ADVERTISEMENT

ಕೃತಕ ಆಮ್ಲಜನಕ ಕೊರತೆ: ರೋಗಿಗಳ ಸ್ಥಳಾಂತರ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2020, 19:49 IST
Last Updated 17 ಆಗಸ್ಟ್ 2020, 19:49 IST

ಬೆಂಗಳೂರು: ನಗರದ ಕೆಂಪೇಗೌಡ ವೈದ್ಯಕೀಯ ಕಾಲೇಜಿನಲ್ಲಿ (ಕಿಮ್ಸ್) ಕೃತಕ ಆಮ್ಲಜನಕ ಕೊರತೆ ಉಂಟಾದ ಹಿನ್ನೆಲೆಯಲ್ಲಿ, 50ಕ್ಕೂ ಹೆಚ್ಚು ಕೊರೊನಾ ಸೋಂಕಿತರು ಮತ್ತು ಇತರೆ ರೋಗಿಗಳನ್ನು ಸಮೀಪದ ಆಸ್ಪತ್ರೆಗಳಿಗೆ ವರ್ಗಾಯಿಸಲಾಗಿದೆ.

ಆಸ್ಪತ್ರೆಯಲ್ಲಿ 210 ಸೋಂಕಿತರು ಸೇರಿದಂತೆ ಒಟ್ಟು 350 ಮಂದಿ ಪಡೆಯುತ್ತಿದ್ದರು. ಎರಡು ದಿನಗಳಿಂದ ಆಸ್ಪತ್ರೆಗೆ ಆಕ್ಸಿಜನ್ ಸಿಲಿಂಡರ್ ಸರಬರಾಜಾಗಿಲ್ಲ. ಸರಬರಾಜುದಾರರು ಸೋಮವಾರ ರಾತ್ರಿ ಸಿಲಿಂಡರ್ ಸರಬರಾಜು ಮಾಡುವುದಾಗಿ ಹೇಳಿದ್ದರಾದರೂ ಸಮಯಕ್ಕೆ ಸರಿಯಾಗಿ ಪೂರೈಕೆ ಮಾಡದಿರುವುದರಿಂದ ಸಮಸ್ಯೆ ಎದುರಾಗಿದೆ ಎಂದು ವೈದ್ಯರು ಹೇಳಿದ್ದಾರೆ.

ಇದರಲ್ಲಿ 27 ಮಕ್ಕಳು, 19 ಜನ ಗಂಭೀರ ಸಮಸ್ಯೆಯ ರೋಗಿಗಳಿದ್ದು, ತಕ್ಷಣ ರೋಗಿಗಳನ್ನು ಆಂಬುಲೆನ್ಸ್‌ ಮೂಲಕ ವಿಕ್ಟೋರಿಯಾ, ಬೌರಿಂಗ್ ಹಾಗೂ ರಾಜೀವ್ ಗಾಂಧಿ ಎದೆರೋಗ ಆಸ್ಪತ್ರೆಗಳಿಗೆ ವರ್ಗಾಯಿಸಿಸಲಾಗಿದೆ.

ADVERTISEMENT

ಈ ಕುರಿತು ಟ್ವೀಟ್‌ ಮೂಲಕ ಪ್ರತಿಕ್ರಿಯಿಸಿದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್, ‘ಕಿಮ್ಸ್‌ ಖಾಸಗಿ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆ ವಿಚಾರ ತಿಳಿದ ಕೂಡಲೇ, ರೋಗಿಗಳನ್ನು ಬೇರೆ ಆಸ್ಪತ್ರೆಗಳಿಗೆ ವರ್ಗಾಯಿಸುವ ವ್ಯವಸ್ಥೆ ಮಾಡಿದ್ದೇನೆ. ಮುಂಜಾಗ್ರತಾ ಕ್ರಮವಾಗಿರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ 40 ಹಾಸಿಗೆಗಳನ್ನು ಸಿದ್ಧಪಡಿಸಲಾಗಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.