ADVERTISEMENT

ಅಪರೂಪದ ಕ್ಯಾನ್ಸರ್: ಕಿದ್ವಾಯಿಯಲ್ಲಿ ಬಾಲಕನಿಗೆ ಅಸ್ಥಿಮಜ್ಜೆ ಕಸಿ– ಚೇತರಿಕೆ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2025, 14:40 IST
Last Updated 7 ಡಿಸೆಂಬರ್ 2025, 14:40 IST
ಅಸ್ಥಿಮಜ್ಜೆ ಕಸಿಗೆ ಒಳಗಾದ ಬಾಲಕನನ್ನು ಶರಣಪ್ರಕಾಶ್ ಆರ್. ಪಾಟೀಲ ಅಭಿನಂದಿಸಿದರು. ಡಾ. ವಸುಂಧರಾ ಕೈಲಾಸನಾಥ್ ಉಪಸ್ಥಿತರಿದ್ದರು
ಅಸ್ಥಿಮಜ್ಜೆ ಕಸಿಗೆ ಒಳಗಾದ ಬಾಲಕನನ್ನು ಶರಣಪ್ರಕಾಶ್ ಆರ್. ಪಾಟೀಲ ಅಭಿನಂದಿಸಿದರು. ಡಾ. ವಸುಂಧರಾ ಕೈಲಾಸನಾಥ್ ಉಪಸ್ಥಿತರಿದ್ದರು    

ಬೆಂಗಳೂರು: ‘ವಿಲ್ಮ್ಸ್ ಟ್ಯೂಮರ್’ (ನೆಫ್ರೋಬ್ಲಾಸ್ಟೊಮಾ) ಎಂಬ ಅಪರೂಪದ ಮೂತ್ರಪಿಂಡ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಒಂಬತ್ತು ವರ್ಷದ ಬಾಲಕನಿಗೆ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯಲ್ಲಿ ಅಸ್ಥಿಮಜ್ಜೆ ಕಸಿ ನಡೆಸಲಾಗಿದೆ. ಇದು ಮಗುವಿನ ಚೇತರಿಕೆಗೆ ನೆರವಾಗಿದೆ. 

‘2022ರ ಡಿಸೆಂಬರ್‌ನಲ್ಲಿ ಈ ಕ್ಯಾನ್ಸರ್‌ ಬಾಲಕನಲ್ಲಿ ಪತ್ತೆಯಾಗಿತ್ತು. ಕಿಮೋಥೆರಪಿ ಚಿಕಿತ್ಸೆ ನೀಡಿ ಎಡ ಮೂತ್ರಪಿಂಡಕ್ಕೆ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ನಂತರ ರೇಡಿಯೇಷನ್ ಚಿಕಿತ್ಸೆ ಒದಗಿಸಲಾಗಿತ್ತು. ದುರದೃಷ್ಟವಶಾತ್ 2025ರ ಏಪ್ರಿಲ್‌ನಲ್ಲಿ ರೋಗ ಮರುಕಳಿಸಿತು. ಬಾಲಕ ಬದುಕುಳಿಯುವುದು ಕಷ್ಟಸಾಧ್ಯವಾಗಿತ್ತು. ಆ ಸಂದರ್ಭದಲ್ಲಿ ಕಿಮೋಥೆರಪಿ ಮತ್ತು ಅಸ್ಥಿಮಜ್ಜೆ ಕಸಿಯ ಆಯ್ಕೆ ನಮ್ಮ ಮುಂದಿದ್ದವು. ಅದರಂತೆ ಅಸ್ಥಿಮಜ್ಜೆ ಕಸಿ ನಡೆಸಲಾಯಿತು’ ಎಂದು ಸಂಸ್ಥೆಯ ವೈದ್ಯರು ತಿಳಿಸಿದ್ದಾರೆ. 

ಸಂಸ್ಥೆಯ ಅಸ್ಥಿಮಜ್ಜೆ ಕಸಿ ಘಟಕದ ಸಹ ಪ್ರಾಧ್ಯಾಪಕಿ ಡಾ. ವಸುಂಧರಾ ಕೈಲಾಸನಾಥ್, ‘ಚಿಕ್ಕ ವಯಸ್ಸಿನಲ್ಲಿಯೇ ಕಿಮೋಥೆರಪಿ ಚಿಕಿತ್ಸೆ, ಹೆಚ್ಚಿನ ಪ್ರಮಾಣದ ಬಿಎಂಟಿ ಔಷಧಗಳ ಅಗತ್ಯತೆ ಮತ್ತು ಕಾಯಿಲೆಯ ತೀವ್ರತೆಯು ಬಾಲಕನ ಜೀವಕ್ಕೆ ಅಪಾಯಕಾರಿಯಾಗಿತ್ತು. ಈ ಪ್ರಕರಣದ ನಿರ್ವಹಣೆ ಸವಾಲಿನಿಂದ ಕೂಡಿತ್ತು’ ಎಂದು ಹೇಳಿದ್ದಾರೆ. 

ADVERTISEMENT

ಸಂಸ್ಥೆಯ ನಿರ್ದೇಶಕ ಡಾ. ನವೀನ್ ಟಿ., ‘ಮೂರು ವರ್ಷಗಳ ಅವಧಿಯಲ್ಲಿ 130 ಅಸ್ಥಿಮಜ್ಜೆ ಕಸಿ ಚಿಕಿತ್ಸೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ’ ಎಂದು ತಿಳಿಸಿದ್ದಾರೆ.

ಬಾಲಕನಿಗೆ ಯಶಸ್ವಿಯಾಗಿ ಚಿಕಿತ್ಸೆ ನೀಡಿದ ವೈದ್ಯರ ತಂಡವನ್ನು ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ್ ಆರ್. ಪಾಟೀಲ ಅಭಿನಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.