ADVERTISEMENT

KMF ನಂದಿನಿ: 20 ಉತ್ಪನ್ನಗಳ ದರ ಇಳಿಕೆ

ಇದೇ 22 ರಿಂದ ಪರಿಷ್ಕೃತ ದರ ಅನ್ವಯ *ಜಿಎಸ್‌ಟಿ ಇಳಿಕೆ ಕಾರಣ ಉತ್ಪನ್ನಗಳ ದರ ಪರಿಷ್ಕರಿಸಿದ ಕೆಎಂಎಫ್

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2025, 19:33 IST
Last Updated 20 ಸೆಪ್ಟೆಂಬರ್ 2025, 19:33 IST
<div class="paragraphs"><p>‘ನಂದಿನಿ’ ಉತ್ಪನ್ನಗಳು</p></div>

‘ನಂದಿನಿ’ ಉತ್ಪನ್ನಗಳು

   

ಬೆಂಗಳೂರು: ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳಿಯು (ಕೆಎಂಎಫ್‌) ತುಪ್ಪ, ಬೆಣ್ಣೆ, ಪನೀರ್ ಸೇರಿ ‘ನಂದಿನಿ’ ಹಾಲಿನ ವಿವಿಧ ಉತ್ಪನ್ನಗಳ ದರವನ್ನು ಇಳಿಕೆ ಮಾಡಿದ್ದು, ಇದೇ 22ರಿಂದಲೇ ಪರಿಷ್ಕೃತ ದರ ಅನ್ವಯ ಆಗಲಿದೆ.  

ಶನಿವಾರ ಇಲ್ಲಿ ಸುದ್ದಿಗಾರರೊಂದಿಗೆ ಈ ಬಗ್ಗೆ ಮಾತನಾಡಿದ ಕೆಎಂಎಫ್‌ ವ್ಯವಸ್ಥಾಪಕ ನಿರ್ದೇಶಕ ಬಿ. ಶಿವಸ್ವಾಮಿ, ‘ಹಾಲಿನ ಉತ್ಪನ್ನಗಳ ಮೇಲಿನ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಇಳಿಕೆಯ ಪರಿಣಾಮ, ಈ ಪರಿಷ್ಕರಣೆ ಮಾಡಲಾಗಿದೆ. 1 ಲೀಟರ್ ತುಪ್ಪದ ದರ ₹650ರಿಂದ ₹610ಕ್ಕೆ ಇಳಿಕೆ ಮಾಡಲಾಗಿದೆ. ಇದೇ ರೀತಿ, ಮೊಸರು ಹೊರತುಪಡಿಸಿ ಹಾಲಿನ ಇತರ ಉತ್ಪನ್ನಗಳ ದರ ಇಳಿಸಲಾಗಿದೆ. ಈಗಾಗಲೇ ಪೂರೈಕೆ ಆಗಿರುವ ಉತ್ಪನ್ನಗಳ ಮೇಲೆ ಹಳೆ ದರ ಇದ್ದರೂ, ಮಾರಾಟಗಾರರು ಕಡ್ಡಾಯವಾಗಿ ಪರಿಷ್ಕೃತ ದರವನ್ನೇ ಪಡೆಯಬೇಕು. ಈ ಇಳಿಕೆ ಮೂಲಕ ಗ್ರಾಹಕರಿಗೆ ದಸರಾ ಉಡುಗೊರೆ ನೀಡುತ್ತಿದ್ದೇವೆ’ ಎಂದು ಹೇಳಿದರು. 

ADVERTISEMENT

‘ಜಿಎಸ್‌ಟಿ ಇಳಿಕೆಗೆ ಸಂಬಂಧಿಸಿದಂತೆ ಕೇಂದ್ರ ಹಣಕಾಸು ಸಚಿವಾಲಯದ ಆದೇಶದ ಅನ್ವಯ, ಆಡಳಿತ ಮಂಡಳಿ ಸಭೆ ನಡೆಸಿ ಹಾಲಿನ ಉತ್ಪನ್ನಗಳ ಮೇಲಿನ ದರ ಪರಿಷ್ಕರಿಸಿದ್ದೇವೆ. ನಂದಿನಿ ತುಪ್ಪ, ಬೆಣ್ಣೆ, ಚೀಸ್, ಕುರುಕು ತಿಂಡಿಗಳ ಮೇಲಿನ ಜಿಎಸ್‌ಟಿ ಶೇ 12ರಿಂದ ಶೇ 5ಕ್ಕೆ, ಕುಕೀಸ್, ಚಾಕೋಲೇಟ್ಸ್, ಐಸ್‌ಕ್ರೀಂ, ಇನ್‌ಸ್ಟಂಟ್ ಮಿಕ್ಸ್ ಮತ್ತು ಪ್ಯಾಕ್ಡ್‌ ನೀರಿನ ಮೇಲಿನ ಜಿಎಸ್‌ಟಿ ಶೇ 18ರಿಂದ ಶೇ 5ಕ್ಕೆ ಇಳಿಕೆಯಾಗಿದೆ. ನಂದಿನಿ ಪನೀರ್ ಮತ್ತು ಯುಎಚ್‌ಟಿ ಹಾಲಿನ ಉತ್ಪನ್ನಗಳ ಮೇಲಿನ ಜಿಎಸ್‌ಟಿ ಶೇ 5ರಿಂದ ಶೂನ್ಯಕ್ಕೆ ಇಳಿಕೆಯಾಗಿದೆ. ನಂದಿನಿ ಮೊಸರಿನ ಮೇಲಿನ ಜಿಎಸ್‌ಟಿ ಈ ಮೊದಲಿನಂತೆ ಶೇ 5 ರಷ್ಟು ಇರಲಿದೆ. ಆದ್ದರಿಂದ ಮೊಸರಿನ ದರದಲ್ಲಿ ವ್ಯತ್ಯಾಸವಾಗುವುದಿಲ್ಲ. ಹಾಲಿನ ದರವೂ ಈ ಮೊದಲಿನಂತೆ ಇರಲಿದೆ’ ಎಂದರು.

ಮಳಿಗೆಗಳಿಗೆ ದರ ಪಟ್ಟಿ: ‘22ರಿಂದ ಹೊಸ ದರ ಅನ್ವಯ ಆಗುವುದರಿಂದ, ಪರಿಷ್ಕೃತ ದರದ ಪಟ್ಟಿಯನ್ನು ಮಳಿಗೆಗಳು ಹಾಗೂ ಮಾರಾಟ ವಿಭಾಗಗಳಿಗೆ ಕಳಿಸಲಾಗುತ್ತದೆ. ಮಾರಾಟ ಮಳಿಗೆಗಳ ಮುಂದೆ ಪರಿಷ್ಕೃತ ದರ ಪಟ್ಟಿ ಪ್ರದರ್ಶಿಸಲಾಗುತ್ತದೆ. ಉತ್ಪನ್ನಗಳ ಮೇಲೆ ಈ ಹಿಂದಿನ ಎಂಆರ್‌ಪಿ ಇದ್ದರೂ, ಹೊಸ ದರದಲ್ಲಿಯೇ ಮಾರಾಟ ಮಾಡಲು ಸೂಚಿಸಲಾಗಿದೆ’ ಎಂದು ಹೇಳಿದರು. 

‘ಚಿಲ್ಲರೆ ಮಾರಾಟಗಾರರು ಈಗಾಗಲೇ ಹಳೆಯ ದರದಲ್ಲಿ ಸಗಟು ಖರೀದಿ ಮಾಡಿದ್ದರೂ, ಹೊಸ ದರದಲ್ಲೇ ಗ್ರಾಹಕರಿಗೆ ಉತ್ಪನ್ನಗಳನ್ನು ನೀಡಬೇಕು. ವ್ಯತ್ಯಾಸದ ದರವನ್ನು ಜಿಎಸ್‌ಟಿ ಫೈಲ್ ಮಾಡುವಾಗ ಮಾರಾಟಗಾರರು ವಾಪಸ್ ಪಡೆದುಕೊಳ್ಳಬಹುದು’ ಎಂದು ವಿವರಿಸಿದರು.

ಬಿ.ಶಿವಸ್ವಾಮಿ
ನಂದಿನಿ ಹಾಲಿನ ಉತ್ಪನ್ನಗಳಿಗೆ ಸೋಮವಾರದಿಂದಲೇ ಪರಿಷ್ಕೃತ ದರ ಅನ್ವಯ ಆಗುತ್ತದೆ. ಮಾರಾಟಗಾರರು ಕಡ್ಡಾಯವಾಗಿ ಪರಿಷ್ಕೃತ ದರಕ್ಕೆ ಮಾರಾಟ ಮಾಡಬೇಕು
– ಬಿ. ಶಿವಸ್ವಾಮಿ, ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.