ADVERTISEMENT

‘ಕಳ್ಳ’ ಕೃಷ್ಣನ ಕಾಲಿಗೆ ಪೊಲೀಸರ ಗುಂಡೇಟು

ಯುವಕನ ಅಪಹರಿಸಿ ₹ 5 ಲಕ್ಷಕ್ಕೆ ಬೇಡಿಕೆ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2020, 15:29 IST
Last Updated 24 ಸೆಪ್ಟೆಂಬರ್ 2020, 15:29 IST
   

ಬೆಂಗಳೂರು: ಎಲೆಕ್ಟ್ರಾನಿಕ್ ಸಿಟಿ ಠಾಣೆ ವ್ಯಾಪ್ತಿಯಲ್ಲಿ 24 ವರ್ಷದ ಯುವಕನನ್ನು ಅಪಹರಿಸಿ ₹ 5 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ ಕಳ್ಳ ಅಲಿಯಾಸ್ ಕೃಷ್ಣ (26) ಎಂಬಾತನನ್ನು ಕಾಲಿಗೆ ಗುಂಡು ಹಾರಿಸಿ ಪೊಲೀಸರು ಸೆರೆಹಿಡಿದಿದ್ದಾರೆ.

‘ಸ್ಥಳೀಯ ನಿವಾಸಿಯಾದ ಕೃಷ್ಣ, ಸುಲಿಗೆ, ಕಳ್ಳತನ ಹಾಗೂ ಅಪಹರಣ ಸೇರಿದಂತೆ 11 ಪ್ರಕರಣಗಳಲ್ಲಿ ಭಾಗಿಯಾಗಿದ್ದ. ತನ್ನದೇ ಗ್ಯಾಂಗ್ ಕಟ್ಟಿಕೊಂಡು ಶ್ರೀಮಂತರ ಮಕ್ಕಳನ್ನು ಅಪಹರಿಸಿ ಹಣ ಕಿತ್ತುಕೊಳ್ಳುತ್ತಿದ್ದ. ಆತನನ್ನು ಕಾಲಿಗೆ ಗುಂಡು ಹಾರಿಸಿ ಬುಧವಾರ ಬಂಧಿಸಲಾಗಿದೆ. ಗುಂಡೇಟಿನಿಂದ ಗಾಯಗೊಂಡಿರುವ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ಆಟೊಮೊಬೈಲ್ ಮಳಿಗೆ ಇಟ್ಟುಕೊಂಡಿದ್ದ ವ್ಯಕ್ತಿಯೊಬ್ಬರ ಪುತ್ರನಾದ ಜಾಕಿನ್ ಎಂಬುವರನ್ನು ಕೃಷ್ಣ ಹಾಗೂ ಆತನ ಸಹಚರರು ಇದೇ 22ರಂದು ಅಪಹರಿಸಿದ್ದರು. ಈ ಬಗ್ಗೆ ದೂರು ದಾಖಲಾಗಿತ್ತು. ಕೃಷ್ಣನೇ ಆರೋಪಿ ಎಂಬುದಕ್ಕೆ ಪುರಾವೆಗಳು ಸಿಕ್ಕಿದ್ದವು’

ADVERTISEMENT

‘ಬೇಗೂರು ರಸ್ತೆಯ ನಿರ್ಜನ ಪ್ರದೇಶವೊಂದರಲ್ಲಿ ಆರೋಪಿಗಳು ಅಡಗಿದ್ದರು. ಇನ್‌ಸ್ಪೆಕ್ಟರ್ ಕಿಶೋರ್ ಕುಮಾರ್ ನೇತೃತ್ವದ ತಂಡ ಸ್ಥಳಕ್ಕೆ ಹೋಗಿತ್ತು. ಆರೋಪಿ ಕೃಷ್ಣ, ಡ್ರ್ಯಾಗರ್‌ನಿಂದ ಪಿಎಸ್ಐ ಅಯ್ಯಪ್ಪ ಅವರಿಗೆ ಇರಿದಿದ್ದ. ಆತ್ಮರಕ್ಷಣೆಗಾಗಿ ಇನ್‌ಸ್ಪೆಕ್ಟರ್‌ ಕಿಶೋರ್, ಆರೋಪಿ ಬಲಗಾಲಿಗೆ ಗುಂಡು ಹಾರಿಸಿದ್ದರು. ಆರೋಪಿ ಸ್ಥಳದಲ್ಲೇ ಕುಸಿದು ಬಿದ್ದ’ ಎಂದೂ ತಿಳಿಸಿದರು.

ವಿಡಿಯೊ ಕರೆ ಮಾಡಿ ಬೆದರಿಕೆ; ‘ತಂದೆಯ ಕೆಲಸಕ್ಕೆ ಜಾಕಿನ್ ನೆರವಾಗುತ್ತಿದ್ದರು. ಹಲವು ದಿನಗಳಿಂದ ಆತನನ್ನು ಹಿಂಬಾಲಿಸುತ್ತಿದ್ದ ಆರೋಪಿಗಳು, ಮೈಲಸಂದ್ರದಿಂದ ಅಪಹರಿಸಿದ್ದರು. ಕೆಲ ಗಂಟೆಗಳ ನಂತರ ಮಗನಿಂದಲೇ ತಂದೆಗೆ ವಿಡಿಯೊ ಕರೆ ಮಾಡಿಸಿದ್ದರು. ‘₹5 ಲಕ್ಷ ಕೊಟ್ಟರೆ ಮಾತ್ರ ಮಗನನ್ನು ಬಿಡುತ್ತೇವೆ. ಪೊಲೀಸರ ಕಡೆ ಹೋದರೆ ಮಗ ಬದುಕಿರುವುದಿಲ್ಲ’ ಎಂದು ಆರೋಪಿಗಳು ಬೆದರಿಸಿದ್ದರು’ ಎಂದು ಅಧಿಕಾರಿ ಹೇಳಿದರು.

'ಕೃಷ್ಣನ ಇಬ್ಬರು ಸಹಚರರು ಸ್ಥಳದಿಂದ ಪರಾರಿಯಾಗಿದ್ದಾರೆ. ಇನ್ನು ಹಲವರು ತಲೆಮರೆಸಿಕೊಂಡಿದ್ದಾರೆ. ಈ ಗ್ಯಾಂಗ್‌ ಹಲವೆಡೆ ಕೃತ್ಯ ಎಸಗಿರುವ ಮಾಹಿತಿ ಇದೆ’ ಎಂದೂ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.