ADVERTISEMENT

ನಂದಿನಿ ಮಿಲ್ಕ್‌ ಪಾರ್ಲರ್‌: ಉದ್ಯೋಗದ ಹೊಸ ಮಾರ್ಗ

ಕೆಎಂಎಫ್‌ ಮಳಿಗೆ ಸ್ಥಾಪಿಸಲು ಯುವ ಸಮೂಹದ ಆಸಕ್ತಿ

ಗುರು ಪಿ.ಎಸ್‌
Published 29 ಆಗಸ್ಟ್ 2020, 20:20 IST
Last Updated 29 ಆಗಸ್ಟ್ 2020, 20:20 IST
ನಂದಿನಿ ಮಿಲ್ಕ್‌ ಪಾರ್ಲರ್‌
ನಂದಿನಿ ಮಿಲ್ಕ್‌ ಪಾರ್ಲರ್‌   

ಬೆಂಗಳೂರು:ಲಾಕ್‌ಡೌನ್‌ ವೇಳೆ ಇತರ ಸಾಮಗ್ರಿಗಳ ವ್ಯಾಪಾರ ಕುಸಿತ ಕಂಡಿದ್ದರೆ, ಅಗತ್ಯ ವಸ್ತುಗಳ ಮಾರಾಟ ಮಾತ್ರ ಚೆನ್ನಾಗಿ ನಡೆದಿತ್ತು. ಈ ನಿಟ್ಟಿನಲ್ಲಿ, ಇಂತಹ ಅಗತ್ಯ ಉತ್ಪನ್ನಗಳ ಅಡಿ ಬರುವ ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರಾಟದ ಮಳಿಗೆ ನಡೆಸಲು ಯುವಸಮೂಹ ಉತ್ಸಾಹ ತೋರುತ್ತಿದೆ.

‘ಲಾಕ್‌ಡೌನ್‌ ತೆರವುಗೊಂಡ ನಂತರ ಬಮೂಲ್‌ ವ್ಯಾಪ್ತಿಯಲ್ಲಿ 25ಕ್ಕೂ ಹೆಚ್ಚು ಹೊಸ ನಂದಿನಿ ಪಾರ್ಲರ್‌ಗಳನ್ನು‌ ಆರಂಭಿಸಲಾಗಿದೆ. ಕೆಎಂಎಫ್‌ನ ಮೂರು ಕೆಫೆಗಳನ್ನು ತೆರೆದಿದ್ದೇವೆ. ಒಂದು ಪಾರ್ಲರ್‌ಗೆ ಕನಿಷ್ಠ ಇಬ್ಬರು, ಕೆಫೆಗೆ ಆರು ಜನ ಸೇರಿದಂತೆ 80ಕ್ಕೂ ಹೆಚ್ಚು ಜನರಿಗೆ ಈ ಅವಧಿಯಲ್ಲಿ ಸ್ವಯಂ ಉದ್ಯೋಗ ಕಲ್ಪಿಸಿದ್ದೇವೆ’ ಎನ್ನುತ್ತಾರೆ ಬೆಂಗಳೂರು ಹಾಲು ಉತ್ಪಾದಕರ ಒಕ್ಕೂಟದ (ಬಮೂಲ್)‌ ಅಧ್ಯಕ್ಷ ನರಸಿಂಹಮೂರ್ತಿ.

‘ಮಳಿಗೆ ನಡೆಸುವುದಕ್ಕೆ ಬಿಬಿಎಂಪಿ, ಬಿಡಿಎ ಅಥವಾ ಪಟ್ಟಣ ಪಂಚಾಯಿತಿ ಜಾಗ ಸೇರಿದಂತೆ ಸರ್ಕಾರಿ ಸ್ವಾಮ್ಯದ ಜಾಗ ಲಭ್ಯ ಇದ್ದರೆ, ಎಷ್ಟು ಜನರಿಗೆ ಬೇಕಾದರೂ ನಂದಿನಿ ಪಾರ್ಲರ್‌ ಆರಂಭಿಸಲು ಅನುಮತಿ ನೀಡಲಾಗುತ್ತದೆ’ ಎಂದು ಅವರು ಹೇಳುತ್ತಾರೆ.

ADVERTISEMENT

‘ಹಾಲಿನ ಉತ್ಪಾದನೆ ಹೆಚ್ಚಾಗುತ್ತಿದೆ. ಆದರೆ, ಮಾರಾಟ ಅದಕ್ಕೆ ಅನುಗುಣವಾಗಿ ಹೆಚ್ಚಾಗುತ್ತಿಲ್ಲ. ಮಾರಾಟಕ್ಕೆ ಹೆಚ್ಚಿನ ಒತ್ತು ನೀಡಿರುವುದರಿಂದಲೂ ಮಳಿಗೆ ಪ್ರಾರಂಭಿಸಲು ಹೆಚ್ಚು ಜನ ಮುಂದೆ ಬರುತ್ತಿದ್ದಾರೆ. ಮೊದಲು ದಿನದಲ್ಲಿ ಉತ್ಪಾದನೆಯಾಗುತ್ತಿದ್ದ 13 ಲಕ್ಷ ಲೀಟರ್‌ ಹಾಲಿನಲ್ಲಿ 7 ಲಕ್ಷ ಲೀಟರ್‌ ಹಾಲು ಮಾರಾಟವಾಗುತ್ತಿತ್ತು. ಈಗ 9 ಲಕ್ಷ ಲೀಟರ್ ಮಾರಾಟವಾಗುತ್ತಿದೆ’ ಎಂದರು.

‘ನಂದಿನಿ ಬ್ರ್ಯಾಂಡ್‌ನ 130ಕ್ಕೂ ಹೆಚ್ಚು ಉತ್ಪನ್ನಗಳಿವೆ. ಈ ಬ್ರ್ಯಾಂಡ್‌ಗೆ ಉತ್ತಮ ಹೆಸರಿದೆ. ಒಂದು ಲೀಟರ್ ನಂದಿನಿ‌ ಹಾಲು ಮಾರಾಟವಾದರೂ ರಾಜ್ಯದ ರೈತರಿಗೆ ಪರೋಕ್ಷವಾಗಿ ನೆರವು ನೀಡಿದಂತಾಗುತ್ತದೆ. ಅಲ್ಲದೆ, ಈ ವಲಯದಲ್ಲಿ ಭವಿಷ್ಯವಿದೆ ಎಂದುಕೊಂಡು ಹಲವರು ಮಳಿಗೆ ಸ್ಥಾಪಿಸಲು ಮುಂದೆ ಬರುತ್ತಿದ್ದಾರೆ’ ಎಂದು ಅವರು ಮಾಹಿತಿ ನೀಡಿದರು.

‘ಜನನಿಬಿಡ ಸ್ಥಳದಲ್ಲಿ ಮಳಿಗೆ ಆರಂಭಿಸಿದರೆ ಉತ್ತಮ ಲಾಭ ಬರುತ್ತದೆ. ಜಾಗ ಒದಗಿಸಿ, ₹3.5 ಲಕ್ಷದಿಂದ ₹4 ಲಕ್ಷ ನೀಡಿದರೆ ಪೂರ್ತಿ ಮಳಿಗೆಯನ್ನು ಬಮುಲ್‌ ವತಿಯಿಂದಲೇ ಸ್ಥಾಪಿಸಲಾಗುವುದು. ಅವರೇ ಅಂಗಡಿ ಹಾಕಿಕೊಂಡರೆ ₹2 ಲಕ್ಷ ಮೌಲ್ಯದ ಉತ್ಪನ್ನಗಳನ್ನು ನೀಡಲಾಗುವುದು’ ಎಂದು ಹೇಳಿದರು.

ಹೈನುಗಾರಿಕೆಗೆ ಒತ್ತು

‘ಲಾಕ್‌ಡೌನ್‌ ನಂತರ ಶೇ 20ರಿಂದ ಶೇ 30ರಷ್ಟು ಜನ ನಗರದಿಂದ ಹಳ್ಳಿಗೆ ಮರಳಿದ್ದಾರೆ. ಅದರಲ್ಲಿ ಶೇ 10ರಷ್ಟು ಮಂದಿ ಹೈನುಗಾರಿಕೆಯತ್ತ ಒಲವು ತೋರಿದ್ದಾರೆ. ಹಾಲಿನ ಉತ್ಪಾದನೆ ಹೆಚ್ಚಾಗುವುದಕ್ಕೆ ಇದು ಕೂಡಾ ಕಾರಣ’ ಎಂದು ಹೇಳಿದರು.

‘ಜಮೀನು ಅಥವಾ ಮನೆಯ ಪಕ್ಕದ ಜಾಗದಲ್ಲಿ ಎರಡು ಶೀಟುಗಳನ್ನು ಬಳಸಿ ಶೆಡ್‌ ಹಾಕಿದರೂ ಎರಡು ಹಸುಗಳನ್ನು ಸಾಕಬಹುದು. ಬಹಳಷ್ಟು ಜನ ಇದನ್ನು ಪರ್ಯಾಯ ಉದ್ಯೋಗದಂತೆ ನಡೆಸಿಕೊಂಡು ಬರುತ್ತಿದ್ದಾರೆ’ ಎಂದರು.

ಮಾಹಿತಿಗೆ, ಒಕ್ಕೂಟದ ಗ್ರಾಹಕ ಸೇವಾ ಸಂಖ್ಯೆ080-25536168 ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.