ADVERTISEMENT

ಜನ್ಮದಿನವೇ ಹೇಮಂತ್ ಕೊಲೆ: ರೌಡಿ ಮೊಬೈಲ್‌ನಲ್ಲಿ ವಿಡಿಯೊ, ಪ್ರಕರಣಕ್ಕೆ ಹೊಸ ತಿರುವು

​ಪ್ರಜಾವಾಣಿ ವಾರ್ತೆ
Published 24 ಜುಲೈ 2022, 5:03 IST
Last Updated 24 ಜುಲೈ 2022, 5:03 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಕೆಂಗೇರಿ ಠಾಣೆ ವ್ಯಾಪ್ತಿಯಲ್ಲಿ ಇತ್ತೀಚೆಗೆ ನಡೆದಿದ್ದ ಹೇಮಂತ್‌ಕುಮಾರ್ ಅಲಿಯಾಸ್ ದಿಲೀಪ್ (26) ಎಂಬುವರ ಕೊಲೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ಕೊಲೆ ದೃಶ್ಯದ ವಿಡಿಯೊವೊಂದು ರೌಡಿ ಕುಳ್ಳ ರಿಜ್ವಾನ್ ಮೊಬೈಲ್‌ನಲ್ಲಿ ಪತ್ತೆಯಾಗಿದೆ.

ಹೆಮ್ಮಿಗೆಪುರದ ಎಚ್‌. ಗೊಲ್ಲಹಳ್ಳಿ ನಿವಾಸಿ ಹೇಮಂತ್‌ ಅವರನ್ನು ಜುಲೈ 16ರಂದು ಜನ್ಮದಿನವೇ ದುಷ್ಕರ್ಮಿಗಳು ಕೊಲೆ ಮಾಡಿದ್ದರು. ಜುಲೈ 17ರಂದು ಬೆಳಿಗ್ಗೆ ನೈಸ್ ರಸ್ತೆ ಬಳಿ ಮೃತದೇಹ ಪತ್ತೆಯಾಗಿತ್ತು. ಆದರೆ, ಪೊಲೀಸರಿಗೆ ಆರೋಪಿಗಳ ಸುಳಿವು ಸಿಕ್ಕಿರಲಿಲ್ಲ.

ಎದುರಾಳಿಗಳ ಹತ್ಯೆಗೆ ಸಂಚು ರೂಪಿಸಿದ್ದ ಆರೋಪದಡಿ ಶಿವಮೊಗ್ಗದ ರಿಜ್ವಾನ್ ಪಾಷಾ ಅಲಿಯಾಸ್ ಕುಳ್ಳ ರಿಜ್ವಾನ್‌ನನ್ನು (37) ಕೆಂಪೇಗೌಡ ನಗರ ಠಾಣೆ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಈತನ ಮೊಬೈಲ್‌ನಲ್ಲಿ ಹೇಮಂತ್‌ಕುಮಾರ್ ಕೊಲೆ ದೃಶ್ಯದ ವಿಡಿಯೊ ಇದ್ದು, ಈ ಬಗ್ಗೆ ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ.

ADVERTISEMENT

‘ಬಾಸ್’ ಗೊತ್ತಿಲ್ಲವೆಂದಿದ್ದಕ್ಕೆ ಸಹಚರರಿಂದ ಕೃತ್ಯ: ‘ಹೇಮಂತ್‌ಕುಮಾರ್ ಹುಟ್ಟುಹಬ್ಬ ಆಚರಿಸಿಕೊಳ್ಳಲು ಸ್ನೇಹಿತರ ಜೊತೆ ಹೋಗಿದ್ದರು. ನೈಸ್ ರಸ್ತೆಯ ಕೆಳ ಸೇತುವೆಯಲ್ಲಿ ಮದ್ಯದ ಪಾರ್ಟಿ ಮಾಡುತ್ತಿದ್ದರು. ಅದೇ ಸಂದರ್ಭದಲ್ಲೇ ರೌಡಿಗಳ ಬಗ್ಗೆ ಸ್ನೇಹಿತರು ಪರಸ್ಪರ ಮಾತನಾಡಲಾರಂಭಿಸಿದ್ದರು. ಅದೇ ಸ್ಥಳಕ್ಕೆ ಸಮೀಪದಲ್ಲೇ ಕುಳ್ಳ ರಿಜ್ವಾನ್ ಸಹಚರರು ಕುಳಿತಿದ್ದರು’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಬೆಂಗಳೂರಿನಲ್ಲಿ ಎಲ್ಲ ರೌಡಿಗಳು ಸತ್ತಿದ್ದಾರೆ. ಈಗ ಯಾರೂ ಇಲ್ಲ’ ಎಂದು ಹೇಮಂತ್ ಹೇಳಿದ್ದರು. ಅದನ್ನು ಕೇಳಿಸಿಕೊಂಡು ಹೇಮಂತ್ ಬಳಿ ಹೋಗಿದ್ದ ರಿಜ್ವಾನ್ ಸಹಚರರು, ‘ನಮ್ಮ ಬಾಸ್ ಇದ್ದಾರೆ’ ಎಂದು ಜೋರಾಗಿ ಹೇಳಿದ್ದರು. ಬಾಸ್ ಯಾರೆಂಬುದೇ ಗೊತ್ತಿಲ್ಲವೆಂದು ಹೇಮಂತ್ ಹೇಳಿದ್ದರು. ಅಷ್ಟಕ್ಕೆ ಕೋಪಗೊಂಡ ಆರೋಪಿಗಳು, ಹೇಮಂತ್‌ ಅವರನ್ನು ಕೊಲೆ ಮಾಡಿದ್ದರು. ಅದರ ವಿಡಿಯೊವನ್ನು ಚಿತ್ರೀಕರಿಸಿ ರಿಜ್ವಾನ್‌ಗೆ ಕಳುಹಿಸಿದ್ದರೆಂಬ ಸಂಗತಿ ತನಿಖೆಯಿಂದ ಗೊತ್ತಾಗಿದೆ’ ಎಂದೂ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.