ADVERTISEMENT

ಬೆಂಗಳೂರು: ‘ಕಿ.ರಂ. ದಾರಿಯಲ್ಲಿ ಸಾಗೋಣ’

ಸಂಸ್ಕೃತಿ ಪ್ರಶಸ್ತಿ ಪ್ರದಾನ ಸಮಾರಂಬದಲ್ಲಿ ಎಲ್‌.ಎನ್‌. ಮುಕುಂದರಾಜ್‌

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2025, 22:53 IST
Last Updated 25 ಡಿಸೆಂಬರ್ 2025, 22:53 IST
ಕಿ.ರಂ. ನಾಗರಾಜ ಸಂಸ್ಕೃತಿ ಪ್ರಶಸ್ತಿಯನ್ನು ವಿಜಯಾ ಅವರಿಗೆ ಎಲ್.ಎನ್. ಮುಕುಂದರಾಜ್ ಪ್ರದಾನ ಮಾಡಿದರು. ರುದ್ರೇಶ್ ಅದರಂಗಿ, ಕೆ.ಎನ್. ಸಹನ, ನಲ್ಲೂರು ಪ್ರಸಾದ್ ಆರ್.ಕೆ., ಪಿ. ಮಲ್ಲಿಕಾರ್ಜುನಪ್ಪ ಉಪಸ್ಥಿತರಿದ್ದರು. ಪ್ರಜಾವಾಣಿ ಚಿತ್ರ
ಕಿ.ರಂ. ನಾಗರಾಜ ಸಂಸ್ಕೃತಿ ಪ್ರಶಸ್ತಿಯನ್ನು ವಿಜಯಾ ಅವರಿಗೆ ಎಲ್.ಎನ್. ಮುಕುಂದರಾಜ್ ಪ್ರದಾನ ಮಾಡಿದರು. ರುದ್ರೇಶ್ ಅದರಂಗಿ, ಕೆ.ಎನ್. ಸಹನ, ನಲ್ಲೂರು ಪ್ರಸಾದ್ ಆರ್.ಕೆ., ಪಿ. ಮಲ್ಲಿಕಾರ್ಜುನಪ್ಪ ಉಪಸ್ಥಿತರಿದ್ದರು. ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಕಿ.ರಂ. ತೋರಿದ ಕಾವ್ಯದ ‘ಗುಡಿ’ಯ ಬೆಳಕಿನಲ್ಲಿ ನಾವು ಸಾಗಬೇಕು’ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್‌.ಎನ್‌. ಮುಕುಂದರಾಜ್‌ ತಿಳಿಸಿದರು. 

ಪ್ರಜ್ಞಾ ಸಾಂಸ್ಕೃತಿಕ ವೇದಿಕೆ ಗುರುವಾರ ಹಮ್ಮಿಕೊಂಡಿದ್ದ ಕಿ.ರಂ. ನಾಗರಾಜ ಸಂಸ್ಕೃತಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕಿ.ರಂ. ಶಿಷ್ಯರು ರಾಜ್ಯದಾದ್ಯಂತ ಇದ್ದಾರೆ. ಅವರು ಅನೇಕ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ. ಕಿ.ರಂ.ಗೆ ನೀವೆಲ್ಲ ಸೇರಿ ಗುಡಿ ಕಟ್ಟುತ್ತಿದ್ದೀರಾ ಎಂಬ ಪ್ರಶ್ನೆ ಒಮ್ಮೆ ಬಂದಿತ್ತು. ಹೌದು ಎಂದು ಆಗ ಹೇಳಿದ್ದೆವು. ಗುಡಿ ಅಂದರೆ ಬಾಬರಿ ಮಸೀದಿಯನ್ನು ಕೆಡವಿ ರಾಮಮಂದಿರ ಕಟ್ಟಿದ್ರಲ್ಲ, ಅದಲ್ಲ. ಗುಡಿ ಅಂದರೆ ಬಾವುಟ ಎಂಬ ಅರ್ಥವೂ ಇದೆ’ ಎಂದು ವಿಶ್ಲೇಷಿಸಿದರು.

ADVERTISEMENT

‘ಪ್ರಶಸ್ತಿ ಸ್ವೀಕರಿಸಿದ ವಿಜಯಾ ಅವರು ಹಿಂದೆ ಎಲ್ಲ ಬೀದಿ ಹೋರಾಟಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಮಹಿಳೆಯರು, ರೈತರು, ಬರಹಗಾರರ ಸಹಿತ ಯಾರದ್ದೇ ಸಮಸ್ಯೆಗಳಾಗಿದ್ದರೂ ಅದರ ಧ್ವನಿಯಾಗಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತಿದ್ದರು. ವ್ಯವಸ್ಥೆಯನ್ನು ಪ್ರಶ್ನಿಸುವ ಕೆಲಸವನ್ನು ಅವರ ನಾಟಕಗಳು ಸಹಿತ ಎಲ್ಲ ಬರಹಗಳಲ್ಲೂ ಮಾಡುತ್ತಿದ್ದರು’ ಎಂದು ಹೇಳಿದರು.

ಪ್ರಶಸ್ತಿ ಸ್ವೀಕರಿಸಿದ ಲೇಖಕಿ ವಿಜಯಾ ಮಾತನಾಡಿ, ‘ಈಗ ನನಗೆ 84 ವರ್ಷ ಆಗಿದೆ. ಪ್ರಶಸ್ತಿ ಸ್ವೀಕರಿಸಿ ಸಂಭ್ರಮಿಸುವ ವಯಸ್ಸು ನನ್ನದಲ್ಲ. ಬೇರೆ ಪ್ರಶಸ್ತಿಯಾಗಿದ್ದರೆ ನಿರಾಕರಿಸುತ್ತಿದ್ದೆ. ಕಿ.ರಂ. ಅವರ ಹೆಸರಲ್ಲಿ ನೀಡಿದ ಕಾರಣಕ್ಕೆ ಪ್ರಶಸ್ತಿಯಾಗಿ ಅಲ್ಲ, ಪ್ರಸಾದ ಎಂದು ಸ್ವೀಕರಿಸಿದ್ದೇನೆ’ ಎಂದು ತಿಳಿಸಿದರು.

ಪ್ರಜ್ಞಾ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ನಲ್ಲೂರು ಪ್ರಸಾದ್‌ ಆರ್‌.ಕೆ. ಅಧ್ಯಕ್ಷತೆ ವಹಿಸಿದ್ದರು. ಕವಿ ಪಿ. ಮಲ್ಲಿಕಾರ್ಜುನಪ್ಪ, ಪ್ರಾಧ್ಯಾಪಕ ರುದ್ರೇಶ್‌ ಅದರಂಗಿ, ಕಿ.ರಂ. ಅವರ ಮಕ್ಕಳಾದ ಕೆ.ಎನ್‌. ಸಹನ, ಕೆ.ಎನ್‌. ಕವನ, ಕೆ.ಎನ್‌. ಚಂದನ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.