ADVERTISEMENT

ತಪಾಸಣೆಯಿಂದ ಗರ್ಭಕಂಠದ ಕ್ಯಾನ್ಸರ್ ತಡೆ: ಕಿದ್ವಾಯಿ ನಿರ್ದೇಶಕ ಡಾ.ಟಿ.ನವೀನ್ ಅಭಿಮತ

​ಪ್ರಜಾವಾಣಿ ವಾರ್ತೆ
Published 28 ಜನವರಿ 2026, 16:01 IST
Last Updated 28 ಜನವರಿ 2026, 16:01 IST
ಕಾರ್ಯಕ್ರಮದಲ್ಲಿ ಡಾ.ಟಿ.ನವೀನ್ ಮಾತನಾಡಿದರು. ಸಂಸ್ಥೆಯ ವೈದ್ಯರಾದ ಡಾ.ಕೃಷ್ಣಪ್ಪ, ಡಾ.ಸಿದ್ದಣ್ಣ ಪಲ್ಲೇದ್, ಡಾ.ಅರುಣ್ ಕುಮಾರ್, ಡಾ.ಶೋಭಾ, ಡಾ.ಆರತಿ, ಡಾ.ಎಂಜೇರಪ್ಪ, ಡಾ.ಮಹಾಂತೇಶ್ ಉಪಸ್ಥಿತರಿದ್ದರು
ಕಾರ್ಯಕ್ರಮದಲ್ಲಿ ಡಾ.ಟಿ.ನವೀನ್ ಮಾತನಾಡಿದರು. ಸಂಸ್ಥೆಯ ವೈದ್ಯರಾದ ಡಾ.ಕೃಷ್ಣಪ್ಪ, ಡಾ.ಸಿದ್ದಣ್ಣ ಪಲ್ಲೇದ್, ಡಾ.ಅರುಣ್ ಕುಮಾರ್, ಡಾ.ಶೋಭಾ, ಡಾ.ಆರತಿ, ಡಾ.ಎಂಜೇರಪ್ಪ, ಡಾ.ಮಹಾಂತೇಶ್ ಉಪಸ್ಥಿತರಿದ್ದರು   

ಬೆಂಗಳೂರು: ‘ಭಾರತೀಯ ಮಹಿಳೆಯರು ಎದುರಿಸುತ್ತಿರುವ ಗಂಭೀರ ಅನಾರೋಗ್ಯ ಸಮಸ್ಯೆಗಳಲ್ಲಿ ಗರ್ಭಕಂಠದ ಕ್ಯಾನ್ಸರ್‌ ಕೂಡ ಒಂದಾಗಿದೆ. ಮಹಿಳೆಯರು ನಿಯಮಿತವಾಗಿ ವೈದ್ಯಕೀಯ ತಪಾಸಣೆಗೆ ಒಳಗಾದಲ್ಲಿ ಈ ಕ್ಯಾನ್ಸರ್‌ನಿಂದ ದೂರವಿರಬಹುದು’ ಎಂದು ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ನಿರ್ದೇಶಕ ಡಾ.ಟಿ. ನವೀನ್ ಅಭಿಪ್ರಾಯಪಟ್ಟರು.

ಗರ್ಭಕಂಠದ ಕ್ಯಾನ್ಸರ್‌ ಜಾಗೃತಿ ಮಾಸದ ಪ್ರಯುಕ್ತ ಸಂಸ್ಥೆಯು ನಗರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕ್ಯಾನ್ಸರ್ ಗೆದ್ದವರ ಮನದಾಳದ ಮಾತು ಕಾರ್ಯಕ್ರಮದಲ್ಲಿ ಭಾಗವಹಿಸಿ, ಮಾತನಾಡಿದರು.

‘ಕ್ಯಾನ್ಯರ್‌ ಬಗ್ಗೆ ಜನರಲ್ಲಿ ಜಾಗೃತಿ ಹೆಚ್ಚಾಗಿದ್ದು, ಗರ್ಭಕಂಠದ ಕ್ಯಾನ್ಸರ್‌ ಪ್ರಮಾಣ ನಗರ ಪ್ರದೇಶದಲ್ಲಿ ಇಳಿಕೆಯಾಗುತ್ತಿದೆ. ಗರ್ಭಕಂಠದ ಕ್ಯಾನ್ಸರ್‌‌ಗೆ ಒಳಗಾದವರು ಕೂಡಲೇ ಚಿಕಿತ್ಸೆ ಪಡೆದರೆ ಅಲ್ಪಾವಧಿಯಲ್ಲಿ ಚೇತರಿಸಿಕೊಳ್ಳಬಹುದಾಗಿದೆ. ರಾಜ್ಯದಲ್ಲಿ ಕಳೆದ ವರ್ಷ 89,165 ಸಕ್ರಿಯ ಕ್ಯಾನ್ಸರ್‌ ಪ್ರಕರಣಗಳು ವರದಿಯಾಗಿವೆ. ಅವುಗಳಲ್ಲಿ 4,476 ಪ್ರಕರಣಗಳು ಗರ್ಭಕಂಠದ ಕ್ಯಾನ್ಸರ್‌ ಪ್ರಕರಣಗಳಾಗಿವೆ. ಇತ್ತೀಚಿನ ವರ್ಷಗಳಲ್ಲಿ ಗರ್ಭಕಂಠದ ಕ್ಯಾನ್ಸರ್ ಪ್ರಮಾಣ ಇಳಿಮುಖವಾಗಿದೆ’ ಎಂದರು.

ADVERTISEMENT

ಸಂಸ್ಥೆಯ ನಿವಾಸಿ ವೈದ್ಯಾಧಿಕಾರಿ ಡಾ.ಕೃಷ್ಣಪ್ಪ, ‘ಯಾವುದೇ ವಿಧದ ಕ್ಯಾನ್ಸರ್‌ ಅನ್ನು ಆರಂಭಿಕ ಹಂತದಲ್ಲಿಯೇ ಪತ್ತೆ ಮಾಡಿ, ಚಿಕಿತ್ಸೆ ಒದಗಿಸಿದಲ್ಲಿ ಆರೋಗ್ಯವಂತರಾಗಲು ಸಾಧ್ಯ. ಬದಲಾದ ಜೀವನ ಶೈಲಿ, ಧೂಮಪಾನದಂತಹ ವ್ಯಸನಗಳಿಂದ ಜನರು ಕ್ಯಾನ್ಸರ್‌ಗೆ ಹೆಚ್ಚಿನ ಸಂಖ್ಯೆಯಲ್ಲಿ ಒಳಗಾಗುತ್ತಿದ್ದಾರೆ. ಆರೋಗ್ಯದ ಬಗ್ಗೆ ಜನ ಹೆಚ್ಚಿನ ಕಾಳಜಿವಹಿಸಬೇಕು’ ಎಂದು ಹೇಳಿದರು.

ಸಂಸ್ಥೆಯ ಸ್ತ್ರೀ ಗಂಥಿವಿಜ್ಞಾನ ವಿಭಾಗದ ಮುಖ್ಯಸ್ಥೆ ಡಾ.ಶೋಭಾ, ‘ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನ ಬಳಸಿಕೊಂಡು ಕ್ಯಾನ್ಸರ್ ತಪಾಸಣೆ ಮಾಡಲಾಗುತ್ತಿದೆ. ಆರೋಗ್ಯವಾಗಿದ್ದರೂ ಆಗಾಗ ತಪಾಸಣೆ ಮಾಡಿಸಿಕೊಳ್ಳಬೇಕು. ಇದರಿಂದ ಆರಂಭಿಕ ಹಂತದಲ್ಲಿಯೇ ಅನಾರೋಗ್ಯ ಸಮಸ್ಯೆ ಪತ್ತೆ ಸಾಧ್ಯವಾಗಲಿದೆ’ ಎಂದರು, 

ಕಾರ್ಯಕ್ರಮದಲ್ಲಿ ಗರ್ಭಕಂಠದ ಕ್ಯಾನ್ಸರ್‌ನಿಂದ ಗುಣಮುಖರಾದವರು ಮನದಾಳದ ಮಾತುಗಳನ್ನು ಹಂಚಿಕೊಂಡರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.