ADVERTISEMENT

₹ 12 ಲಕ್ಷಕ್ಕಾಗಿ ಸ್ನೇಹಿತನನ್ನೇ ಅಪಹರಿಸಿದ ಆಸಾಮಿ

ಸಹಚರರೊಂದಿಗೆ ಕೃತ್ಯ l ಕಾರು ವಶಕ್ಕೆ l ಪೊಲೀಸರ ಕ್ಷಿಪ್ರ ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2020, 19:49 IST
Last Updated 11 ಫೆಬ್ರುವರಿ 2020, 19:49 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ₹ 12 ಲಕ್ಷ ಹಣಕ್ಕಾಗಿ ಸಹಚರರ ಜೊತೆ ಸೇರಿ ಸ್ನೇಹಿತನನ್ನೇ ಅಪಹರಿಸಿದ ವ್ಯಕ್ತಿ ಇದೀಗ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಮಲ್ಲೇಶ್ವರದ ಎಂ.ಡಿ. ಬ್ಲಾಕ್‌ ನಿವಾಸಿ, ಒಳಾಂಗಣ ವಿನ್ಯಾಸಗಾರ ಸುದೀಪ್‌ ಅಪಹರಣಕ್ಕೀಡಾದ ಯುವಕ. ಪ್ರಕರಣಕ್ಕೆ ಸಂಬಂಧಿಸಿ ಅದೇ ಪ್ರದೇಶದ ನಿವಾಸಿ, ಗುಜರಿ ಅಂಗಡಿ ನಡೆಸುತ್ತಿರುವ ಸೈಯದ್‌ ರಾಹಿಲ್‌ (27) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಕೃತ್ಯದಲ್ಲಿ ಭಾಗಿಯಾದ ಸೈಯದ್‌ನ ಸಹಚರ ಸುಲ್ತಾನ್‌ ಮತ್ತು ಇತರರು ತಲೆಮರೆಸಿಕೊಂಡಿದ್ದಾರೆ. ಆರೋಪಿಯಿಂದ ಕೃತ್ಯಕ್ಕೆ ಬಳಿಸಿದ ಸ್ವಿಫ್ಟ್‌ ಕಾರು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದರು.

ಏನಿದು ಘಟನೆ: ತಾಯಿ ಜೊತೆ ನೆಲೆಸಿದ್ದ ಸುದೀಪ್‌, ಆಗಾಗ ಕೆ.ಆರ್‌. ಪುರದಲ್ಲಿ ನೆಲೆಸಿರುವ ತನ್ನ ಅಕ್ಕ ಸಚಿತಾ ಶೆಣೈ ಅವರ ಮನೆಗೆ ಹೋಗಿ ಬರುತ್ತಿದ್ದರು. ಫೆ. 8ರಂದು ಸಚಿತಾ ಅವರು ಸಂಬಂಧಿಕರ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಲು ತೆರಳಿದ್ದರು. ಆ ದಿನ ಸುದೀಪ್‌ ಅವರು ಸಚಿತಾ ಅವರ ಮನೆಯಲ್ಲಿದ್ದರು. ಆದರೆ, ಅಂದು ಸಚಿತಾ, ಸುದೀಪ್‌ಗೆ ಹಲವು ಬಾರಿ ಕರೆ ಮಾಡಿದರೂ ಕರೆ ಸ್ವೀಕರಿಸಿರಲಿಲ್ಲ. ಅವರು ಮನೆಗೆ ಬಂದು ನೋಡಿದಾಗಲೂ ಸುದೀಪ್‌ ಇರಲಿಲ್ಲ. ಅಮ್ಮನಿಗೆ ಕರೆ ಮಾಡಿದಾಗ, ಅಲ್ಲಿಗೂ ಬಂದಿಲ್ಲವೆಂದು ತಿಳಿಸಿದ್ದರು.

ADVERTISEMENT

ಮರುದಿನ (ಫೆ. 9) ಬೆಳಿಗ್ಗೆ 9.20ಕ್ಕೆ ಸಚಿತಾ ಅವರ ಮೊಬೈಲ್‌ಗೆ ಅಪರಿಚಿತ ಸಂಖ್ಯೆಯಿಂದ ಕರೆಯೊಂದು ಬಂದಿದ್ದು, ಆಗ ಮಾತನಾಡಿದ ಸುದೀಪ್‌, ‘ನನ್ನ ಮೇಲೆ ಕೆಲವು ವ್ಯಕ್ತಿಗಳು ಹಲ್ಲೆ ಮಾಡಿ ಕಾರಿನಲ್ಲಿ ಕರೆದುಕೊಂಡು ಹೋಗಿ ಘೋರಿಪಾಳ್ಯದ ಸ್ಮಶಾನ ಬಳಿ ಇಟ್ಟುಕೊಂಡಿದ್ದಾರೆ’ ಎಂದು ಕರೆ ಕಡಿತಗೊಳಿಸಿದ್ದರು. ಬೆಳಿಗ್ಗೆ 11 ಗಂಟೆಗೆ ಸಚಿತಾ ಅವರ ಮೊಬೈಲ್‌ಗೆ ಮತ್ತೊಂದು ಅಪರಿಚಿತ ಸಂಖ್ಯೆಯಿಂದ ಕರೆ ಬಂದಿದ್ದು, ಆಗ ಮಾತನಾಡಿದ ಸುದೀಪ್‌, ‘₹ 12 ಲಕ್ಷ ನೀಡಿದರೆ ನನ್ನನ್ನು ಬಿಡುವುದಾಗಿ ಹೇಳುತ್ತಿದ್ದಾರೆ’ ಎಂದು ಕರೆ ಕಡಿತಗೊಳಿಸಿದ್ದರು. ತಕ್ಷಣ ಸಚಿತಾ ಅವರು ಮಲ್ಲೇಶ್ವರ ಪೊಲೀಸ್‌ ಠಾಣೆಗೆ ತೆರಳಿ, ತಮ್ಮನನ್ನು ಅಪಹರಿಸಿರುವ ಆರೋಪಿಗಳನ್ನು ಪತ್ತೆ ಹಚ್ಚುವಂತೆ ದೂರು ನೀಡಿದ್ದರು.

ಅಪಹರಣ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಬೆನ್ನುಬಿದ್ದ ಪೊಲೀಸರು, ಖಚಿತ ಮಾಹಿತಿ ಆಧರಿಸಿ ಸೈಯದ್‌ನನ್ನು ಬಂಧಿಸಿದ್ದರು. ವಿಚಾರಣೆ ನಡೆಸಿದಾಗ ಇಡೀ ಪ್ರಕರಣ ಬಯಲಿಗೆ ಬಂದಿದೆ.

‘ಸಾಲ ತೀರಿಸಲು ಕೃತ್ಯ’

‘ಸೈಯದ್‌ ಮತ್ತು ಸುದೀಪ್‌ ಸುಮಾರು ಐದು ವರ್ಷಗಳಿಂದ ಸ್ನೇಹಿತರಾಗಿದ್ದರು. ಸುದೀಪ್‌ ಅವರಿಂದ ಸೈಯದ್‌ ಹಲವು ಬಾರಿ ಸಾಲ ಪಡೆದುಕೊಂಡಿದ್ದ. ಸುದೀಪ್‌ ಬಳಿ ಆಸ್ತಿ, ಚಿನ್ನಾಭರಣ ಇರುವ ಬಗ್ಗೆ ಮಾಹಿತಿ ಸಂಗ್ರಹಿಸಿದ್ದ. ‌ಲಕ್ಷಾಂತರ ರೂಪಾಯಿ ಸಾಲ ಮಾಡಿಕೊಂಡಿದ್ದ ಸೈಯದ್‌, ಸಾಲಗಾರರ ಕಾಟಕ್ಕೆ ಬೇಸತ್ತು, ತನ್ನ ಸಹಚರ ಸುಲ್ತಾನ್‍ ಜತೆ ಸೇರಿ ಅಪಹರಣಕ್ಕೆ ಸಂಚು ರೂಪಿಸಿದ್ದ’ ಎಂದು ಪೊಲೀಸರು ಹೇಳಿದರು.

‘ಫೆ. 8ರಂದು ರಾತ್ರಿ ಸುದೀಪ್‍ಗೆ ಕರೆ ಮಾಡಿದ ಸೈಯದ್‌, ಆತ ಇರುವ ಸ್ಥಳದ ಬಗ್ಗೆ ಮಾಹಿತಿ ಪಡೆದುಕೊಂಡಿದ್ದ. ಕೆ.ಆರ್. ಪುರದಲ್ಲಿರುವ ಅಕ್ಕನ ಮನೆಗೆ ಹೋಗಿ ಸಮೀಪದ ಬಾರ್‌ನಲ್ಲಿ ಮದ್ಯ ಸೇವಿಸುತ್ತಿದ್ದ ಸುದೀಪ್‌ನನ್ನು ಕಾರಿನಲ್ಲಿ ಅಪಹರಿಸಿ ಘೋರಿಪಾಳ್ಯದ ಸ್ಮಶಾನಕ್ಕೆ ಕರೆದೊಯ್ದಿದ್ದಾರೆ’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.