ADVERTISEMENT

ಏಕೀಕರಣ ಹೋರಾಟದ ಕೊಂಡಿ ಕೋ.ಚೆನ್ನಬಸಪ್ಪ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2019, 8:27 IST
Last Updated 23 ಫೆಬ್ರುವರಿ 2019, 8:27 IST
   

ಬೆಂಗಳೂರು:ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನ ಕಾನಾಮಡುವಿನಲ್ಲಿಕೋ.ವೀರಣ್ಣ, ಬಸಮ್ಮ ದಂಪತಿಗೆಜನಿಸಿದ ಸಾಹಿತಿ ಕೋ.ಚನ್ನಬಸಪ್ಪ ಅವರು ಕಾಲೇಜಿನ ದಿನಗಳಿಂದಲೇ ರಾಷ್ಟ್ರೀಯ ಚಳವಳಿಗಳಲ್ಲಿ ತೊಡಗಿಸಿಕೊಂಡಿದ್ದರು.

ಕಾನಾಮಡುವಿನಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿದ ಇವರು ಬಳ್ಳಾರಿಯಲ್ಲಿ ಪ್ರೌಢಶಿಕ್ಷಣ ಹಾಗೂ ಅನಂತಪುರದ ಕಲಾ ಶಾಲೆಯಲ್ಲಿ ಕಾಲೇಜು ಶಿಕ್ಷಣ ಪಡೆದರು. ಈ ದಿನಗಳಲ್ಲಿಯೇ ಚಳವಳಿಗಳ ಭಾಗಿಯಾಗಿದ್ದಕೋಚೆ1942ರಲ್ಲಿ ಚಲೇಜಾವ್ ಚಳುವಳಿಯಲ್ಲಿ ಪಾಲ್ಗೊಂಡು ಬಂಧನಕ್ಕೆ ಒಳಗಾಗಿಮೂರು ತಿಂಗಳ ಜೈಲುವಾಸ ಅನುಭವಿಸಿದರು.

1946ರಲ್ಲಿ ಮುಂಬೈ ವಿಶ್ವವಿದ್ಯಾಲಯದಿಂದ ಕಾನೂನು ಪದವಿ ಪಡೆದು, ಅಲ್ಲಿಂದಲೇ ವಕೀಲಿ ವೃತ್ತಿಯನ್ನು ಆರಂಭಿಸಿದರು. ಆಗಿನಿಂದಲೇ ಅವರುಪ್ರೀತಿಯ ಕೋ.ಚೆ ಆದರು. ಮುಂಬೈ ಕೋರ್ಟ್‌ನಿಂದ ಸನ್ನದು ಪಡೆದು ಬಳ್ಳಾರಿಯಲ್ಲಿ ವಕೀಲ ವೃತ್ತಿ ಆರಂಭಿಸಿದರು. 1965ರಲ್ಲಿ ಬಳ್ಳಾರಿಯಲ್ಲಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾಗಿ ನೇಮಕಗೊಂಡರು.1977ರಲ್ಲಿ ನಿವೃತ್ತಿಯಾದರು.

ADVERTISEMENT

ಭಾರತದ ಸ್ವಾತಂತ್ರ್ಯ ಹೋರಾಟಕ್ಕಿಂತ ಕರ್ನಾಟಕದ ಏಕೀಕರಣದ‌ ಬಗ್ಗೆ ಕೋಚೆ ಅವರಿಗೆ ಹೆಚ್ಚು ಆಸಕ್ತಿ ಇತ್ತು. ಅದಕ್ಕೆ ಇಂಬು ನೀಡುವಂತೆ‌ 1945ರಲ್ಲೇ ವಿದ್ಯಾರ್ಥಿಯಾಗಿದ್ದಾಗ ಅವರು ಏಕೀಕರಣ‌ ಮಹಾಸಮಿತಿಯ ಕಾರ್ಯಕಾರಿ ಸಮಿತಿ ಸದಸ್ಯರಾಗಿದ್ದರು.ಪೂರ್ವ ಕರ್ನಾಟಕ ಪರಿಷತ್ತನ್ನು ಸ್ಥಾಪಿಸಿದರು. ಧರ್ ಸಮಿತಿಯ ಮುಂದೆ ಪ್ರಾಂತ ನಿರ್ಮಾಣದ ಬಗ್ಗೆ ಮನವಿ ಮಾಡಲು ಹಾಜರಾದರು. ವಾಂಛೂ ಸಮಿತಿಯ‌ ಮುಂದೆಯೂ ನಾವೆಲ್ಲ ಒಂದೇ ಎಂಬ ಒಗ್ಗೆಟ್ಟು ಪಗರದರ್ಶಿಸಿ, ಭರವಸೆ ನೀಡಿದರು.

ರೈತ ಪತ್ರಿಕೆಯ ಮೂಲಕ ಕೋಚೆ ಅವರ ಹೆಸರು ಇತಿಹಾಸದಲ್ಲಿ ಉಳಿಯಿತು. 1948ರಿಂದ 1962ರವರೆಗೆ 'ರೈತ' ವಾರಪತ್ರಿಕೆ ಸಂಪಾದಿಸಿದರು. ಬಳ್ಳಾರಿಯಲ್ಲಿ ತೆಲುಗು ಭಾಷೆಯನ್ನೇ ಹೆಚ್ಚಾಗಿ ಮಾತನಾಡುತ್ತಿದ್ದರು.1920ರವರೆಗೆ ಇಲ್ಲಿ ಕನ್ನಡ ಶಾಲೆಗಳೇ ಇರಲಿಲ್ಲ‌.ಕರ್ನಾಟಕದ ಏಕೀಕರಣದ ಹೋರಾಟದಲ್ಲಿ ಬಳ್ಳಾರಿಯನ್ನು ಕರ್ನಾಟಕಕ್ಕೆ ಸೇರಿಸಲು ಕೋಚೆ ಅವರು ಪಟ್ಟ ಶ್ರಮ ಅಭಿನಂದನೀಯ.

ಆಂಧ್ರದ ಜತೆ ಗುದ್ದಾಡುತ್ತಲೇ, ಕೆಲವರು ಕೇಳುವ ಪ್ರಶ್ನೆಗಳಿಗೆ ಸಮರ್ಪಕವಾಗಿ ಕೋಚೆ ಉತ್ತರಿಸುತ್ತಿದ್ದರು. ಆಗ ಅವರು ಪೂರ್ವ ಕರ್ನಾಟಕ ಏಕೀಕರಣ ಸಮಿತಿಯ ಕಾರ್ಯದರ್ಶಿಗಳಾಗಿದ್ದರು‌. ತುಂಗಭದ್ರಾ ಹೋರಾಟ ಸಮಿತಿಯ ಮುಖಂಡರೂ ಆಗಿದ್ದರು. 1948ರಲ್ಲಿ ದಾವಣಗೆರೆಯಲ್ಲಿ ನಡೆದ ಕರ್ನಾಟಕಸ್ಥರ ಮಹಾಸಭೆಯಲ್ಲಿ ' ಮೈಸೂರು ಸಹಿತ ಕರ್ನಾಟಕ ಏಕೀಕರಣವಾಗಬೇಕು' ಎಂದು ಗೊತ್ತುವಳಿ ಸ್ವೀಕಾರದಲ್ಲಿ ಕೋಚೆ ಅವರ ಪಾತ್ರವೂ ಇತ್ತು.

ಪ್ರಗತಿಶೀಲ ಪಂಥದ ಪ್ರಮುಖ ಸಾಹಿತಿಗಳಲ್ಲಿ ಕೋಚೆ ಸಹ ಒಬ್ಬರು. ಕನ್ನಡ ಮತ್ತು ಕರ್ನಾಟಕದ ಬಹುತೇಕ ಹೋರಾಟಗಳಲ್ಲಿ ಮುಂಚೂಣಿಯಲ್ಕಿದ್ದವರು.ಕಥೆ, ಕಾದಂಬರಿ ಬರೆದರು. ಜನಪರ ಕಾಳಜಿಯಿಂದ ಬಹುತೇಕ ಕನ್ನಡಿಗರ ಮನ ಸೆಳೆದವರು. ಅವರ'ಬೇಡಿ ಕಳಚಿತು ದೇಶ ಒಡೆಯಿತು' ಕಾದಂಬರಿ ಒಂದು ಅಪೂರ್ವ ಕೃತಿಯಾಗಿದೆ.

ಇವುಗಳನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.