ADVERTISEMENT

ಛಲವಾದಿಗೆ ಕೆಪಿಎಸ್‌ಸಿ ಅಧ್ಯಕ್ಷ ಸ್ಥಾನ ನೀಡಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2018, 19:43 IST
Last Updated 26 ಡಿಸೆಂಬರ್ 2018, 19:43 IST

ಬೆಂಗಳೂರು: ಉತ್ತರ ಕರ್ನಾಟಕಕ್ಕೆ ಸೇರಿದ ಛಲವಾದಿ (ಬಲಗೈ) ಸಮುದಾಯದ ಒಬ್ಬರನ್ನು ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಅಧ್ಯಕ್ಷರನ್ನಾಗಿ ನೇಮಿಸಬೇಕು ಎಂದು ದಲಿತ ಸಂಘರ್ಷ ಸಮಿತಿಯ (ಬಿ.ಕೃಷ್ಣಪ್ಪ ಸ್ಥಾಪಿತ) ರಾಜ್ಯ ಸಂಚಾಲಕ ಹೆಣ್ಣೂರು ಶ್ರೀನಿವಾಸ್ ಆಗ್ರಹಿಸಿದ್ದಾರೆ.

‘ಹದಿನಾರು ಜಾತಿಯ, ವಿವಿಧ ಹಿನ್ನೆಲೆಯುಳ್ಳವರು ಒಟ್ಟು 67 ವರ್ಷಗಳ ಕಾಲ ಕೆಪಿಎಸ್‌ಸಿ ಅಧ್ಯಕ್ಷರಾಗಿದ್ದಾರೆ. ಅವರಲ್ಲಿ ಒಕ್ಕಲಿಗರು 5 ಬಾರಿ, ಮಾದಿಗರು 3 ಬಾರಿ, ಲಿಂಗಾಯತರು 3 ಬಾರಿ, ಬ್ರಾಹ್ಮಣರು 2 ಬಾರಿ, ಮುಸ್ಲಿಮರು 2 ಬಾರಿ,ಕುರುಬರು, ಜೈನರು ಮತ್ತು ಕ್ರೈಸ್ತ ಸಮುದಾಯದ ತಲಾ ಒಬ್ಬರು ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ’ ಎಂದು ಹೇಳಿದರು.

‘ದಲಿತರಲ್ಲಿ ಪ್ರಮುಖರಾದ ಛಲವಾದಿ (ಬಲಗೈ) ಸಮುದಾಯದವರು ಈವರೆಗೂ ಅಧ್ಯಕ್ಷರಾಗಿಲ್ಲ. ಈ ಹುದ್ದೆಯಲ್ಲಿ ಉತ್ತರ ಕರ್ನಾಟಕದವರು ಹೆಚ್ಚು ಕಾಲ ಆಡಳಿತ ನಡೆಸಿಲ್ಲ. ಇಂತಹ ಅನ್ಯಾಯ, ಅಸಮತೋಲನ ಮತ್ತು ಅಸಮಾಧಾನವನ್ನು ಕಡಿಮೆಗೊಳಿಸಲು ಛಲವಾದಿ (ಬಲಗೈ) ಸಮುದಾಯದವರಿಗೆ ಅಧ್ಯಕ್ಷ ಸ್ಥಾನ ನೀಡಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.

ADVERTISEMENT

‘ರಾಜ್ಯ ಸರ್ಕಾರದಲ್ಲಿ ಮಾದಿಗ ಸಮುದಾಯದ ಯಾರೊಬ್ಬರೂ ಸದ್ಯ ಸಚಿವರಾಗಿಲ್ಲ. ಆದ್ದರಿಂದ ಉತ್ತರ ಕರ್ನಾಟಕದ ಮಾದಿಗ (ಎಡಗೈ) ಸಮುದಾಯದ ಒಬ್ಬರಿಗೆ ಸಂಪುಟ ದರ್ಜೆಯ ಸಚಿವ ಸ್ಥಾನ ನೀಡಬೇಕು’ ಎಂದೂ ಬೇಡಿಕೆ ಇಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.