ADVERTISEMENT

ಒಳಮೀಸಲಾತಿ ವರ್ಗೀಕರಣದ ವೇಳೆ ಕೊರಚ ಸಮುದಾಯದ ಅಭಿಪ್ರಾಯ ಪರಿಗಣಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 9 ಜುಲೈ 2025, 19:54 IST
Last Updated 9 ಜುಲೈ 2025, 19:54 IST
<div class="paragraphs"><p>ಜಾತಿಗಣತಿ</p></div>

ಜಾತಿಗಣತಿ

   

ಬೆಂಗಳೂರು: ಒಳ ಮೀಸಲಾತಿ ವರ್ಗೀಕರಣ ಮಾಡುವ ಸಂದರ್ಭದಲ್ಲಿ ಕೊರಚ ಸಮುದಾಯದ ಪ್ರತಿನಿಧಿಗಳ ಅಭಿಪ್ರಾಯಗಳು ಹಾಗೂ ಸಲಹೆಗಳನ್ನೂ ಪರಿಗಣಿಸಿ ತೀರ್ಮಾನ ಕೈಗೊಳ್ಳಬೇಕು ಎಂದು ಅಖಿಲ ಕರ್ನಾಟಕ ಕೊರಚ ಮಹಾಸಭಾ ಆಗ್ರಹಿಸಿದೆ. 

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಹಾಸಭಾದ ರಾಜ್ಯ ಘಟಕದ ಅಧ್ಯಕ್ಷ ಆದರ್ಶ ಯಲ್ಲಪ್ಪ, ‘ಪರಿಶಿಷ್ಟ ಜಾತಿಯ 101 ಸಮುದಾಯಗಳ ಪಟ್ಟಿಯಲ್ಲಿ ಕೊರಚ ಮತ್ತು ಕೊರಮ ಸಮುದಾಯಗಳಿದ್ದು, ಇವರೆಡೂ ಪ್ರತ್ಯೇಕ ಸಮುದಾಯಗಳಾಗಿವೆ. ಒಳ ಮೀಸಲಾತಿ ನಿಗದಿ ಸಂದರ್ಭದಲ್ಲಿ ಕೊರಚ ಸಮುದಾಯದ ಅಭಿಪ್ರಾಯಗಳನ್ನೂ ಪರಿಗಣಿಸಬೇಕು’ ಎಂದು ಒತ್ತಾಯಿಸಿದರು. 

ADVERTISEMENT

‘ಸೂಕ್ಷ್ಮ, ಅತಿಸೂಕ್ಷ್ಮ ಸಮುದಾಯದಲ್ಲಿ ಬರುವ ಕೊರಚ ಸಮುದಾಯವನ್ನು ಕೈಬಿಟ್ಟು ಜುಲೈ 5ರಂದು ಮಾಜಿ ಸಚಿವ ಎಚ್. ಆಂಜನೇಯ ಅವರ ನೇತೃತ್ವದಲ್ಲಿ ಅಲೆಮಾರಿ ಸಭೆ ಹಮ್ಮಿಕೊಳ್ಳಲಾಗಿತ್ತು. ಇದು ಖಂಡನೀಯ. ಎಚ್. ಆಂಜನೇಯ ಅವರು ಎಲ್ಲರನ್ನೂ ಒಟ್ಟುಗೂಡಿಸಿ ಮತ್ತೊಂದು ಸಭೆ ನಡೆಸಿ, ಒಳ ಮೀಸಲಾತಿ ವರ್ಗೀಕರಣದ ಬಗ್ಗೆ ಚರ್ಚಿಸುವ ಭರವಸೆ ನೀಡಿದ್ದಾರೆ. ಇದಕ್ಕೆ ನಮ್ಮ ಬೆಂಬಲವಿದೆ. ಮುಂದಿನ ದಿನಗಳಲ್ಲಿ ಪರಿಶಿಷ್ಟ ಜಾತಿಯ ಸಮಸ್ತ ಅಲೆಮಾರಿ ಅಧಿಕೃತ ಸಮುದಾಯಗಳು ಒಗ್ಗಟ್ಟಾಗಿ ಹೋರಾಟ ಮಾಡಿ, ಅಲೆಮಾರಿ ಅಭಿವೃದ್ಧಿ ನಿಗಮಕ್ಕೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಿಸಲು ಪ್ರಯತ್ನಿಸಬೇಕು’ ಎಂದು ತಿಳಿಸಿದರು.

‘2011ರ ಜನಗಣತಿಯ ಪ್ರಕಾರ ಕೊರಚ ಸಮುದಾಯದ ಜನಸಂಖ್ಯೆ 55 ಸಾವಿರಕ್ಕೂ ಹೆಚ್ಚಿದೆ. ನಮ್ಮ ಸಮುದಾಯವನ್ನು ಅಲೆಮಾರಿ ಪಟ್ಟಿಯಿಂದ ಕೈಬಿಡಬಾರದು’ ಎಂದು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.