ADVERTISEMENT

ಆರ್ಥಿಕ ಪ್ಯಾಕೇಜ್ ಘೋಷಿಸಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಆಗ್ರಹ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2021, 21:12 IST
Last Updated 26 ಏಪ್ರಿಲ್ 2021, 21:12 IST
ಡಿ.ಕೆ. ಶಿವಕುಮಾರ್
ಡಿ.ಕೆ. ಶಿವಕುಮಾರ್   

ಬೆಂಗಳೂರು: ‘ಜನರ ಆರೋಗ್ಯ ಕಾಪಾಡಲು ಯಾವುದೇ ಕ್ರಮಗಳನ್ನು ತೆಗೆದುಕೊಂಡರೂ ನಮ್ಮ ಅಭ್ಯಂತರ ಇಲ್ಲ. ಆದರೆ, ಈ ನಿರ್ಬಂಧದಿಂದ ತೊಂದರೆ ಎದುರಿಸುವವರಿಗೆ ಸರ್ಕಾರ ಆರ್ಥಿಕ ಪ್ಯಾಕೇಜ್ ಘೋಷಿಸಬೇಕು’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಆಗ್ರಹಿಸಿದರು.

ಕೈಗಾರಿಕಾ ಸಂಘಟನೆಗಳ ಪ್ರತಿನಿಧಿಗಳು, ವ್ಯಾಪಾರಿಗಳು ಮತ್ತು ಕಾರ್ಮಿಕರ ಜೊತೆ ಪಕ್ಷದ ಕಚೇರಿಯಲ್ಲಿ ಸೋಮವಾರ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ‘ಸರ್ಕಾರ ತೀರ್ಮಾನಗಳಿಂದ ಎಲ್ಲ ವರ್ಗದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಉದ್ಯೋಗ ಸೃಷ್ಟಿಸಿ, ಸರ್ಕಾರಕ್ಕೆ ತೆರಿಗೆ ಕಟ್ಟಿ, ಸಮಾಜ ರಕ್ಷಿಸುತ್ತಿರುವ ವರ್ತಕರು ಬೇಸರಗೊಂಡಿದ್ದಾರೆ. ಈ ಸರ್ಕಾರ ತಮ್ಮ ಕೊನೆ ದಿನಗಳನ್ನು ಕಾಣುತ್ತಿರುವುದಕ್ಕೆ ಇದು ಸಾಕ್ಷಿ’ ಎಂದರು.

‘ವಾಣಿಜ್ಯ ಆಸ್ತಿ ತೆರಿಗೆಯನ್ನು ಎರಡು ವರ್ಷಗಳ ಅವಧಿಗೆ ಮನ್ನಾ ಮಾಡಬೇಕು. ಎಲ್ಲ ಸಾಲಗಳ ಅವಧಿ 2 ವರ್ಷ ಮುಂದೂಡಬೇಕು. ₹ 10 ಲಕ್ಷದಿಂದ ₹ 20 ಲಕ್ಷವರೆಗಿನ ಸಾಲದ ಬಡ್ಡಿಯನ್ನು ಸರ್ಕಾರವೇ ಕಟ್ಟಿಕೊಡಬೇಕು.ಸಾರಿಗೆ, ಹೋಟೆಲ್, ಉದ್ಯಮ ಕ್ಷೇತ್ರಗಳನ್ನು ಅಗತ್ಯ ಸೇವೆ ಎಂದು ಪರಿಗಣಿಸಬೇಕು ಎಂದು ಸಭೆಯಲ್ಲಿ ಬೇಡಿಕೆ ಇಟ್ಟಿದ್ದಾರೆ. ವಿರೋಧ ಪಕ್ಷವಾಗಿ ನಾವು ಅವರ ಪರ ನಿಲ್ಲುತ್ತೇವೆ’ ಎಂದರು.

ADVERTISEMENT

‘ಲಾಕ್ ಡೌನ್ ಎಂಬ ಪದ ಬಳಸದೆ, ಸರ್ಕಾರ ಎಲ್ಲವನ್ನೂ ಬಂದ್‌ ಮಾಡುತ್ತಿದೆ. ಇದರಿಂದ ಎಲ್ಲ ವರ್ಗದ ಜನರಿಗೆ ಕಷ್ಟವಾಗಲಿದೆ. ಲಾಕ್‌ಡೌನ್ ಮಾದರಿಯ ಕ್ರಮದ ಹೊರತಾಗಿ ಬೇರೆ ಮಾರ್ಗಗಳನ್ನು ಸರ್ಕಾರ ಅನುಸರಿಸಲಿ’ ಎಂದೂ ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.