ್ತು ಹಿಸುಕಿ ಕೊಲೆ ಮಾಡಿದ್ದ. ಮೃತದೇಹದ ಗುರುತು ಸಿಗಬಾರದೆಂದು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಇಬ್ಬರೂ ಆರೋಪಿಗಳು ಪರಾರಿಯಾಗಿದ್ದರು’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.