
ಬೆಂಗಳೂರು: ಕೋಗಿಲು ಬಂಡೆ ಪ್ರದೇಶದಲ್ಲಿ ಶೆಡ್, ಮನೆ ನೆಲಸಮ ಮಾಡಿ ಹೊರಹಾಕಲಾದ ಕುಟುಂಬಗಳಿಗೆ ಪರ್ಯಾಯ ಮನೆಗಳನ್ನು ಮಂಜೂರು ಮಾಡುವುದನ್ನು ಸರ್ಕಾರ ಮುಂದಕ್ಕೆ ಹಾಕಿದೆ.
ಕಂದಾಯ ಇಲಾಖೆ ಮತ್ತು ಗ್ರೇಟರ್ ಬೆಂಗಳೂರು ಪ್ರಾಧಿಕಾರವು (ಜಿಬಿಎ) ‘ಅರ್ಹ’ ಫಲಾನುಭವಿಗಳನ್ನು ಗುರುತಿಸುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದೆ ಎಂದು ಹೇಳಲಾಗಿದ್ದರೂ, ಸರ್ಕಾರವು ಫ್ಲಾಟ್‌ಗಳ ಹಂಚಿಕೆಗೆ ದಿನಾಂಕ ನಿಗದಿ ಮಾಡಿಲ್ಲ.
ಮುಖ್ಯಮಂತ್ರಿಯವರ ಒಂದು ಲಕ್ಷ ವಸತಿ ಯೋಜನೆಯ ಭಾಗವಾಗಿ ನಿರ್ಮಿಸಲಾದ ಫ್ಲ್ಯಾಟ್‌ಗಳನ್ನು ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಶಾಸಕರೂ ಆಗಿರುವ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಶನಿವಾರ ವಿದೇಶ ಪ್ರವಾಸದಿಂದ ಹಿಂದಿರುಗಿದ ನಂತರವೇ ಹಂಚಿಕೆ ಮಾಡಲಾಗುತ್ತದೆ ಎಂದು ವಸತಿ ಇಲಾಖೆಯ ಮೂಲಗಳು ತಿಳಿಸಿವೆ. ನಿಯಮಗಳ ಪ್ರಕಾರ, ಆಶ್ರಯ ಸಮಿತಿಯ ಮುಖ್ಯಸ್ಥರಾಗಿರುವ ಸ್ಥಳೀಯ ಶಾಸಕರು ತಮ್ಮ ಕ್ಷೇತ್ರದಲ್ಲಿ ನೆಲೆಗೊಂಡಿರುವ ವಸತಿ ಯೋಜನೆಯ ಫಲಾನುಭವಿಗಳ ಹೆಸರನ್ನು ಅನುಮೋದಿಸಬೇಕಿದೆ.
ವಸತಿ ಯೋಜನೆಗೆ ಅರ್ಹರಾಗಲು ಅಗತ್ಯವಾದ ದಾಖಲೆಗಳನ್ನು ಕೆಲವು ಕುಟುಂಬಗಳು ಹೊಂದಿಲ್ಲದ ಕಾರಣ ಫಲಾನುಭವಿಗಳ ಆಯ್ಕೆ ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ, ಜೊತೆಗೆ ₹5 ಲಕ್ಷ ಆರ್ಥಿಕ ನೆರವು ನೀಡುವ ಒಂಟಿ ಮನೆ ಯೋಜನೆಗೂ ಅರ್ಹರಾಗಲು ಅಗತ್ಯ ದಾಖಲೆಗಳನ್ನು ಹೊಂದಿಲ್ಲ.
ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಯಮಿತವು ತ್ಯಾಜ್ಯ ನಿರ್ವಹಣೆ ಸಂಬಂಧಿತ ಯೋಜನೆಗಳನ್ನು ಕೈಗೆತ್ತಿಕೊಳ್ಳಲು 167 ಶೆಡ್‌ಗಳನ್ನು ಕೆಡವಿತ್ತು. 90 ಕುಟುಂಬಗಳು ಪರ್ಯಾಯ ವಸತಿ ಯೋಜನೆಗೆ ಅರ್ಹವಾಗಿವೆ ಎಂದು ಸರ್ಕಾರ ಘೋಷಿಸಿದೆ.
ನೆಲೆ ಒದಗಿಸಲು ಆಗ್ರಹ
ಕೋಗಿಲು ಪ್ರಕರಣದಲ್ಲಿ ಅಮಾನವೀಯ ರೀತಿಯಲ್ಲಿ ಬಡವರ ಮನೆಗಳನ್ನು ಧ್ವಂಸ ಮಾಡಿ ರಾಜ್ಯ ಸರ್ಕಾರವು ಘೋರ ತಪ್ಪು ಮಾಡಿದೆ. ಇದೀಗ ಕೊಟ್ಟ ಮಾತನ್ನು ತಪ್ಪುವ ಮೂಲಕ ಮತ್ತೊಂದು ತಪ್ಪು ಮಾಡಬಾರದು. ಬಡವರಲ್ಲಿ ರಾಜ್ಯದವರು, ಹೊರಗಿನವರು ಎಂಬ ಬೇಧ ಮಾಡದೆ, ಮನೆ ಕಳೆದುಕೊಂಡ ಎಲ್ಲರಿಗೂ ನೆಲೆ ಒದಗಿಸಬೇಕು ಎಂದು ಸಂಯುಕ್ತ ಹೋರಾಟ ಕರ್ನಾಟಕ ಆಗ್ರಹಿಸಿದೆ.
ಸಂಯುಕ್ತ ಹೋರಾಟ ಕರ್ನಾಟಕದ ಬಡಗಲಪುರ ನಾಗೇಂದ್ರ, ಎಚ್.ಆರ್. ಬಸವರಾಜಪ್ಪ, ಎಸ್.ವರಲಕ್ಷ್ಮೀ, ನೂರ್ ಶ್ರೀಧರ್, ಗುರುಪ್ರಸಾದ್ ಕೆರಗೋಡು, ಭಗವಾನ್ ರೆಡ್ಡಿ, ಎಸ್.ಆರ್. ಹಿರೇಮಠ, ಮಾವಳ್ಳಿ ಶಂಕರ್, ಅಪ್ಪಣ್ಣ, ಪಿ.ವಿ.ಲೋಕೇಶ್, ಸಿದ್ಧಗೌಡ ಮೋದಗಿ, ಕೆ.ವಿ. ಭಟ್, ಡಿ.ಎಚ್. ಪೂಜಾರ್, ಸಿದ್ದನಗೌಡ ಪಾಟೀಲ್, ಕುಮಾರ್ ಸಮತಳ, ಯು.ಬಸವರಾಜ್, ಯಶವಂತ್ ಟಿ., ದೇವಿ, ಶಿವಪ್ಪ, ಅಭಿರುಚಿ ಗಣೇಶ್, ನಾಗರಾಜ್ ಪೂಜಾರ್, ನವೀನ್ ಈ ಬಗ್ಗೆ ಜಂಟಿ ಪತ್ರಿಕಾ ಹೇಳಿಕೆ ನೀಡಿದ್ದಾರೆ.
ಕೋಗಿಲು ಪ್ರಕರಣದ ಸಂತ್ರಸ್ತರಿಗೆ ಮಾನವೀಯ ನೆಲೆಯ ಮೇಲೆ ಹೊಸ ವರ್ಷಕ್ಕೆ ರಾಜೀವ್ ಗಾಂಧಿ ಆಶ್ರಯ ಯೋಜನೆಯಡಿ ನಿರ್ಮಿಸಲಾಗಿರುವ ಮನೆಗಳ ಬೀಗದ ಕೀ ನೀಡುವ ಮೂಲಕ ಶುಭ ಸಂದೇಶ ನೀಡುವುದಾಗಿ ಮಾತನಾಡಿದ್ದ ಕಾಂಗ್ರೆಸ್ ಸರ್ಕಾರವು ಈಗ ಮೀನಮೇಷ ಎಣಿಸುತ್ತಿರುವುದು ಗೋಚರಿಸುತ್ತಿದೆ ಎಂದು ದೂರಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ವಸತಿ ಸಚಿವ ಜಮೀರ್ ಅಹ್ಮದ್ ತೆಗೆದುಕೊಳ್ಳುತ್ತಿರುವ ತೀರ್ಮಾನಗಳನ್ನು ಕಾಂಗ್ರೆಸ್ ಒಳಗೂ ವಿರೋಧಿಸುವ ಶಕ್ತಿಗಳು ಕೆಲಸ ಮಾಡುತ್ತಿವೆ. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಖಡಕ್ ಮಾತುಗಳು ಇದನ್ನು ಪ್ರತಿನಿಧಿಸುತ್ತಿದೆ ಎಂದು ಆರೋಪಿಸಿದ್ದಾರೆ.
ತಾತ್ಕಾಲಿಕ ವಸತಿಗೆ ಜಿಬಿಎ ಸೂಚನೆ
ಕೋಗಿಲು ಬಡಾವಣೆಯಿಂದ ಸ್ಥಳಾಂತರಿಸಲಾದ ಕುಟುಂಬಗಳಿಗೆ ಚಳಿಯಿಂದ ರಕ್ಷಣೆ ಒದಗಿಸಲು ತಾತ್ಕಾಲಿಕ ವಸತಿ ಸೌಲಭ್ಯವನ್ನು ಒದಗಿಸುವಂತೆ ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ (ಜಿಬಿಎ) ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗವು ನಿರ್ದೇಶನ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.