ADVERTISEMENT

ಸಂಬಳ ಕೊಡದಿದ್ದಕ್ಕೆ ಅಪಹರಣ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2019, 19:37 IST
Last Updated 9 ಏಪ್ರಿಲ್ 2019, 19:37 IST
ನಿರಂಜನ್
ನಿರಂಜನ್   

ಬೆಂಗಳೂರು: ಸಂಬಳ ನೀಡದೇ ಸತಾಯಿಸುತ್ತಿದ್ದರೆಂಬ ಕಾರಣಕ್ಕೆ ಮಾಲೀಕನನ್ನೇ ಅಪಹರಿಸಿದ್ದ ಆರೋಪದಡಿ ನಾಲ್ವರನ್ನು ಹಲಸೂರು ಪೊಲೀಸರು ಬಂಧಿಸಿದ್ದಾರೆ.

‘ಸಂಜಯ್ (23), ರಾಕೇಶ್ (23), ನಿರಂಜನ್ (25) ಮತ್ತು ದರ್ಶನ್ (25) ಬಂಧಿತರು. ಕೂಡ್ಲು ಬಳಿಯ ಇನ್ಫೊಟೆಕ್‌ ಸಾಫ್ಟ್‌ವೇರ್‌ ಕಂಪನಿಯ ಮಾಲೀಕ ಎಸ್‌.ಕೆ. ಸುಜಯ್ ನೀಡಿದ್ದ ದೂರಿನಡಿ ಆರೋಪಿಗಳನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಸ್ವಂತ ಕಂಪನಿ ಆರಂಭಿಸಿದ್ದ ಸುಜಯ್, ಆರೋಪಿಗಳನ್ನು ಕೆಲಸಕ್ಕೆ ನೇಮಿಸಿಕೊಂಡಿದ್ದರು. ನಷ್ಟ ಉಂಟಾಗಿದ್ದರಿಂದ ಕಂಪನಿಯನ್ನೇ ಬಂದ್ ಮಾಡಿದ್ದರು. ಕೆಲಸಗಾರರಿಗೆ ಮೂರು ತಿಂಗಳು ಸಂಬಳ ನೀಡಿರಲಿಲ್ಲ. ಆ ಬಗ್ಗೆ ವಿಚಾರಿಸಿದಾಗ, ‘ನಾಳೆ, ನಾಡಿದ್ದು’ ಎಂದು ಸಬೂಬು ಹೇಳುತ್ತಿದ್ದರು. ಅದರಿಂದ ಕೋಪಗೊಂಡ ಆರೋಪಿಗಳು, ಸಂಚು ರೂಪಿಸಿ ಮಾಲೀಕನನ್ನು ಅಪಹರಿಸಿದ್ದರು’ ಎಂದು ತಿಳಿಸಿದರು.

ADVERTISEMENT

ಅಕ್ರಮ ಬಂಧನದಲ್ಲಿಟ್ಟು ಕಿರುಕುಳ: ‘ಸಂಬಳದ ಬಗ್ಗೆ ಮಾತನಾಡಬೇಕೆಂದು ಹೇಳಿ ಮಾರ್ಚ್‌ 21ರಂದು ಸುಜಯ್‌ ಅವರಿಗೆ ಕರೆ ಮಾಡಿದ್ದ ಆರೋಪಿಗಳು, ಕೆಂಬ್ರಿಡ್ಜ್‌ ಲೇಔಟ್‌ಗೆ ಕರೆಸಿಕೊಂಡಿದ್ದರು. ಅಲ್ಲಿಂದಲೇ ಮಾಲೀಕನನ್ನು ಕಾರಿನಲ್ಲಿ ಅಪಹರಿಸಿಕೊಂಡು ಎಚ್‌ಎಸ್‌ಆರ್‌ ಲೇಔಟ್‌ನಲ್ಲಿರುವ ಮನೆಯೊಂದಕ್ಕೆ ಕರೆದೊಯ್ದು ಅಕ್ರಮ ಬಂಧನದಲ್ಲಿಟ್ಟಿದ್ದರು’ ಎಂದು ಪೊಲೀಸರು ಹೇಳಿದರು.

‘ಮಾಲೀಕನ ಬೆನ್ನು, ಕೈ ಹಾಗೂ ಕಾಲಿಗೆ ರಾಡ್‌ನಿಂದ ಹೊಡೆದಿದ್ದ ಆರೋಪಿಗಳು, ಕಿರುಕುಳ ನೀಡಿದ್ದರು. ಸಂಬಳ ನೀಡದಿದ್ದರೆ ಕುಟುಂಬದವರಿಗೂ ಕಿರುಕುಳ ನೀಡುವುದಾಗಿ ಬೆದರಿಸಿದ್ದರು. ಸಂಬಳ ನೀಡುವುದಾಗಿ ಭರವಸೆ ನೀಡಿದ್ದರಿಂದ ಮಾಲೀಕನನ್ನು ಬಿಟ್ಟು ಕಳುಹಿಸಿದ್ದರು’

‘ಮಾರ್ಚ್‌ 24ರಂದು ಹಣ ತರಲೆಂದು ಮಾಲೀಕ, ತಮಿಳುನಾಡಿಗೆ ಹೊರಟಿದ್ದರು. ಅಂದು ಎರಡನೇ ಬಾರಿ ಅವರನ್ನು ಅಪಹ ರಿಸಿದ್ದ ಆರೋಪಿಗಳು, ಮದ್ದೂರಿನಲ್ಲಿರುವ ತೋಟದ ಮನೆಗೆ ಕರೆದೊಯ್ದು ಅಕ್ರಮ ಬಂಧನದಲ್ಲಿಟ್ಟಿದ್ದರು. ಅಲ್ಲಿಯೂ ಹಲ್ಲೆ ಮಾಡಿದ್ದರು. ಮಾರ್ಚ್ 26ರಂದು ಬೆಂಗಳೂರಿನ ವಿರೂಪಾಕ್ಷಪುರದಲ್ಲಿ ಬಿಟ್ಟು ಹೋಗಿದ್ದರು’ ಎಂದು ಪೊಲೀಸರು ಹೇಳಿದರು.

ಆತ್ಮಹತ್ಯೆಗೆ ಯತ್ನಿಸಿದ್ದ ಮಾಲೀಕ: ‘ಆರೋಪಿಗಳು ಪದೇ ಪದೇ ಕಿರುಕುಳ ನೀಡುತ್ತಿದ್ದರಿಂದ ನೊಂದಿದ್ದ ಮಾಲೀಕ ಸುಜಯ್, 30 ನಿದ್ರೆ ಮಾತ್ರೆ ಹಾಗೂ ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಅಸ್ವಸ್ಥಗೊಂಡಿದ್ದ ಅವರನ್ನು ಸಂಬಂಧಿಕರು ಆಸ್ಪತ್ರೆಗೆ ದಾಖಲಿಸಿದ್ದರು’ ಎಂದು ಪೊಲೀಸರು ತಿಳಿಸಿದರು.

‘ಆತ್ಮಹತ್ಯೆಗೆ ಕಾರಣ ಕೇಳಿದಾಗ, ಕೆಲಸಗಾರರ ಕಿರುಕುಳದ ಬಗ್ಗೆ ಸುಜಯ್ ಸಂಬಂಧಿಕರಿಗೆ ತಿಳಿಸಿದ್ದರು. ಸಂಬಂಧಿಕರು ನೀಡಿದ್ದ ಮಾಹಿತಿಯಂತೆ ಆಸ್ಪತ್ರೆಗೆ ಹೋಗಿ ಸುಜಯ್ ಅವರ ಹೇಳಿಕೆ ಪಡೆದು ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.