ADVERTISEMENT

ಹೈಟೆನ್ಷನ್‌ ವೈರ್‌ ಕೆಳಗೆ 7,722 ಕಟ್ಟಡ: ನೋಟಿಸ್‌ ಜಾರಿ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2023, 21:18 IST
Last Updated 9 ಫೆಬ್ರುವರಿ 2023, 21:18 IST
   

ಬೆಂಗಳೂರು: ಹೈಟೆನ್ಷನ್‌ ವೈರ್‌ಗಳ ಕೆಳಗೆ ಮತ್ತು ಪಕ್ಕದಲ್ಲೇ ಮನೆ ನಿರ್ಮಿಸಿದ 7,722 ಮಂದಿಗೆ ಕೆಪಿಟಿಸಿಎಲ್‌ ನೋಟಿಸ್‌ ನೀಡಿದೆ.

ಚಾಮುಂಡಿ ನಗರದ ಫ್ಯಾಕ್ಟರಿ ಬಳಿ ಗಾಳಿಪಟ ಹಾರಿಸಲು ತೆರಳಿದ್ದಾಗ ಹೈಟೆನ್ಷನ್‌ ವಿದ್ಯುತ್‌ ತಂತಿ ತಗುಲಿ ಬಾಲಕನೊಬ್ಬ ಜ.18ರಂದು ಮೃತಪಟ್ಟಿದ್ದ. ಇದಕ್ಕೂ ಮುನ್ನ ಡಿ.1ರಂದು ಮಹಾಲಕ್ಷ್ಮಿ ಲೇಔಟ್‌ನಲ್ಲಿ ಪಾರಿವಾಳ ಹಿಡಿಯಲು ಹೋಗಿ ಹೈಟೆನ್ಷನ್‌ ವಿದ್ಯುತ್‌ ವೈರ್‌ ತಗುಲಿ ಇಬ್ಬರು ಮಕ್ಕಳು ಮೃತಪಟ್ಟಿದ್ದರು. ಈ ಘಟನೆಗಳ ಬಳಿಕ ಕೆಪಿಟಿಸಿಎಲ್‌ ಅನಧಿಕೃತ ಕಟ್ಟಡಗಳ ಬಗ್ಗೆ ಜನವರಿ ತಿಂಗಳಲ್ಲಿ ಸಮೀಕ್ಷೆ ಕಾರ್ಯ ಕೈಗೊಂಡಿತ್ತು.

ಹೈಟೆನ್ಷನ್ ವೈರ್ (ಇಎಚ್‌ವಿ) ಹಾದು ಹೋಗಿರುವ ಕೆಳಗೆ ಮತ್ತು ಅತಿ ಸಮೀಪದಲ್ಲೇ ಮನೆಗಳನ್ನು ಕಟ್ಟಿಕೊಂಡಿರುವ ಅನಧಿಕೃತ ಕಟ್ಟಡಗಳನ್ನು ಕೆಪಿಟಿಸಿಎಲ್ ಗುರುತಿಸಿದೆ. ದೇವನಹಳ್ಳಿ, ಎಲೆಕ್ಟ್ರಾನಿಕ್‌ ಸಿಟಿ, ನೆಲಮಂಗಲ, ಹೆಬ್ಬಾಳ, ಹೂಡಿ ಸೇರಿದಂತೆ ನಗರದಾದ್ಯಂತ ಕೆಪಿಟಿಸಿಎಲ್ ಸಮೀಕ್ಷೆ ನಡೆಸಿದ್ದು, 7,722 ಅನಧಿಕೃತ ಕಟ್ಟಡಗಳನ್ನು ಗುರುತಿಸಿದೆ.

ADVERTISEMENT

’ಹೈಟೆನ್ಷನ್‌ ವೈರ್‌ ಮಾರ್ಗದ ಕೆಳಗೆ ಮತ್ತು ಪಕ್ಕದಲ್ಲೇ ಇರುವ ಕಟ್ಟಡಗಳ ಮಾಲೀಕರಿಗೆ ನೋಟಿಸ್‌ಗಳನ್ನು ನಿರಂತರವಾಗಿ ನೀಡಲಾಗಿದೆ. ಜತೆಗೆ, ಬಿಬಿಎಂಪಿ, ಬೆಸ್ಕಾಂ ಹಾಗೂ ಸಂಬಂಧಿಸಿದ ಪೊಲೀಸ್‌ ಠಾಣೆಗಳಿಗೂ ಈ ಬಗ್ಗೆ ಮಾಹಿತಿ ನೀಡಲಾಗಿದೆ. ಹೆಟೆನ್ಷನ್‌ ವೈರ್‌ನಿಂದಾಗುವ ಅಪಾಯಗಳು ಮತ್ತು ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸುವಂತೆ ಜನರಲ್ಲಿ ಅರಿವು ಮೂಡಿಸುವ ಪ್ರಯತ್ನಗಳನ್ನು ಸಹ ಮಾಡಲಾಗಿದೆ’ ಎಂದು ಕೆಪಿಟಿಸಿಎಲ್‌ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.