
ಬೆಂಗಳೂರು: ನಗರದ ಕ್ಯಾನ್ಸರ್ ಪೀಡಿತರಿಗೆ ಮನೆ ಬಾಗಿಲಲ್ಲೇ ಉಪಶಮನ ಆರೈಕೆ (ಪ್ಯಾಲಿಯೇಟಿವ್ ಕೇರ್) ಸೇವೆ ಒದಗಿಸಲು ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ಮುಂದಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ಬರಲು ಸಾಧ್ಯವಾಗ ದವರಿಗೆ ಈ ವ್ಯವಸ್ಥೆ ಸಹಕಾರಿಯಾಗಲಿದೆ.
ಗೃಹ ಆಧಾರಿತ ಈ ಆರೈಕೆ ಸೌಲಭ್ಯಕ್ಕೆ ಸಂಸ್ಥೆಯು ಕಾರ್ಪೊರೇಟ್ ಕಂಪನಿಗಳ ಸಾಮಾಜಿಕ ಹೊಣೆಗಾರಿಕೆ ನಿಧಿಯನ್ನು (ಸಿಎಸ್‌ಆರ್) ಬಳಕೆ ಮಾಡಿಕೊಳ್ಳಲು ಮುಂದಾಗಿದೆ. ತಜ್ಞ ವೈದ್ಯರನ್ನು ಒಳಗೊಂಡ ತಂಡವು ಕ್ಯಾನ್ಸರ್ ಪೀಡಿತರಿಗೆ ಮನೆಯಲ್ಲಿಯೇ ಅಗತ್ಯ ವೈದ್ಯಕೀಯ ಆರೈಕೆ ಒದಗಿಸಲಿದ್ದು, ರೋಗಿಯ ಜೀವನದ ಗುಣಮಟ್ಟ ಸುಧಾರಿಸಲು ಈ ವಿಶೇಷ ವೈದ್ಯಕೀಯ ಚಿಕಿತ್ಸೆ ನೆರವಾಗಲಿದೆ. ನೋವು ಮತ್ತು ರೋಗ ಲಕ್ಷಣಗಳನ್ನು ನಿರ್ವಹಿಸಲು, ದೈಹಿಕ ಹಾಗೂ ಮಾನಸಿಕ ಒತ್ತಡ ಕಡಿಮೆ ಮಾಡಲು ಈ ಆರೈಕೆ ಸಹಕಾರಿಯಾಗಲಿದೆ. ಈ ಆರೈಕೆಯು ಶೀಘ್ರದಲ್ಲಿಯೇ ಪ್ರಾರಂಭಿಸಲು ಸಂಸ್ಥೆ ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತಿದೆ. ಈ ಸೇವೆಯಿಂದ ಹಾಸಿಗೆ ಹಿಡಿದ ಕ್ಯಾನ್ಸರ್ ಪೀಡಿತರನ್ನು ಸಂಸ್ಥೆಗೆ ಕರೆತರುವುದು ತಪ್ಪುವುದರ ಜತೆಗೆ, ಸಂಸ್ಥೆಯಲ್ಲಿ ರೋಗಿಗಳ ದಟ್ಟಣೆ ನಿವಾರಣೆಯೂ ಸಾಧ್ಯವಾಗಲಿದೆ.
ವಿವಿಧ ಪ್ರಕಾರದ ಕ್ಯಾನ್ಸರ್‌ಗಳಿಗೆ ಚಿಕಿತ್ಸೆ ಹಾಗೂ ರೋಗ ಪತ್ತೆ ಸಂಬಂಧ ಇಲ್ಲಿನ ಹೊಂಬೇಗೌಡ ನಗರದಲ್ಲಿರುವ ಸಂಸ್ಥೆಗೆ ಭೇಟಿ ನೀಡುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗುತ್ತಿದೆ. ರಾಜ್ಯದ ವಿವಿಧ ಭಾಗಗಳ ಜತೆಗೆ ಹೊರ ರಾಜ್ಯಗಳಿಂದಲೂ ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ರೋಗಿಗಳು ಬರುತ್ತಾರೆ. ದಾಖಲಾತಿ ಹಾಗೂ ಚಿಕಿತ್ಸೆ ವಿಳಂಬವಾದಲ್ಲಿ ರೋಗ ಉಲ್ಬಣ ಗೊಳ್ಳುವ ಸಾಧ್ಯತೆ ಇರುತ್ತದೆ. ಮನೆ ಆಧಾರಿತ ಉಪಶಮನ ಆರೈಕೆಯಿಂದ ಆಸ್ಪತ್ರೆಯಲ್ಲಿ ದಾಖಲಾತಿಯೂ ಕಡಿಮೆಯಾಗಿ, ಒಳರೋಗಿಗಳಿಗೆ ಹಾಸಿಗೆಗಳು ಲಭ್ಯವಾಗಲಿವೆ.
ಮೊಬೈಲ್ ವ್ಯಾನ್ ಬಳಕೆ: ಉಪಶಮನ ಆರೈಕೆಗೆ ಸಂಸ್ಥೆಯು ಮೊಬೈಲ್ ವ್ಯಾನ್ ಬಳಸಿಕೊಳ್ಳಲು ಮುಂದಾಗಿದೆ. ಈ ವಾಹನದಲ್ಲಿ ಉಪಶಮನ ಆರೈಕೆಗೆ ಅಗತ್ಯವಿರುವ ತಜ್ಞ ವೈದ್ಯರೊಬ್ಬರು, ಶುಶ್ರೂಷಕರು ಹಾಗೂ ವೈದ್ಯಕೀಯ ಸಿಬ್ಬಂದಿ ಇರಲಿದ್ದಾರೆ. ಈ ತಂಡವು ರೋಗಿ ಹಾಗೂ ಕುಟುಂಬದ ಸದಸ್ಯರ ಜತೆಗೆ ಸಮಾಲೋಚನೆ ನಡೆಸಿ, ಅಗತ್ಯ ಉಪಶಮನ ಚಿಕಿತ್ಸೆ ಒದಗಿಸಲಿದೆ. ರೋಗಿಯ ನಿರ್ವಹಣೆ ಬಗ್ಗೆ ಮಾರ್ಗದರ್ಶನವನ್ನೂ ನೀಡಲಿದೆ. ಸಿಎಸ್‌ಆರ್ ಅನುದಾನ, ವಿವಿಧ ಸರ್ಕಾರಿ ಯೋಜನೆಗಳಡಿ ಈ ಸೇವೆಯನ್ನು ಸಂಸ್ಥೆ ಉಚಿತವಾಗಿ ಒದಗಿಸಲು ನಿರ್ಧರಿಸಿದೆ.
‘ಮನೆ ವಾತಾವರಣದಲ್ಲಿ ಚಿಕಿತ್ಸೆ ಪಡೆದಾಗ ರೋಗಿಯ ಆತಂಕ, ಭಯ, ನೋವು ಗಣನೀಯ ವಾಗಿ ಕಡಿಮೆ ಯಾಗುತ್ತದೆ. ಆರೈಕೆಯಲ್ಲಿ ಕುಟುಂಬದ ಸದಸ್ಯರೂ ಪಾಲ್ಗೊಳ್ಳುವುದರಿಂದ ರೋಗಿಗೆ ಚೇತರಿಕೆಯ ಭರವಸೆ ಮತ್ತು ಭದ್ರತೆಯ ಅನುಭವ ದೊರೆಯುತ್ತದೆ. ಆಸ್ಪತ್ರೆಯ ಅಲೆದಾಟದಿಂದ ರೋಗಿಯು ಇನ್ನಷ್ಟು ಬಳಲುವುದು ತಪ್ಪಲಿದೆ’ ಎಂದು ಪ್ಯಾಲಿಯೇಟಿವ್ ಮೆಡಿಸಿನ್ ವಿಭಾಗದ ಮುಖ್ಯಸ್ಥ ಡಾ. ಯದುರಾಜ್ ಎಂ.ಕೆ. ತಿಳಿಸಿದರು.
ರೋಗಿ ಕೇಂದ್ರೀಕೃತ ಆರೈಕೆಯನ್ನು ಗೃಹ ಮಟ್ಟಕ್ಕೆ ವಿಸ್ತರಿಸುವ ಪ್ರಯತ್ನವಿದು. ಅನಗತ್ಯ ತುರ್ತು ದಾಖಲಾತಿ ತಪ್ಪಿಸುವ ಈ ಆರೈಕೆಯು ರೋಗಿ ಅವರ ಕುಟುಂಬಕ್ಕೆ ಸಹಕಾರಿಯಾಗಲಿದೆ
-ಡಾ.ಟಿ. ನವೀನ್, ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ನಿರ್ದೇಶಕ
15 ಕಿ.ಮೀ. ವ್ಯಾಪ್ತಿಯಲ್ಲಿ ಸೇವೆ
ಸಂಸ್ಥೆಯು ಮೊದಲ ಹಂತದಲ್ಲಿ 15 ಕಿ.ಮೀ. ವ್ಯಾಪ್ತಿಯಲ್ಲಿ ಉಪಶಮನ ಆರೈಕೆ ಸೇವೆ ನೀಡಲು ಯೋಜನೆ ರೂಪಿಸಿದೆ. ಮುಂದಿನ ದಿನಗಳಲ್ಲಿ ಈ ಸೇವೆಯನ್ನು ವಿಸ್ತರಿಸಲಿದೆ. ಮನೆ ಭೇಟಿ ವೇಳೆ ರೋಗಿಗೆ ಅಗತ್ಯ ಚಿಕಿತ್ಸೆ ಒದಗಿಸುವ ಜತೆಗೆ ಲಭ್ಯ ಔಷಧವನ್ನೂ ನೀಡಲಾಗುತ್ತದೆ. ಸಂಸ್ಥೆಯಲ್ಲಿ ಈ ಹಿಂದೆ ಚಿಕಿತ್ಸೆ ಪಡೆದವರಿಗೆ ಮಾತ್ರ ಈ ಸೇವೆ ಒದಗಿಸಲಾಗುತ್ತದೆ. ಉಪಶಮನ ಆರೈಕೆಗೆ ಒಳಗಾದವರಿಗೆ ಟಿಲಿ ಮೆಡಿಸಿನ್ ಸೇವೆಯ ಮೂಲಕ ಅಗತ್ಯ ಸಲಹೆ ಸೂಚನೆಗಳನ್ನೂ ನೀಡಲಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.