ADVERTISEMENT

‘ಕೆಜಿಎಫ್’ ಟಿಕೆಟ್‌ಗಾಗಿ ಬೆರಳು ಕತ್ತರಿಸಿದ!

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2018, 20:41 IST
Last Updated 20 ಡಿಸೆಂಬರ್ 2018, 20:41 IST
ರಮೇಶ್
ರಮೇಶ್   

ಬೆಂಗಳೂರು: ನಟ ಯಶ್ ಅಭಿನಯದ ‘ಕೆಜಿಎಫ್’ ಚಿತ್ರದ ಟಿಕೆಟ್‌ ಕೊಡಲಿಲ್ಲ ಎಂಬ ಕಾರಣಕ್ಕೆ ಮಾಗಡಿ ರಸ್ತೆಯ ವೀರೇಶ್ ಚಿತ್ರಮಂದಿರದ ನೌಕರನೊಬ್ಬನ ಬೆರಳು ಕತ್ತರಿಸಿದ ಬ್ಲಾಕ್‌ ಟಿಕೆಟ್ ದಂಧೆಕೋರನೊಬ್ಬ ವಿಜಯನಗರ ಪೊಲೀಸರ ಅತಿಥಿಯಾಗಿದ್ದಾನೆ.

ಕೆಜಿಎಫ್ ಚಿತ್ರಕ್ಕೆ ‌ಡಿ.13ರಿಂದಲೇ ಟಿಕೆಟ್ ಕೊಡಲಾಗುತ್ತಿತ್ತು. ಡಿ.17ರ ಸಂಜೆ 6 ಗಂಟೆ ಸುಮಾರಿಗೆ ಚಿತ್ರಮಂದಿರದ ಬಳಿ ತೆರಳಿದ ದಾಸರಹಳ್ಳಿಯ ರಮೇಶ್ (39) ಎಂಬಾತ, ತನಗೆ ಟಿಕೆಟ್‌ಗಳನ್ನು ಕೊಡಿಸುವಂತೆ ಅಲ್ಲಿನ ಸ್ವಚ್ಛತಾ ಕೆಲಸಗಾರ ಅರವಿಂದ್ ಬಳಿ ಕೇಳಿದ್ದ. ಅದಕ್ಕೆ ಆತ ಒಪ್ಪದಿದ್ದಾಗ ಜಗಳ ತೆಗೆದು ಚಾಕುವಿನಿಂದ ಹಲ್ಲೆ ನಡೆಸಿದ್ದ ಎಂದು ಪೊಲೀಸರು ಹೇಳಿದ್ದಾರೆ.

‘ನಾನು 11 ವರ್ಷದಿಂದ ಚಿತ್ರಮಂದಿರದಲ್ಲಿ ಕೆಲಸ ಮಾಡುತ್ತಿದ್ದೇನೆ. ಆಗಾಗ್ಗೆ ಬ್ಲಾಕ್ ಟಿಕೆಟ್ ಮಾರಲು ಬರುತ್ತಿದ್ದ ರಮೇಶ್ ಜತೆ ನನಗೆ ಪರಿಚಯವಿತ್ತು. ಸೋಮವಾರ ಪಾನಮತ್ತನಾಗಿ ಬಂದು ಕೂಗಾಡುತ್ತಿದ್ದ ಆತನನ್ನು ಗೇಟ್‌ನಿಂದ ಹೊರ ಹಾಕಿದ್ದೆ. 15 ನಿಮಿಷಗಳ ನಂತರ ಪುನಃ ಬಂದ ಆತ, ಚಾಕುವಿನಿಂದ ನನ್ನ ಹೊಟ್ಟೆಗೆ ಇರಿಯಲು ಯತ್ನಿಸಿದ. ಆಗ ಕೈಗಳನ್ನು ಅಡ್ಡಕೊಟ್ಟಿದ್ದರಿಂದ ಉಂಗುರದ ಬೆರಳು ತುಂಡಾಯಿತು’ ಎಂದು ಅರವಿಂದ್ ದೂರಿನಲ್ಲಿ ವಿವರಿಸಿದ್ದಾರೆ.

ADVERTISEMENT

‘ಜನ ಸೇರುತ್ತಿದ್ದಂತೆಯೇ ರಮೇಶ್ ಅಲ್ಲಿಂದ ಓಡಿ ಹೋದ. ನಂತರ ನನ್ನನ್ನು ಗಾಯತ್ರಿ ಆಸ್ಪತ್ರೆಗೆ ದಾಖಲಿಸಿದ ಸ್ನೇಹಿತರು, ಪೊಲೀಸ್ ನಿಯಂತ್ರಣ ಕೊಠಡಿಗೆ (100) ವಿಷಯ ಮುಟ್ಟಿಸಿದರು’ ಎಂದು ತಿಳಿಸಿದ್ದಾರೆ.

ಪಕ್ಕದ ರಸ್ತೆಯಲ್ಲೇ ಸಿಕ್ಕ: ಕರೆ ಬಂದ ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಹೊಯ್ಸಳ ಪೊಲೀಸರು, ಪ್ರತ್ಯಕ್ಷದರ್ಶಿಯೊಬ್ಬರನ್ನು ವಾಹನದಲ್ಲಿ ಕೂರಿಸಿಕೊಂಡು ಆರೋಪಿಯ ಶೋಧ ಪ್ರಾರಂಭಿಸಿದರು. ಚಿತ್ರಮಂದಿರದ ಪಕ್ಕದ ರಸ್ತೆಯಲ್ಲೇ ನಡೆದು ಹೋಗುತ್ತಿದ್ದ ರಮೇಶ್, ಹೊಯ್ಸಳ ನೋಡುತ್ತಿದ್ದಂತೆಯೇ ಓಡಲಾರಂಭಿಸಿದ. ಆಗ ಸಿಬ್ಬಂದಿ ಬೆನ್ನಟ್ಟಿ ಹಿಡಿದು ಠಾಣೆಗೆ ಕರೆತಂದರು ಎಂದು ಪೊಲೀಸರು ಮಾಹಿತಿ ನೀಡಿದರು.

ಮೊದಲು ಕೂಲಿ ಕೆಲಸ ಮಾಡುತ್ತಿದ್ದ ರಮೇಶ್, ಈ ನಡುವೆ ಮಾಗಡಿ ರಸ್ತೆ ಹಾಗೂ ಮೆಜೆಸ್ಟಿಕ್ ಸುತ್ತಮುತ್ತಲ ಚಿತ್ರಮಂದಿರಗಳ ಬಳಿ ಬ್ಲಾಕ್ ಟಿಕೆಟ್ ಮಾರಾಟ ಮಾಡಿಯೇ ಜೀವನ ನಡೆಸುತ್ತಿದ್ದ. ಕೊಲೆಯತ್ನ (ಐಪಿಸಿ 307) ಆರೋಪದಡಿ ಪ್ರಕರಣ ದಾಖಲಿಸಿ, ಆತನನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.