ADVERTISEMENT

ಕೋಗಿಲು ಬಡಾವಣೆ: ಇನ್ನೂ ಪೂರ್ಣಗೊಳ್ಳದ ವಸತಿ ಸಮುಚ್ಚಯ

ಕೋಗಿಲು ಬಡಾವಣೆಯ ಸಂತ್ರಸ್ತರಿಗೆ ನೀಡಲು ಉದ್ದೇಶಿಸಿರುವ ಮನೆಗಳು

ಸ್ನೇಹಾ ರಮೇಶ್
Published 30 ಡಿಸೆಂಬರ್ 2025, 20:29 IST
Last Updated 30 ಡಿಸೆಂಬರ್ 2025, 20:29 IST
   

ಬೆಂಗಳೂರು: ಕೋಗಿಲು ಬಡಾವಣೆಯಲ್ಲಿ ಮನೆ ಕಳೆದುಕೊಂಡಿರುವ ಅರ್ಹರಿಗೆ ಬೈಯ್ಯಪ್ಪನಹಳ್ಳಿಯ ವಸತಿ ಸಮುಚ್ಚಯದಲ್ಲಿ ನಿರ್ಮಿಸಿರುವ ಮನೆಗಳನ್ನು ಹಂಚಿಕೆ ಮಾಡಲಾಗುವುದು ಎಂದು ಸರ್ಕಾರ ಘೋಷಿಸಿದೆ. ಆದರೆ, ಆರು ಬ್ಲಾಕ್‌ಗಳ ಸಮುಚ್ಚಯ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ.

ಮಂಗಳವಾರ ‘ಪ್ರಜಾವಾಣಿ’ ಪ್ರತಿನಿಧಿ ಸ್ಥಳಕ್ಕೆ ಭೇಟಿ ನೀಡಿದ ವೇಳೆ, ‘ಕಾಮಗಾರಿ ಪೂರ್ಣಗೊಳಿಸಲು ಕನಿಷ್ಠ ಎರಡು ತಿಂಗಳು ಬೇಕಾಗುತ್ತದೆ’ ಎಂದು ಸ್ಥಳದಲ್ಲಿದ್ದ ಕಾರ್ಮಿಕರು ತಿಳಿಸಿದರು. 

‘ಅಂತಿಮ ಹಂತದ ಕೆಲಸಗಳು ಬಾಕಿ ಇವೆ. ಲಿಫ್ಟ್‌ಗಳ ಅಳವಡಿಕೆ, ತ್ಯಾಜ್ಯ ನೀರು ಸಂಸ್ಕರಣಾ ಘಟಕ (ಎಸ್‌ಟಿಪಿ) ಕಾರ್ಯಾರಂಭ ಹಾಗೂ ಇತರೆ ಸಣ್ಣಪುಟ್ಟ ಕೆಲಸಗಳು ಬಾಕಿಯಿವೆ. ಎರಡು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ’ ಎಂದು ಮೇಲ್ವಿಚಾರಕರೊಬ್ಬರು ಹೇಳಿದರು.

ADVERTISEMENT

ವಸತಿ ಸಮುಚ್ಚಯದ ‘ಇ’ ಮತ್ತು ‘ಎಫ್’ ಬ್ಲಾಕ್‌ಗಳಲ್ಲಿ ಫ್ಲ್ಯಾಟ್‌ಗಳನ್ನು ಹಂಚಿಕೆ ಮಾಡುವ ಉದ್ದೇಶವಿದ್ದು, ಅಲ್ಲಿನ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಲಾಗುವುದು ಎಂದು ರಾಜೀವ್ ಗಾಂಧಿ ವಸತಿ ನಿಗಮದ ಹಿರಿಯ ಅಧಿಕಾರಿಗಳು ತಿಳಿಸಿದರು.

‘ಸಂತ್ರಸ್ತ ಕುಟುಂಬಗಳಿಗೆ ‘ಇ’ ಮತ್ತು ‘ಎಫ್’ ಬ್ಲಾಕ್‌ಗಳಲ್ಲಿ ಫ್ಲ್ಯಾಟ್‌ಗಳನ್ನು ನೀಡಲಾಗುತ್ತದೆ. ‘ಇ’ ಬ್ಲಾಕ್‌ನ ಬಹುತೇಕ ಕಾಮಗಾರಿಗಳು ಪೂರ್ಣಗೊಂಡಿದ್ದು, ‘ಎಫ್’ ಬ್ಲಾಕ್‌ನಲ್ಲಿ ಲಿಫ್ಟ್‌ಗಳ ಅಳವಡಿಕೆ ಸೇರಿದಂತೆ ಕೆಲವೊಂದು ಕೆಲಸಗಳು ಬಾಕಿ ಇವೆ. ಮನೆಗಳ ಹಂಚಿಕೆ ಪ್ರಕ್ರಿಯೆಗೆ ಸರ್ಕಾರ ಮುಂದಾದರೆ, ವಾರದೊಳಗೆ ಕಾಮಗಾರಿ ಪೂರ್ಣಗೊಳಿಸಬಹುದು’ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

ವಸತಿ ಸಮುಚ್ಚಯಕ್ಕೆ ಹೋಗುವ ಮಾರ್ಗದ ರಸ್ತೆ ಹದಗೆಟ್ಟಿರುವ ಕಾರಣ ಸಂಚಾರಕ್ಕೆ ತೊಂದರೆಯಾಗಿದೆ. ಮರಳು, ಸಿಮೆಂಟ್  ವಾಹನಗಳು ಹೆಚ್ಚಾಗಿ ಸಂಚರಿಸುತ್ತಿರುವುದರಿಂದ ಕನಿಷ್ಠ ಎರಡು ಕಿಲೋ ಮೀಟರ್ ವ್ಯಾಪ್ತಿಯಲ್ಲಿ ದೂಳು ಆವರಿಸಿಕೊಳ್ಳುತ್ತದೆ. ಮಿಟ್ಟಗಾನಹಳ್ಳಿ ಕಸ ವಿಲೇವಾರಿ ಕೇಂದ್ರ ಸಮೀಪವಿರುವುದೂ ಆತಂಕಕ್ಕೆ ಕಾರಣವಾಗಿದೆ. ಅಲ್ಲದೇ ಹತ್ತಿರದ ಬಸ್ ನಿಲ್ದಾಣ ಕನಿಷ್ಠ ಐದು ಕಿಲೋ ಮೀಟರ್ ದೂರದಲ್ಲಿರುವುದರಿಂದ ಸಂಚಾರಕ್ಕೆ ಕಷ್ಟವಾಗಲಿದೆ.

ಈ ವಸತಿ ಸಮುಚ್ಚಯದಲ್ಲಿ ಒಟ್ಟು ಆರು ಬ್ಲಾಕ್‌ಗಳಿದ್ದು, 585 ಚದರ ಅಡಿ ವಿಸ್ತೀರ್ಣ ಹೊಂದಿರುವ 1,187 (ಒಂದು ಬಿಎಚ್‌ಕೆ) ಫ್ಲ್ಯಾಟ್‌ಗಳಿವೆ. ಈ ಪೈಕಿ 579 ಫ್ಲ್ಯಾಟ್‌ಗಳಿಗೆ ಗ್ರಾಹಕರು ಪ್ರಾರಂಭಿಕ ಹಣ ನೀಡಿ ಕಾಯ್ದಿರಿಸಿದ್ದಾರೆ.

‘ವಾಸವಿದ್ದ ಮನೆಗಳನ್ನು ಕೆಡವಿದ ಬಳಿಕ ಸರ್ಕಾರ ಪರ್ಯಾಯ ವ್ಯವಸ್ಥೆ ಮಾಡಿಲ್ಲ. ಹಾಗಾಗಿ ಇನ್ನೂ ಎರಡು ತಿಂಗಳು ಕಾಯುವುದು ಅಸಾಧ್ಯ. ಸಂಬಂಧಿಕರ ಮನೆಯಲ್ಲಿ ವಾಸಿಸುತ್ತಿದ್ದು, ಹೆಚ್ಚಿನ ದಿನ ಇರುವುದು ಕಷ್ಟ. ಮಲಗಲು ಸಹ ಸರಿಯಾದ ಜಾಗವಿಲ್ಲ. ಸಾಧ್ಯವಾದಷ್ಟು ಬೇಗ ಸರ್ಕಾರ ಮನೆಗಳನ್ನು ಹಂಚಿಕೆ ಮಾಡಬೇಕು’ ಎಂದು ಸಂತ್ರಸ್ತೆ ಜಬೀನಾ ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.