ADVERTISEMENT

ಕೆಐಎ ವಿಮಾನ ನಿಲ್ದಾಣ: 450 ಕಡೆ ಸ್ಯಾನಿಟೈಸರ್ ವ್ಯವಸ್ಥೆ

ಹೊರದೇಶದ ಪ್ರಯಾಣಿಕರ ಮೇಲೆ ನಿಗಾ l ಸ್ವಚ್ಛತೆ ಕೆಲಸ ನಿರಂತರ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2020, 22:01 IST
Last Updated 16 ಮಾರ್ಚ್ 2020, 22:01 IST
ನಗರದ ಕೆಂಪೇಗೌಡ ವಿಮಾನ ನಿಲ್ದಾಣದ ಸ್ವಚ್ಛ ಮಾಡಿದ ಸಿಬ್ಬಂದಿ
ನಗರದ ಕೆಂಪೇಗೌಡ ವಿಮಾನ ನಿಲ್ದಾಣದ ಸ್ವಚ್ಛ ಮಾಡಿದ ಸಿಬ್ಬಂದಿ   

ಬೆಂಗಳೂರು: ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ನಗರದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯುವ ಹೊರದೇಶಗಳ ಪ್ರಯಾಣಿಕರ ಮೇಲೆ ಹೆಚ್ಚಿನ ನಿಗಾ ವಹಿಸಲಾಗಿದೆ. ನಿಲ್ದಾಣದ 450 ಕಡೆಗಳಲ್ಲಿ ಸ್ಯಾನಿಟೈಸರ್‌ ವ್ಯವಸ್ಥೆ ಮಾಡಲಾಗಿದೆ.

ವಿಮಾನಗಳು ಬಂದಿಳಿಯುವ ನಿಲ್ದಾಣದ ಪ್ರವೇಶದ್ವಾರದಲ್ಲೇ ಆರೋಗ್ಯ ಇಲಾಖೆ ಹಾಗೂ ವಿಮಾನ ನಿಲ್ದಾಣ ಆರೋಗ್ಯ ಪ್ರಾಧಿಕಾರದ ಸಿಬ್ಬಂದಿ ಪ್ರಯಾಣಿಕರ ತಪಾಸಣೆ ಮಾಡುತ್ತಿದ್ದಾರೆ. ಜೊತೆಗೆ, ನಿಲ್ದಾಣವನ್ನು ಸದಾ ಸ್ವಚ್ಛವಾಗಿಡುವಂತೆಯೂ ಆಡಳಿತ ಮಂಡಳಿಗೆ ಸೂಚಿಸಲಾಗಿದೆ.

ನಿಲ್ದಾಣದ ಶೌಚಾಲಯಗಳು, ಕುರ್ಚಿಗಳು, ಎಲಿವೇಟರ್, ಪ್ರವೇಶ ದ್ವಾರಗಳು, ಟಿಕೆಟ್ ಕೌಂಟರ್‌ಗಳು, ಲಗೇಜು ಇಡುವ ಜಾಗ ಸೇರಿದಂತೆ ಎಲ್ಲ ಸ್ಥಳಗಳನ್ನೂ ಸಿಬ್ಬಂದಿ ನಿರಂತರವಾಗಿ ಸ್ವಚ್ಛ ಮಾಡುತ್ತಿದ್ದಾರೆ. ಪ್ರತಿಯೊಂದು ಕಡೆಯೂ ಔಷಧವನ್ನೂ ಸಿಂಪರಣೆ ಮಾಡುತ್ತಿದ್ದಾರೆ.

ADVERTISEMENT

ನಿಲ್ದಾಣದ ಸಿಬ್ಬಂದಿ ಆರೋಗ್ಯದ ಮೇಲೂ ನಿಗಾ ವಹಿಸಲಾಗಿದೆ. ಕೆಲಸಕ್ಕೆ ಬರುವ ಮುಂಚೆ ಹಾಗೂ ಕೆಲಸ ಮುಗಿಸಿ ಹೋಗುವಾಗಲೂ ತಪಾಸಣೆ ನಡೆಸಲಾಗುತ್ತಿದೆ.

ನಿಲ್ದಾಣದ 450 ಕಡೆಗಳಲ್ಲಿ ಸ್ಯಾನಿಟೈಸರ್‌ಗಳನ್ನು ಇರಿಸಲಾಗಿದ್ದು, ಅವುಗಳನ್ನು ಪ್ರಯಾಣಿಕರು ಬಳಕೆ ಮಾಡುತ್ತಿದ್ದಾರೆ. ಸ್ಯಾನಿಟೈಸರ್‌
ಖಾಲಿಯಾಗುತ್ತಿದ್ದಂತೆ ಪುನಃ ಭರ್ತಿ ಮಾಡಲು ಸಿಬ್ಬಂದಿಗೆ ಜವಾಬ್ದಾರಿ ವಹಿಸಲಾಗಿದೆ.

‘ಅತಿ ಹೆಚ್ಚು ’ಕೋವಿಡ್–19’ ಪ್ರಕರಣಗಳು ಕಂಡುಬಂದ ದೇಶದಿಂದ ಬರುವ ಪ್ರಯಾಣಿಕರ ಮೇಲೆ ಹೆಚ್ಚಿನ ನಿಗಾ ವಹಿಸಲಾಗಿದೆ. ಅಂಥ ಪ್ರಯಾಣಿಕರ ಆರೋಗ್ಯ ತಪಾಸಣೆ ನಡೆಸಿ ಪ್ರಮಾಣ ಪತ್ರವನ್ನೂ ನೀಡಲಾಗುತ್ತಿದೆ. ಅನುಮಾನ ಬಂದವರನ್ನು ಕೂಡಲೇ ಆಸ್ಪತ್ರೆಗೆ ಕಳುಹಿಸುವ ವ್ಯವಸ್ಥೆಯನ್ನೂ ಮಾಡಲಾಗಿದೆ’ ಎಂದು ನಿಲ್ದಾಣದ ಪ್ರತಿನಿಧಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.