ADVERTISEMENT

ಸೋಮಶೇಖರ್ ವಿರುದ್ಧ ಪ್ರತಿಭಟನೆ

ಅವಹೇಳನಕಾರಿ ಹೇಳಿಕೆಗೆ ಕಾರ್ಯಕರ್ತರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2019, 19:57 IST
Last Updated 1 ಅಕ್ಟೋಬರ್ 2019, 19:57 IST
ಅನರ್ಹ ಶಾಸಕ ಎಸ್.ಟಿ.ಸೋಮಶೇಖರ್ ವಿರುದ್ಧ ಕಾಂಗ್ರೆಸ್‌ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು
ಅನರ್ಹ ಶಾಸಕ ಎಸ್.ಟಿ.ಸೋಮಶೇಖರ್ ವಿರುದ್ಧ ಕಾಂಗ್ರೆಸ್‌ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು   

ಕೆಂಗೇರಿ: ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧ ಅನರ್ಹ ಶಾಸಕ ಎಸ್.ಟಿ.ಸೋಮಶೇಖರ್ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್‌ನ ಬೆಂಗಳೂರು ಉತ್ತರ ಜಿಲ್ಲಾ ಘಟಕದ ಕಾರ್ಯಕರ್ತರು ಕನಕಪುರ ಮುಖ್ಯರಸ್ತೆಯ ರಘುವನಹಳ್ಳಿ ಬಳಿ ಪ್ರತಿಭಟನೆ ನಡೆಸಿದರು.

ತಲಘಟ್ಟಪುರ, ಕೆಂಗೇರಿ, ಶ್ರೀನಿವಾಸಪುರ, ರಾಜರಾಜೇಶ್ವರಿನಗರ, ಮೈಲಸಂದ್ರ, ರಘುವನಹಳ್ಳಿ, ಪಟ್ಟಣಗೆರೆ ಸೇರಿದಂತೆ ವಿವಿಧೆಡೆಯಿಂದ ಬಂದಿದ್ದ ನೂರಾರು ಕಾರ್ಯಕರ್ತರು ಬೆಂಗಳೂರು ಉತ್ತರ ಜಿಲ್ಲಾ ಘಟಕದ ಅಧ್ಯಕ್ಷ ಎಂ.ರಾಜ್ ಕುಮಾರ್ ನೇತೃತ್ವದಲ್ಲಿ ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಇದೇ ವೇಳೆ ಮಾತನಾಡಿದ ಎಂ.ರಾಜ್ ಕುಮಾರ್, ‘ಆಮಿಷಕ್ಕೆ ಒಳಗಾದ ಎಸ್.ಟಿ.ಸೋಮಶೇಖರ್ ಮತದಾರರಿಗೆ ಹಾಗೂ ಪಕ್ಷಕ್ಕೆ ಮೋಸವೆಸಗಿದ್ದಾರೆ. ಸಿದ್ಧಾಂತಗಳನ್ನು ಬದಿಗೊತ್ತಿ ಪಕ್ಷದ ನಾಯಕರ ವಿರುದ್ಧ ಏಕವಚನದಲ್ಲಿ ನಿಂದಿಸಿದ್ದಾರೆ. ಕೂಡಲೇ ಪಕ್ಷದ ಅಧ್ಯಕ್ಷರ ಬಳಿ ಕ್ಷಮೆ ಕೇಳಬೇಕು’ ಎಂದರು. ‘ಸೋಮಶೇಖರ್ ಅವರು ಕಾಂಗ್ರೆಸ್ ಮೂಲಕವೇ ಎಲ್ಲಾ ಅಧಿಕಾರ ಅನುಭವಿಸಿದರು. ಇದೀಗ ಪಕ್ಷವನ್ನೇ ತೊರೆದು ಪಕ್ಷದ ಮುಖಂಡರ ವಿರುದ್ಧವೇ ಅವಹೇಳನಕಾರಿ ಮಾತುಗಳನ್ನಾಡುತ್ತಿದ್ದಾರೆ’ ಎಂದು ಕಾಂಗ್ರೆಸ್ ಮುಖಂಡ ಪಿ.ಎನ್.ಕೃಷ್ಣಮೂರ್ತಿ ಕಿಡಿಕಾರಿದರು.

ADVERTISEMENT

‘ಕಾಂಗ್ರೆಸ್‌ಗೆ ದ್ರೋಹ’

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿರುವ ಅನರ್ಹ ಶಾಸಕ ಎಸ್‌.ಟಿ. ಸೋಮಶೇಖರ್ ವಿರುದ್ಧ ಕಾಂಗ್ರೆಸ್ ನಗರ ಘಟಕದ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ಸೋಮಶೇಖರ್ ತಮ್ಮ ಕ್ಷೇತ್ರಕ್ಕೆ ಸಾವಿರಾರು ಕೋಟಿ ರೂಪಾಯಿ ಅನುದಾನ ಮಂಜೂರು ಮಾಡಿಸಿಕೊಂಡಿದ್ದರು. ಆದರೆ ಈಗ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಮುಖಂಡರ ವಿರುದ್ಧವೇ ಮಾತನಾಡುತ್ತಿದ್ದಾರೆ. ಪಕ್ಷಕ್ಕೆ ದ್ರೋಹ ಮಾಡಿದವರು, ಪ್ರಸ್ತುತಅನರ್ಹರಾಗಿ ತ್ರಿಶಂಕು ಸ್ಥಿತಿಯಲ್ಲಿದ್ದಾರೆ’ ಎಂದು ನಗರ ಘಟಕದ ಅಧ್ಯಕ್ಷ ಜಿ.ಕೃಷ್ಣಪ್ಪ ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಆರೋಪಿಸಿದರು.

ಅನರ್ಹರನ್ನು ಅನರ್ಹ ಶಾಸಕರು ಎಂದು ಕರೆಯುವುದು ತಪ್ಪೆ? ಕಾಂಗ್ರೆಸ್‌ನಿಂದ ಶಾಸಕರಾಗಿ, ಬಿಡಿಎ ಅಧ್ಯಕ್ಷ ಸ್ಥಾನವನ್ನು ಅನುಭವಿಸಿ ಕೊನೆಗೆ ಪಕ್ಷ ದ್ರೋಹದ ಕೆಲಸ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಸೋಮಶೇಖರ್‌ಗೆ ತಕ್ಕ ಪಾಠ ಕಲಿಸಲಾಗುವುದು ಎಂದು ಬಿಬಿಎಂಪಿ ಸದಸ್ಯ ಅಬ್ದುಲ್ ವಾಜಿದ್ ಎಂದು ಹೇಳಿದರು. ‘ಹಿಂದೆ ಯಾವ ಸ್ಥಿತಿಯಲ್ಲಿದ್ದೀರಿ ಎನ್ನುವುದನ್ನು ಅರಿತು ಮಾತನಾಡಬೇಕು. 5 ಸಲ ಕಾಂಗ್ರೆಸ್ ಟಿಕೆಟ್ ನೀಡಿದೆ. ಪಕ್ಷ ಎಲ್ಲವನ್ನೂ ಕೊಟ್ಟಿತ್ತು ಎಂಬುದನ್ನು ಮರೆಯಬಾರದು’ ಎಂದು ಮಾಜಿ ಮೇಯರ್ ಪದ್ಮಾವತಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.