
ಬೆಂಗಳೂರು: ಬೆಂಬಲ ಬೆಲೆ ನೀಡಿ ರೈತರಿಂದ ನೇರವಾಗಿ ಮೆಕ್ಕೆಜೋಳ ಖರೀದಿಸುವ ಪ್ರಕ್ರಿಯೆಯನ್ನು ಇದೇ ಮೊದಲ ಬಾರಿಗೆ ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್) ಆರಂಭಿಸಿದೆ.
ರಾಜ್ಯ ಸರ್ಕಾರವು 50ರಿಂದ 60 ಟನ್ ಮೆಕ್ಕೆಜೋಳವನ್ನು ಖರೀದಿಸುವಂತೆ ಮಹಾಮಂಡಳಕ್ಕೆ ಸೂಚನೆ ನೀಡಿದೆ. ಈ ಕಾರಣದಿಂದ ಕೆಲ ದಿನಗಳ ಹಿಂದೆ ರೈತರ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಲಾಗಿದೆ ಎಂದು ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಕೆ.ಎಂ.ಶಿವಸ್ವಾಮಿ ತಿಳಿಸಿದ್ದಾರೆ.
ಪ್ರತಿ ರೈತರಿಂದ ಗರಿಷ್ಠ 5 ಟನ್ ಮೆಕ್ಕೆಜೋಳವನ್ನು ಕ್ವಿಂಟಲ್‌ಗೆ ₹2,400 ದರದಲ್ಲಿ ಖರೀದಿಸಬೇಕು ಎನ್ನುವ ಸೂಚನೆ ನೀಡಿದ್ದು, ಈಗಾಗಲೇ 15 ಸಾವಿರ ಟನ್ ಮೆಕ್ಕೆಜೋಳವನ್ನು ಖರೀದಿ ಮಾಡಲಾಗಿದೆ ಎಂದಿದ್ದಾರೆ.
ಮೆಕ್ಕೆಜೋಳ ಖರೀದಿಗಾಗಿ ₹100 ಕೋಟಿಯನ್ನು ಮಹಾಮಂಡಲ ತೆಗೆದಿರಿಸಿದೆ. ಈಗಾಗಲೇ ಮೆಕ್ಕೆಜೋಳ ಮಾರಾಟ ಮಾಡಿರುವ ರೈತರ ಖಾತೆಗಳಿಗೆ ಮುಂದಿನ ವಾರದಲ್ಲಿ ನೇರವಾಗಿ ಹಣ ವರ್ಗಾವಣೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.
ಟೆಂಡರ್ ಮೂಲಕ ಖರೀದಿ: ಮಹಾಮಂಡಲಕ್ಕೆ ಪ್ರತಿ ವರ್ಷ ಒಂದು ಲಕ್ಷ ಟನ್ ಮೆಕ್ಕೆಜೋಳ ಬೇಕು. ಟೆಂಡರ್ ಮೂಲಕ ₹2,100 ರಿಂದ ₹2,200ರ ದರದಲ್ಲಿ 80 ಸಾವಿರ ಟನ್ ಮೆಕ್ಕೆಜೋಳವನ್ನು ಇದುವರೆಗೆ ಖರೀದಿ ಮಾಡಲಾಗಿದೆ. ಇದನ್ನು ಶಿಕಾರಿಪುರ, ಧಾರವಾಡ, ಹಾಸನ, ಗುಬ್ಬಿ ಹಾಗೂ ರಾಜಾನುಕುಂಟೆಯಲ್ಲಿರುವ ಪಶು ಆಹಾರ ಸಂಸ್ಕರಣಾ ಕೇಂದ್ರಗಳಿಗೆ ಸರಬರಾಜು ಮಾಡಿ ಪಶು ಆಹಾರ ಸಿದ್ಧಪಡಿಸಲು ಬಳಸಲಾಗುತ್ತಿದೆ ಎಂದು ವಿವರಿಸಿದ್ದಾರೆ.
‘ಜನವರಿ ಅಂತ್ಯದವರೆಗೂ ಮೆಕ್ಕೆಜೋಳ ಖರೀದಿಗೆ ಸಮಯ ನಿಗದಿಪಡಿಸಿದ್ದು, ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಮೆಕ್ಕೆಜೋಳ ಖರೀದಿ ಮಾಡಲು ಸಿದ್ದತೆ ಮಾಡಿಕೊಳ್ಳಲಾಗಿದೆ’ ಎಂದು ಶಿವಸ್ವಾಮಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.