ADVERTISEMENT

ಕಿದ್ವಾಯಿ: ಬಸವಳಿದ ‘ಬಡವರ ಆಸ್ಪತ್ರೆ’

ಶೇ 50ರಷ್ಟು ತಜ್ಞ ವೈದ್ಯರ ಕೊರತೆ: ನಿಧಾನಗತಿಯ ಚಿಕಿತ್ಸೆ l ವಾರ್ಷಿಕ 20 ಸಾವಿರಕ್ಕೂ ಅಧಿಕ ರೋಗಿಗಳ ಭೇಟಿ

ಸಚ್ಚಿದಾನಂದ ಕುರಗುಂದ
Published 8 ಏಪ್ರಿಲ್ 2022, 20:05 IST
Last Updated 8 ಏಪ್ರಿಲ್ 2022, 20:05 IST
ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯಲ್ಲಿ ಸಾಮಾನ್ಯ ವಾರ್ಡ್‌. – ಪ್ರಜಾವಾಣಿ ಚಿತ್ರ/ ರಂಜು ಪಿ
ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯಲ್ಲಿ ಸಾಮಾನ್ಯ ವಾರ್ಡ್‌. – ಪ್ರಜಾವಾಣಿ ಚಿತ್ರ/ ರಂಜು ಪಿ   

ಬೆಂಗಳೂರು: ಸದಾ ಗಿಜಿಗುಡುವ ಹೊರರೋಗಿಗಳ ವಿಭಾಗ, ಪರೀಕ್ಷೆಗಾಗಿ ಸರದಿ ಸಾಲಿನಲ್ಲಿ ಕಾಯುತ್ತಿರುವ ರೋಗಿಗಳು, ಮಿತಿ ಮೀರಿದ ರೋಗಿಗಳ ಸಂಖ್ಯೆ, ತಜ್ಞ ವೈದ್ಯರ ಕೊರತೆ, ಆವರಣದಲ್ಲಿಯೇ ವಿಶ್ರಾಂತಿ ಪಡೆಯುವ ರೋಗಿಗಳು ಮತ್ತು ಅವರ ಸಂಬಂಧಿಕರು....

ರಾಜ್ಯದ ಪ್ರತಿಷ್ಠಿತ ವೈದ್ಯಕೀಯ ಸಂಸ್ಥೆಯಾಗಿರುವ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯ ಚಿತ್ರಣ ಇದು. ಅತಿ ಕಡಿಮೆ ವೆಚ್ಚದಲ್ಲಿ ಕ್ಯಾನ್ಸರ್‌ಗೆ ಉತ್ತಮ ಚಿಕಿತ್ಸೆ ನೀಡುವುದಕ್ಕೆ ಈ ಸಂಸ್ಥೆ ಹೆಸರುವಾಸಿ. ರಾಜ್ಯ ಮತ್ತು ಹೊರರಾಜ್ಯಗಳ ರೋಗಿಗಳ ದಂಡೇ ಈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಬರುತ್ತದೆ. ಈ ಸಂಸ್ಥೆಗೆ ಚಿಕಿತ್ಸೆ ಪಡೆಯಲು ಬರುವವರು ಬಹುತೇಕರು ಬಡವರು, ಮಧ್ಯಮ ವರ್ಗದವರು ಹಾಗೂ ಖಾಸಗಿ ಆಸ್ಪತ್ರೆಯ ಚಿಕಿತ್ಸಾ ವೆಚ್ಚದಿಂದ ಹೈರಾಣಾದವರು.

23 ಎಕರೆ ಪ್ರದೇಶದಲ್ಲಿರುವ ಈ ಸಂಸ್ಥೆಯಲ್ಲಿ ವಿವಿಧ ರೀತಿಯ ಕ್ಯಾನ್ಸರ್‌ಗೆ ತುತ್ತಾಗುವ ಚಿಕ್ಕಮಕ್ಕಳಿಂದ ವೃದ್ಧರವರೆಗೆ ಇಲ್ಲಿ ದಾಖಲಾಗುತ್ತಾರೆ. ಹಾಸಿಗೆಗಳ ಕೊರತೆ ಮತ್ತು ನಿಧಾನಗತಿಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎನ್ನುವುದು ರೋಗಿಗಳ ದೂರು. ಅದರಲ್ಲೂ ಮೊದಲ ಬಾರಿ ಇಲ್ಲಿಗೆ ಬಂದವರಿಗೆ ಚಿಕಿತ್ಸೆ ಆರಂಭವಾಗುವ ಮುನ್ನ ಪದೇ ಪದೇ ಅಲೆದಾಡಿಸಲಾಗುತ್ತಿದೆ ಎಂದು ದೂರುತ್ತಾರೆ.

ADVERTISEMENT

ಪಶ್ಚಿಮ ಬಂಗಾಳ, ತಮಿಳುನಾಡು ಸೇರಿದಂತೆ ಹೊರರಾಜ್ಯ ಮತ್ತು ರಾಜ್ಯದ ವಿವಿಧೆಡೆಯಿಂದ ಪ್ರತಿ ದಿನ ಸರಾಸರಿ ಒಂದೂವರೆ ಸಾವಿರಕ್ಕೂ ಹೆಚ್ಚು ರೋಗಿಗಳು ಇಲ್ಲಿ ಚಿಕಿತ್ಸೆ ಪಡೆಯುತ್ತಾರೆ. ಆಸ್ಪತ್ರೆಯ ಈಗಿರುವ ಸಾಮರ್ಥ್ಯಕ್ಕೆ ಹೆಚ್ಚುತ್ತಿರುವ ರೋಗಿಗಳ ಸಂಖ್ಯೆಯನ್ನು ನಿಭಾಯಿಸುವುದೇ ದೊಡ್ಡ ಸವಾಲಾಗಿದೆ ಎನ್ನುವುದು ವೈದ್ಯರ ಅಭಿಪ್ರಾಯ.

ವಾರ್ಷಿಕ ಸುಮಾರು 20 ಸಾವಿರಕ್ಕೂ ಹೆಚ್ಚು ಹೊಸ ರೋಗಿಗಳು ಕಿದ್ವಾಯಿಯಲ್ಲಿ ಚಿಕಿತ್ಸೆ ಪಡೆಯಲು ಬರುತ್ತಾರೆ. ಒಟ್ಟಾರೆಯಾಗಿ ವಾರ್ಷಿಕ ಅಂದಾಜು 4.5 ಲಕ್ಷ ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ, ಶೇಕಡ 50ಕ್ಕಿಂತ ಹೆಚ್ಚು ತಜ್ಞರ ವೈದ್ಯರ ಕೊರತೆ ಇದೆ. ವೈದ್ಯರ ಕೊರತೆಯಿಂದ ಹಲವು ಬಾರಿ ಶಸ್ತ್ರಚಿಕಿತ್ಸೆಗಳನ್ನು ಮುಂದೂಡಿದ ಉದಾಹರಣೆಗಳಿವೆ.

ಖಾಸಗಿ ಆಸ್ಪತ್ರೆಗಳಲ್ಲಿ ದೊರೆಯುವ ಹೆಚ್ಚು ವೇತನ ಮತ್ತು ಸೌಲಭ್ಯಗಳು ಹಾಗೂ ಕಡಿಮೆ ಒತ್ತಡದ ಕೆಲಸದಿಂದಾಗಿ ತಜ್ಞರ ವೈದ್ಯರು ಈ ಸರ್ಕಾರಿ ಸಂಸ್ಥೆಗೆ ಸೇರಲು ಆಸಕ್ತಿ ತೋರುವುದಿಲ್ಲ. ಸರ್ಕಾರ ತಜ್ಞ ವೈದ್ಯರಿಗೆ ಆಕರ್ಷಕ ವೇತನ ಮತ್ತು ಸೌಲಭ್ಯಗಳನ್ನು ಒದಗಿಸಿದರೆ ಮಾತ್ರ ಇಲ್ಲಿ ಸೇರಬಹುದು ಎನ್ನುವ ಅಭಿಪ್ರಾಯ ವೈದ್ಯರದ್ದು.

ವಿಳಂಬ ಚಿಕಿತ್ಸೆ: ‘ನಮ್ಮ ತಂದೆಯನ್ನು ಒಂದೂವರೆ ತಿಂಗಳಿಂದ ಕರೆದುಕೊಂಡು ಬರುತ್ತಿದ್ದೇನೆ. ಇನ್ನೂ ಚಿಕಿತ್ಸೆಯೇ ಆರಂಭಿಸಿಲ್ಲ. ಕೇವಲ ಮಾತ್ರೆಗಳನ್ನು ಕೊಟ್ಟು ಕಳುಹಿಸುತ್ತಿದ್ದಾರೆ’ ಎಂದು ಫುಟ್‌ಪಾ‌ತ್‌ ಮೇಲೆ ಮಲಗಿದ್ದ ತಮ್ಮ ತಂದೆ ಜತೆಗಿದ್ದ ತುಮಕೂರಿನ ಚಂದ್ರು ಅಸಮಾಧಾನ ವ್ಯಕ್ತಪಡಿಸಿದರು.

’ಎಕ್ಸ್‌–ರೇಗಾಗಿ ಹಲವು ಗಂಟೆಗಳ ಕಾಲ ಕಾಯಬೇಕು. ಜತೆಗೆ, ಆಸ್ಪತ್ರೆಯ ಔಷಧ ಅಂಗಡಿಯಲ್ಲಿ ಕೆಲವು ಔಷಧಗಳು ಸಿಗುವುದಿಲ್ಲ. ಸಂಗ್ರಹದಲ್ಲಿ ಇಲ್ಲ ಎಂದು ಹೇಳುವುದು ಸಾಮಾನ್ಯ’ ಎಂದು ರೋಗಿಗಳು ದೂರುತ್ತಾರೆ.

ಆಸ್ಪತ್ರೆ ಆವರಣದಲ್ಲಿ ರೋಗಿಗಳ ಸಂಬಂಧಿಕರು ವಿಶ್ರಾಂತಿ ಪಡೆಯುವುದು ಇಲ್ಲಿನ ಸಾಮಾನ್ಯ ದೃಶ್ಯ. ರೋಗಿಗಳ ಜತೆ ಬಂದವರಿಗೆ ಸರಿಯಾದ ವ್ಯವಸ್ಥೆ ಇಲ್ಲ. ಹೀಗಾಗಿ, ಆವರಣವನ್ನು ಗಲೀಜು ಮಾಡುತ್ತಾರೆ ಎನ್ನುವುದು ಕೆಲ ರೋಗಿಗಳ ಅಭಿಪ್ರಾಯ.

‘ಉತ್ತಮ ಚಿಕಿತ್ಸೆ ದೊರೆಯುತ್ತಿದೆ’

ಆಸ್ಪತ್ರೆಯಲ್ಲಿನ ಸೌಲಭ್ಯಗಳು ಮತ್ತು ಚಿಕಿತ್ಸೆಯ ಬಗ್ಗೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

‘ಚಿಕಿತ್ಸೆ ಉತ್ತಮವಾಗಿದೆ. ವೈದ್ಯರು ಮತ್ತು ನರ್ಸ್‌ಗಳು ಪ್ರತಿಯೊಂದಕ್ಕೂ ಸ್ಪಂದಿಸುತ್ತಾರೆ. ನನ್ನ ನಾಲ್ಕು ವರ್ಷದ ಮಗನನ್ನು ಆಸ್ಪತ್ರೆಗೆ ದಾಖಲಿಸಿರುವೆ. ಕಡಿಮೆ ದರದಲ್ಲಿ ಉತ್ತಮ ಚಿಕಿತ್ಸೆ ದೊರೆಯುತ್ತಿದೆ. ಮಕ್ಕಳ ವಾರ್ಡ್‌ ಉತ್ತಮವಾಗಿದೆ. ಉತ್ತಮ ವೈದ್ಯರು ಇದ್ದಾರೆ’ ಎಂದು ಕಲಬುರಗಿಯಿಂದ ಬಂದಿದ್ದ ಚಾಲಕ ಮೊಹಮ್ಮದ್‌ ಇಸ್ಮಾಯಿಲ್‌ ವಿವರಿಸಿದರು.

‘ಕಡಿಮೆ ಖರ್ಚಿನಲ್ಲಿ ಇಲ್ಲಿ ಉತ್ತಮ ಚಿಕಿತ್ಸೆ ಸಿಗುತ್ತದೆ. ಚಿಕಿತ್ಸೆ ಸ್ವಲ್ಪನಿಧಾನ. ಆದರೂ ಸಮಸ್ಯೆ ಇಲ್ಲ. ಖಾಸಗಿ ಆಸ್ಪತ್ರೆಯಲ್ಲಿ ₹20 ಲಕ್ಷ ವೆಚ್ಚವಾಗುತ್ತದೆ ಎಂದು ಹೇಳಿದ್ದರು. ಅದಕ್ಕೆ ಇಲ್ಲಿಗೆ ಮೊಮ್ಮಗಳನ್ನು ಕರೆದುಕೊಂಡು ಬಂದೆ’ ಎಂದು ಹುಬ್ಬಳ್ಳಿಯ ನಜೀರ್‌ ಹೇಳಿದರು.

‘ಸ್ವಲ್ಪ ಕಾಲಾವಕಾಶ ತೆಗೆದುಕೊಂಡರೂ ಪರವಾಗಿಲ್ಲ. ಉತ್ತಮ ಚಿಕಿತ್ಸೆ ದೊರೆಯುತ್ತದೆ ಎನ್ನುವ ಕಾರಣಕ್ಕೆ ಇಲ್ಲಿಗೆ ಮಗಳನ್ನು ಕರೆದುಕೊಂಡು ಬಂದಿದ್ದೇನೆ. ಚಿಕಿತ್ಸೆಗಾಗಿ ಪ್ರತಿ ದಿನ ಆಸ್ಪತ್ರೆಗೆ ಬರುತ್ತಿದ್ದೇನೆ. ಬಡವರಿಗಂತೂ ಬಹಳ ಅನುಕೂಲ’ ಎಂದು ವಿಜಯಪುರ ಜಿಲ್ಲೆಯಿಂದ ಬಂದಿದ್ದ ಮಲ್ಲಪ್ಪ ಎನ್ನುವವರು ಹೇಳಿದರು.

‘ಸಂಸ್ಥೆಯಲ್ಲಿ ಅತ್ಯಾಧುನಿಕ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದ್ದು, ಉತ್ತಮ ಗುಣಮಟ್ಟದ ಚಿಕಿತ್ಸೆ ನೀಡಲಾಗುತ್ತಿದೆ’ ಎಂದು ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ನಿರ್ದೇಶಕ ಡಾ.ಸಿ.ರಾಮಚಂದ್ರ ಹೇಳುತ್ತಾರೆ.

‘ಸೋಮವಾರ ಮತ್ತು ಮಂಗಳವಾರ 1800ರಿಂದ 2000 ರೋಗಿಗಳು ಆಸ್ಪತ್ರೆಗೆ ಬರುತ್ತಾರೆ. ಉಳಿದ ದಿನ ಸ್ವಲ್ಪ ಕಡಿಮೆ. ಈಗಿರುವ ವೈದ್ಯರು ಮತ್ತು ಸಿಬ್ಬಂದಿ ರೋಗಿಗಳ ಸಮಸ್ಯೆಗಳಿಗೆ ಸ್ಪಂದಿಸಿ ಚಿಕಿತ್ಸೆ ನೀಡಲು ಅವಿರತ ಶ್ರಮಿಸುತ್ತಿದ್ದಾರೆ. ಸಿಬ್ಬಂದಿಗೆ ಸಂಬಂಧಿಸಿದಂತೆ 660 ಮಂಜೂರಾದ ಹುದ್ದೆಗಳಿವೆ. 354 ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರ ಮಂಜೂರಾತಿ ನೀಡಿದೆ. ಹೀಗಾಗಿ, ಮುಂದಿನ ದಿನಗಳಲ್ಲಿ ಸಿಬ್ಬಂದಿ ಕೊರತೆಯಾಗುವುದಿಲ್ಲ’ ಎಂದು ವಿವರಿಸುತ್ತಾರೆ.

‘800 ಹಾಸಿಗೆಗಳಿಗೆ ಮತ್ತೆ 150 ಹಾಸಿಗೆಗಳನ್ನು ಸೇರಿಸಲಾಗಿದೆ. ಆಸ್ಪತ್ರೆಯಲ್ಲಿ 12 ಅತ್ಯಾಧುನಿಕ ಶಸ್ತ್ರಚಿಕಿತ್ಸಾ ಕೊಠಡಿಗಳಿವೆ. ರೇಡಿಯೇಷನ್‌ ಚಿಕಿತ್ಸೆ ಅನ್ನು ಪ್ರತಿ ದಿನ 700ರಿಂದ 800 ಜನಕ್ಕೆ ನೀಡಲಾಗುತ್ತಿದೆ. ಲೇಸರ್‌ ತಂತ್ರಜ್ಞಾನದ ಸಿಟಿ ಸಿಮ್ಯುಲೇಟರ್‌ ಸೌಲಭ್ಯವನ್ನು ಸಂಸ್ಥೆ ಹೊಂದಿದೆ. ಜಗತ್ತಿನಲ್ಲೇ ಈ ರೀತಿಯ ಸೌಲಭ್ಯ ಹೊಂದಿರುವ ಎರಡನೇ ಸಂಸ್ಥೆ ನಮ್ಮದಾಗಿದೆ’ ಎಂದು ಹೆಮ್ಮೆಯಿಂದ ಹೇಳುತ್ತಾರೆ.

‘ಅಸ್ಥಿಮಜ್ಜೆ (ಬೋನ್‌ ಮ್ಯಾರೊ) ಕಸಿ ಶಸ್ತ್ರಚಿಕಿತ್ಸೆ ನೀಡುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಈ ಚಿಕಿತ್ಸೆಗೆ ಸುಮಾರು ₹25 ಲಕ್ಷ ವೆಚ್ಚವಾಗುತ್ತದೆ. ಆದರೆ, ಇಲ್ಲಿ ರಿಯಾಯಿತಿ ದರದಲ್ಲಿ ದೊರೆಯುತ್ತದೆ. ಬಿಪಿಎಲ್ ಕುಟುಂಬದವರಿಗೆ ಬಹುತೇಕ ಉಚಿತವಾಗಿ ದೊರೆಯುತ್ತದೆ’ ಎಂದು ವಿವರಿಸಿದರು.

ಇ–ಆಸ್ಪತ್ರೆ: 'ರೋಗಿಗಳು ಪ್ರಯೋಗಾಲಯಗಳ ವರದಿ ಮತ್ತು ಇತರ ದಾಖಲೆಗಾಗಿ ಅಲೆದಾಡುವನ್ನು ತಪ್ಪಿಸಲು ‘ಇ–ಆಸ್ಪತ್ರೆ’ ವ್ಯವಸ್ಥೆ ಜಾರಿಗೊಳಿಸಲಾಗಿದೆ. 1973ರಲ್ಲಿನ ಪ್ರಕರಣಗಳ ಕಡತಗಳನ್ನು ಸಹ ಡಿಜಿಟಲೀಕರಣ ಮಾಡಲಾಗಿದೆ’ ಎಂದು ವಿವರಿಸುತ್ತಾರೆ. ‘ಅತ್ಯಾಧುನಿಕ ತಂತ್ರಜ್ಞಾನದ ನಾಲ್ಕು ‘ಪೆಟ್‌ ಸ್ಕ್ಯಾನ್‌’ ಯಂತ್ರಗಳನ್ನು ಅಳವಡಿಸಲಾಗಿದೆ. ಇದರಿಂದ, ಪ್ರಾಥಮಿಕ ಹಂತದಲ್ಲೇ ಯಾವ ಭಾಗದಲ್ಲಿ ಕ್ಯಾನ್ಸರ್‌ ಇದೆ ಎನ್ನುವುದು ತ್ವರಿತಗತಿಯಲ್ಲಿ ಪತ್ತೆಯಾಗಲಿದೆ’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.