ADVERTISEMENT

ಕಿಮ್ಸ್‌ ಘಟನೆ: ಮಾನವ ಹಕ್ಕು ಆಯೋಗಕ್ಕೆ ದೂರು

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2020, 19:34 IST
Last Updated 18 ಆಗಸ್ಟ್ 2020, 19:34 IST

ಬೆಂಗಳೂರು: ನಗರದ ಕೆಂಪೇಗೌಡ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಆಮ್ಲಜನಕ ಕೊರತೆಯಿಂದ 350ಕ್ಕೂ ಹೆಚ್ಚು ರೋಗಿಗಳನ್ನು ತುರ್ತಾಗಿ ಸ್ಥಳಾಂತರ ಮಾಡಿದ ಘಟನೆ ರಾಜ್ಯದಲ್ಲಿನ ಅವ್ಯವಸ್ಥೆಗೆ ಸಾಕ್ಷಿ ಎಂದು ಕಾಂಗ್ರೆಸ್‌ನ ಹಿರಿಯ ಶಾಸಕ ಎಚ್‌.ಕೆ.ಪಾಟೀಲ ಅವರು ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ಮಾಹಿತಿ ನೀಡಿದ್ದಾರೆ.

ಸೋಮವಾರದ ಘಟನೆಗಳ ಬಗ್ಗೆ ಆಯೋಗಕ್ಕೆ ವಿವರ ನೀಡಿರುವ ಅವರು, ಆಮ್ಲಜನಕದ ಕೊರತೆಯಿಂದ 45 ರೋಗಿಗಳು ಜೀವನ್ಮರಣದ ಹೋರಾಟ ನಡೆಸಿದರು. ವೈದ್ಯಕೀಯ ಮಹಾವಿದ್ಯಾಲಯವಾಗಿದ್ದರೂ ಅವಶ್ಯಕ ವಸ್ತುಗಳ ಬೇಡಿಕೆ ಮತ್ತು ಪೂರೈಕೆಯನ್ನು ಸಮರ್ಪಕವಾಗಿ ಗಮನಿಸದೇ ಮುಂದಾಲೋಚನೆ ಕ್ರಮಗಳಿಲ್ಲದೇ ಬಹುದೊಡ್ಡ ದುರಂತಕ್ಕೆ ಕಾರಣವಾಗಬಹುದಾದ ಘಟನೆ ನಡೆಯಿತು ಎಂದು ತಿಳಿಸಿದ್ದಾರೆ.

ಬೆಳಗಾವಿ ಜಿಲ್ಲೆಯ ಎಂ.ಕೆ.ಹುಬ್ಬಳ್ಳಿಯಲ್ಲಿ ಅಂತ್ಯಕ್ರಿಯೆಗಾಗಿ ಶವವನ್ನು ಸೈಕಲ್‌ನಲ್ಲಿ ಸಾಗಿಸಿದ್ದು, ತೀರಾ ಗಂಭೀರ ಪ್ರಕರಣ. ಕೊರೊನಾ ವೈರಸ್‌ ಶಂಕೆಯಿಂದ ಅಂತಿಮ ಯಾತ್ರೆಗೆ ಯಾರೂ ಬರಲಿಲ್ಲ ಎಂಬ ಕಾರಣಕ್ಕೆ ಇಬ್ಬರು ಸಹೋದರರು ತಮ್ಮ ತಂದೆಯ ಶವವನ್ನು ಸೈಕಲ್ ಮೇಲೆ ಸಾಗಿಸಿದರು. ಇದು ಅಮಾನವೀಯ ಘಟನೆ. ಇಂತಹ ಸಂದರ್ಭದಲ್ಲಿ ಸರ್ಕಾರ ಆಂಬುಲೆನ್ಸ್‌ ವ್ಯವಸ್ಥೆ ಮಾಡಬೇಕಿತ್ತು. ಅಂತಿಮ ಯಾತ್ರೆಗೆ ಈ ರೀತಿ ದುರವಸ್ಥೆ ಆಗಬಾರದು ಎಂದು ಮಾನವ ಹಕ್ಕುಗಳ ಆಯೋಗ ಈ ಹಿಂದೆಯೇ ಸರ್ಕಾರಕ್ಕೆ ನಿರ್ದೇಶನ ನೀಡಿದ್ದರೂ, ಆದೇಶವನ್ನು ನಿರ್ಲಕ್ಷಿಸಲಾಗಿದೆ ಎಂದು ಪಾಟೀಲ ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.