ADVERTISEMENT

ಕೆಪಿಎಲ್‌ ಬೆಟ್ಟಿಂಗ್‌: ಮತ್ತೊಬ್ಬನ ಬಂಧನ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2019, 19:50 IST
Last Updated 5 ನವೆಂಬರ್ 2019, 19:50 IST
.
.   

ಬೆಂಗಳೂರು: ಕರ್ನಾಟಕ ಪ್ರೀಮಿಯರ್‌ ಲೀಗ್‌ (ಕೆಪಿಎಲ್‌) ಕ್ರಿಕೆಟ್‌ ಟೂರ್ನಿಯಲ್ಲಿ ನಡೆದಿದೆ ಎನ್ನಲಾದ ಬೆಟ್ಟಿಂಗ್‌ ಮತ್ತು ಮ್ಯಾಚ್‌ ಫಿಕ್ಸಿಂಗ್‌ ಪ್ರಕರಣದ ತನಿಖೆ ನಡೆಸುತ್ತಿರುವ ಸಿಸಿಬಿ ಪೊಲೀಸರು, ಬೆಂಗಳೂರು ಬ್ಲಾಸ್ಟರ್ಸ್‌ ತಂಡದ ಬ್ಯಾಟ್ಸ್‌ಮನ್‌ ನಿಶಾಂತ್‌ ಸಿಂಗ್‌ ಶೆಖಾವತ್‌ (26) ಎಂಬಾತನನ್ನು ಬಂಧಿಸಿದ್ದಾರೆ.

‘ಆರೋಪಿ ಪ್ರಮುಖ ಬುಕ್ಕಿಗಳ ಜತೆ ಸಂಪರ್ಕದಲ್ಲಿರುವುದು ಗೊತ್ತಾಗಿದೆ. ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ’ ಎಂದು ಸಿಸಿಬಿ ಜಂಟಿ ಪೊಲೀಸ್ ಕಮಿಷನರ್‌ ಸಂದೀಪ್ ಪಾಟೀಲ ತಿಳಿಸಿದರು.

ರಾಜಸ್ಥಾನದವನಾದ ಶೆಖಾವತ್‌, ಕೆಪಿಎಲ್‌ ಆರಂಭವಾದ ವರ್ಷದಿಂದ ಹುಬ್ಬಳ್ಳಿ, ಮಂಗಳೂರು, ಶಿವಮೊಗ್ಗ ತಂಡ ಪ್ರತಿನಿಧಿಸಿದ್ದಾನೆ. ಪ್ರಸ್ತುತ ಬೆಂಗಳೂರು ಬ್ಲಾಸ್ಟರ್ ತಂಡದ ಪರ ಆಡುತ್ತಿದ್ದಾನೆ. ತಲೆಮರೆಸಿಕೊಂಡಿರುವ ಪ್ರಮುಖ ಬುಕ್ಕಿಗಳಾದ ಸಯ್ಯಾಂ, ಜತ್ತಿನ್ ಮತ್ತು ಚಂಡೀಗಡದ ಬುಕ್ಕಿ ಮನೋಜ್ ಕುಮಾರ್ ಜತೆ ಶೆಖಾವತ್‌ ನಿರಂತರವಾಗಿ ಸಂಪರ್ಕದಲ್ಲಿದ್ದ. ಈಗಾಗಲೇ ಬಂಧನದಲ್ಲಿರುವ ಬೆಂಗಳೂರು ಬ್ಲಾಸ್ಟರ್ ತಂಡದ ಬೌಲಿಂಗ್ ಕೋಚ್ ವಿನು ಪ್ರಸಾದ್ ಮತ್ತು ಬ್ಯಾಟ್ಸ್‌ಮನ್‌ ವಿಶ್ವನಾಥನ್‌ ಎಂಬುವವರಿಗೆ ಬುಕ್ಕಿಗಳನ್ನು ಪರಿಚಯ ಮಾಡಿಕೊಟ್ಟಿದ್ದೇ ಈತ ಎಂಬ ಅಂಶ ತನಿಖೆಯಿಂದ ಗೊತ್ತಾಗಿದೆ.

ADVERTISEMENT

2018ರ ಆ. 31ರಂದು ಹುಬ್ಬಳ್ಳಿ ಟೈಗರ್ಸ್‌ ಮತ್ತು ಬೆಂಗಳೂರು ಬ್ಲಾಸ್ಟರ್ಸ್ ತಂಡದ ಮಧ್ಯೆ ಮೈಸೂರಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಮೈದಾನದಲ್ಲಿ ಪಂದ್ಯ ನಡೆದಿತ್ತು. ಈ ಪಂದ್ಯ ನಡೆಯುವ ಕೆಲವು ದಿನಗಳ ಮೊದಲು ಮೈಸೂರಿನ ಹೋಟೆಲ್ ಒಂದರಲ್ಲಿ ಬುಕ್ಕಿ ಮನೋಜ್‌ನನ್ನು ನಿಶಾಂತ್ ಸಂಪರ್ಕಿಸಿದ್ದ. ಬಳಿಕ ವಿನುಪ್ರಸಾದ್ ಮತ್ತು ವಿಶ್ವನಾಥನ್ ಬಳಿಗೆ ಕರೆದೊಯ್ದು ಪರಿಚಯಿಸಿದ್ದ. ಈ ಮ್ಯಾಚ್ ಫಿಕ್ಸಿಂಗ್‌ನಲ್ಲಿ ಹಣ ಪಡೆದಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಶೆಖಾವತ್‌ಗೆ ಎಲ್ಲ ತಂಡಗಳ ಕೋಚ್ ಮತ್ತು ಆಟಗಾರರ ಪರಿಚಯ ಇತ್ತು. ಆಟಗಾರರು ಮತ್ತು ಬುಕ್ಕಿಗಳ ಮಧ್ಯೆ ಈತ ಸಂಪರ್ಕ ಕೊಂಡಿಯಾಗಿದ್ದ. ಬುಕ್ಕಿಗಳನ್ನು ಹಲವು ಆಟಗಾರರಿಗೆ ಈತ ಪರಿಚಯಿಸಿರುವ ಸಾಧ್ಯತೆ ಇದೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ತನಿಖಾಧಿಕಾರಿಗಳು ತಿಳಿಸಿದರು.

ಬೆಟ್ಟಿಂಗ್‌ನಲ್ಲಿ ಪ್ರಮುಖ ಪಾತ್ರ ವಹಿಸಿದ ದೆಹಲಿಯ ಬುಕ್ಕಿಗಳಾದ ಜತಿನ್ ಮತ್ತು ಸಯ್ಯಾಂ ಎಂಬಿಬ್ಬರ ಬಂಧನಕ್ಕೆ ಲುಕ್‌ಔಟ್ ನೋಟಿಸ್ ಹೊರಡಿಸಲಾಗಿದೆ. ಸಿಸಿಬಿ ಪೊಲೀಸರು ಬೆನ್ನು ಬಿದ್ದಿದ್ದಾರೆ ಎಂದು ಗೊತ್ತಾಗುತ್ತಲೇ ಅವರಿಬ್ಬರೂ ವಿದೇಶದಲ್ಲಿ ತಲೆಮರೆಸಿಕೊಂಡಿದ್ದಾರೆ ಎನ್ನಲಾಗಿದೆ.

ಇದೇ ಪ್ರಕರಣಕ್ಕೆ ಸಂಬಂಧಿಸಿ ಬೆಳಗಾವಿ ಫ್ಯಾಂಥರ್ಸ್‌ ತಂಡದ ಮಾಲೀಕ ಅಶ್ಪಾಕ್ ಅಲಿ ತಾರ್‌ ಅವರನ್ನು ಮೊದಲು ಬಂಧಿಸಲಾಗಿತ್ತು. ತಾರ್‌ ನೀಡಿದ ಮಾಹಿತಿ ಆಧರಿಸಿ ತನಿಖೆ ಚುರುಕುಗೊಳಿಸಿದ್ದ ಪೊಲೀಸರು, ಬಳ್ಳಾರಿ ಟಸ್ಕರ್ಸ್ ತಂಡದ ಡ್ರಮ್ಮರ್ ಭವೇಶ್ ಎಂಬಾತನನ್ನು ಬಂಧಿಸಿದ್ದರು.ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ ಪ್ರಕರಣದಲ್ಲಿ ಬಗೆದಷ್ಟು ಆಘಾತಕಾರಿ ಅಂಶಗಳು ಸಿಸಿಬಿ ಪೊಲೀಸರ ತನಿಖೆಯಿಂದ ಬೆಳಕಿಗೆ ಬರುತ್ತಿದ್ದು, ಬೆಂಗಳೂರು ಬ್ಲಾಸ್ಟರ್ ತಂಡದ ಆಲ್‌ರೌಂಡರ್ ಆಟಗಾರನೊಬ್ಬನನ್ನು ಬಂಧಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.