ADVERTISEMENT

ಕೆಪಿಎಸ್‌ಸಿ: ಎಲ್ಲ ಪ್ರಕ್ರಿಯೆ ಮುಂದೂಡಲು ಒತ್ತಾಯ

ಇ–ಮೇಲ್‌ ಮೂಲಕ ಆಕ್ಷೇಪಣೆ ಸಲ್ಲಿಸಲು ಅವಕಾಶ: ಆಯೋಗ

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2020, 16:59 IST
Last Updated 27 ಏಪ್ರಿಲ್ 2020, 16:59 IST
ಕರ್ನಾಟಕ ಲೋಕಸೇವಾ ಆಯೋಗ
ಕರ್ನಾಟಕ ಲೋಕಸೇವಾ ಆಯೋಗ   

ಬೆಂಗಳೂರು: ಲಾಕ್‌ಡೌನ್‌ ಅವಧಿ ಮುಗಿಯುವವರೆಗೂ ಕೇವಲ ಪರೀಕ್ಷೆಗಳನ್ನು ಮುಂದೂಡುವ ಬದಲು, ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಎಲ್ಲ ಪ್ರಕ್ರಿಯೆಗಳನ್ನೂ ಮುಂದೂಡುವಂತೆ ಅಭ್ಯರ್ಥಿಗಳು ಒತ್ತಾಯಿಸಿದ್ದಾರೆ.

‘ವೈದ್ಯರು, ಶುಶ್ರೂಷಕರು ಹಾಗೂ ಕಂಪ್ಯೂಟರ್‌ ಶಿಕ್ಷಕರು ಸೇರಿದಂತೆ ಹಲವು ಹುದ್ದೆಗಳ ತಾತ್ಕಾಲಿಕ ಆಯ್ಕೆಪಟ್ಟಿಯನ್ನು ಏ.24ರಂದು ಪ್ರಕಟಿಸಿರುವ ಆಯೋಗವು, ಏಳು ದಿನಗಳೊಳಗೆ ಆಕ್ಷೇಪಣೆ ಸಲ್ಲಿಸಲು ಹೇಳಿದೆ. ಆದರೆ, ಲಾಕ್‌ಡೌನ್ ಇರುವುದರಿಂದ ಈ ಪ್ರಕ್ರಿಯೆಯನ್ನು ಮುಂದೂಡಬೇಕು’ ಎಂದು ಅಭ್ಯರ್ಥಿಗಳು ಒತ್ತಾಯಿಸಿದ್ದಾರೆ.

‘ಕೊರೊನಾ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಕೆಪಿಎಸ್‌ಸಿಯು ಎಲ್ಲ ಪರೀಕ್ಷೆಗಳನ್ನು ಮುಂದೂಡಿದೆ. ಆದರೆ, ಇದೇ ಸಂದರ್ಭದಲ್ಲಿ ತಾತ್ಕಾಲಿಕ ಆಯ್ಕೆಪಟ್ಟಿಯನ್ನೂ ಪ್ರಕಟಿಸಿದೆ. ಆಕ್ಷೇಪಣೆ ಸಲ್ಲಿಸಲು ಅಭ್ಯರ್ಥಿಗಳು ತಮ್ಮ ಊರುಗಳಿಂದ ಬೆಂಗಳೂರಿಗೆ ಬರಬೇಕಾಗುತ್ತದೆ. ಅಲ್ಲದೆ, ನುರಿತ ವಕೀಲರನ್ನು ಸಂಪರ್ಕಿಸಬೇಕಾಗುತ್ತದೆ. ನ್ಯಾಯಾಲಯದ ಮೊರೆಯೂ ಹೋಗಬೇಕಾಗಿರುತ್ತದೆ. ಈ ಸಂದರ್ಭದಲ್ಲಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ತೆರಳುವ ವೇಳೆ ಸೋಂಕು ಹರಡುವ ಸಾಧ್ಯತೆ ಇರುತ್ತದೆ. ಹೀಗಾಗಿ, ಲಾಕ್‌ಡೌನ್‌ ಅವಧಿ ಮುಗಿಯುವವರೆಗೆ ಆಯೋಗದ ಎಲ್ಲ ಪ್ರಕ್ರಿಯೆಗಳನ್ನು ಮುಂದೂಡಬೇಕು’ ಎಂದು ಅಭ್ಯರ್ಥಿಗಳು ಆಗ್ರಹಿಸಿದ್ದಾರೆ.

ADVERTISEMENT

ಇ–ಮೇಲ್ ಮಾಡಿ

‘ಯಾವುದೇ ಆಕ್ಷೇಪಣೆ ಸಲ್ಲಿಸಲು ಕಚೇರಿಗೆ ಅಥವಾ ಬೆಂಗಳೂರಿಗೆ ಬರಲೇಬೇಕು ಎಂದೇನಿಲ್ಲ. ಅಭ್ಯರ್ಥಿಗಳು ಇ–ಮೇಲ್‌ ಮೂಲಕ ಸಲ್ಲಿಸುವ ಆಕ್ಷೇಪಣೆಗಳನ್ನೂ ಪರಿಗಣಿಸಲಾಗುವುದು. ಇ–ಮೇಲ್‌ ವಿವರ ಮತ್ತಿತರ ಮಾಹಿತಿಯನ್ನು ಕೂಡಲೇ ಆಯೋಗದ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು’ ಎಂದು ಕೆಪಿಎಸ್‌ಸಿ ಕಾರ್ಯದರ್ಶಿ ಜಿ. ಸತ್ಯವತಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮಾರ್ಚ್‌ನಲ್ಲಿಯೇ ನಾವು 1:3 ಅನುಪಾತದಲ್ಲಿ ಆಯ್ಕೆಪಟ್ಟಿ ಪ್ರಕಟಿಸಬೇಕಾಗಿತ್ತು. ಲಾಕ್‌ಡೌನ್‌ ಇದ್ದುದರಿಂದ ವಿಳಂಬವಾಗಿದೆ. ಆದರೆ, ವೈದ್ಯರು ಮತ್ತು ಶುಶ್ರೂಷಕರ ಅಗತ್ಯ ಈಗ ಹೆಚ್ಚಾಗಿರುವುದರಿಂದ ನಮ್ಮ ಸಿಬ್ಬಂದಿ ಹಗಲು–ರಾತ್ರಿ ಕೆಲಸ ಮಾಡಿ ಆಯ್ಕೆಪಟ್ಟಿಯನ್ನು ಸಿದ್ಧಪಡಿಸಿದ್ದಾರೆ’ ಎಂದೂ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.