ADVERTISEMENT

ಕೊತ್ತನೂರು ಅಸ್ಥಿಪಂಜರ ಪ್ರಕರಣ: ಹಲ್ಲು ಸೆಟ್‌ನಿಂದ ವ್ಯಕ್ತಿಯ ಗುರುತು ಪತ್ತೆ

ನಿರ್ಮಾಣ ಹಂತದ ಕಟ್ಟಡದಲ್ಲಿ ಪತ್ತೆಯಾದ ಅಸ್ಥಿಪಂಜರ ಪ್ರಕರಣದ ತನಿಖೆ ನಡೆಸಿದ ಕೊತ್ತನೂರು ಠಾಣೆ ಪೊಲೀಸರು

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2025, 22:28 IST
Last Updated 12 ಅಕ್ಟೋಬರ್ 2025, 22:28 IST
<div class="paragraphs"><p>ಹಲ್ಲಿನ ಸೆಟ್</p></div>

ಹಲ್ಲಿನ ಸೆಟ್

   

ಬೆಂಗಳೂರು: ಕೊತ್ತನೂರಿನ ನಿರ್ಮಾಣ ಹಂತದ ಕಟ್ಟಡದಲ್ಲಿ ಪತ್ತೆಯಾದ ಅಸ್ಥಿಪಂಜರ ಪ್ರಕರಣದ ತನಿಖೆ ನಡೆಸಿದ ಕೊತ್ತನೂರು ಠಾಣೆ ಪೊಲೀಸರು, ಘಟನಾ ಸ್ಥಳದಲ್ಲಿ ಸಿಕ್ಕ ಹಲ್ಲು ಸೆಟ್‌ನಿಂದ ಮೃತ ವ್ಯಕ್ತಿಯ ಗುರುತು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ಎರಡು ವರ್ಷದ ಹಿಂದೆ ನಾಪತ್ತೆಯಾಗಿದ್ದ ಆವಲಹಳ್ಳಿಯ  69 ವರ್ಷದ ಸೋಮಯ್ಯ ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ. ಕೊತ್ತನೂರಿನ ಸಮೃದ್ಧಿ ಅಪಾರ್ಟ್‌ಮೆಂಟ್‌ ಸಮೀಪ ಹತ್ತು ವರ್ಷಗಳಿಂದ ಕಾಮಗಾರಿ ಸ್ಥಗಿತಗೊಂಡಿರುವ ಕಟ್ಟಡದಲ್ಲಿ ಅಕ್ಟೋಬರ್ 4ರಂದು ಅಸ್ಥಿಪಂಜರ ಪತ್ತೆಯಾಗಿತ್ತು.

ADVERTISEMENT

ಪೊಲೀಸರು ಅಸ್ಥಿಪಂಜರ ವಶಕ್ಕೆ ಪಡೆದು ವಿಧಿ ವಿಜ್ಞಾನ ಪ್ರಯೋಗಾಲಕ್ಕೆ ಕಳುಹಿಸಿದ್ದರು. ತನಿಖೆ ವೇಳೆ ಅಸ್ಥಿಪಂಜರ ಸಿಕ್ಕ ಸ್ಥಳದಲ್ಲಿ ಹಲ್ಲು ಸೆಟ್‌ವೊಂದು ಪತ್ತೆಯಾಗಿದ್ದು, 2020-21ನೇ ಸಾಲಿನಲ್ಲಿ ಅಂಬೇಡ್ಕರ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ ವ್ಯಕ್ತಿಯದು ಎಂಬುದು ದಾಖಲೆಗಳಿಂದ ದೃಢಪಟ್ಟಿತ್ತು. ಇದರ ಆಧಾರದ ಮೇಲೆ ಪೊಲೀಸರು ತನಿಖೆ ಮುಂದುವರೆಸಿದ್ದರು.

ನಾಪತ್ತೆ ಪ್ರಕರಣಗಳ ಪರಿಶೀಲನೆ ವೇಳೆ 2023ನೇ ಸಾಲಿನಲ್ಲಿ ಸೋಮಯ್ಯ ಎಂಬುವವರು ನಾಪತ್ತೆಯಾಗಿರುವ ಬಗ್ಗೆ ಅವರ ಪುತ್ರ ಕಿರಣ್‌ ಕುಮಾರ್‌ ಆವಲಹಳ್ಳಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು.

ಅಸ್ಥಿಪಂಜರ ಪತ್ತೆಯಾದ ಸ್ಥಳದಲ್ಲಿ ಸ್ಟೈಲ್‌ ಯೂನಿಯನ್‌ ಬ್ರಾಂಡ್‌ ಟೀ ಶರ್ಟ್‌ ಮತ್ತು ಪ್ಯಾರಾಗಾನ್‌ ಚಪ್ಪಲಿ ಸಹ ಸಿಕ್ಕಿದ್ದವು. ಸೋಮಯ್ಯ ನಾಪತ್ತೆ ವೇಳೆ ಧರಿಸಿದ್ದ ಉಡುಪುಗಳು ಇದೇ ಮಾದರಿಯಾಗಿದ್ದವು. ಈ ಬಗ್ಗೆ ಅನುಮಾನಗೊಂಡು ದೂರುದಾರ ಕಿರಣ್‌ ಕುಮಾರ್‌ ಅವರನ್ನು ಕರೆಸಿ ವಸ್ತುಗಳನ್ನು ತೋರಿಸಿದಾಗ, ತಂದೆ ಸೋಮಯ್ಯ ಅವರದೇ ಎಂದು ಖಚಿತಪಡಿಸಿದರು. ಬಳಿಕ ಪೊಲೀಸರು ಸೋಮಯ್ಯ ಅವರ ಅಸ್ಥಿಪಂಜರವನ್ನು ಪುತ್ರ ಕಿರಣ್‌ ಕುಮಾರ್‌ಗೆ ಒಪ್ಪಿಸಿದ್ದಾರೆ.

ಸೋಮಯ್ಯ ಅವರು ನಿರ್ಮಾಣ ಹಂತದ ಕಟ್ಟಡದೊಳಗೆ ಏಕೆ ಬಂದರು? ಹೇಗೆ ಮೃತಪಟ್ಟರು ಎಂಬುದರ ಕುರಿತು ಪೊಲೀಸರು ತನಿಖೆ ಮುಂದುವರೆಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.