ADVERTISEMENT

ಕೆ.ಆರ್. ಮಾರುಕಟ್ಟೆ: ದುರ್ವಾಸನೆ ನಡುವೆಯೇ ವ್ಯಾಪಾರ ವಹಿವಾಟು

ಕೆ.ಆರ್. ಮಾರುಕಟ್ಟೆ ಮೂಲಸೌಕರ್ಯದ ಕೊರತೆ: ವೈಜ್ಞಾನಿಕವಾಗಿ ವಿಲೇವಾರಿಯಾಗದ ತ್ಯಾಜ್ಯ

ಖಲೀಲ ಅಹ್ಮದ ಶೇಖ
Published 7 ಮೇ 2025, 23:30 IST
Last Updated 7 ಮೇ 2025, 23:30 IST
ಕೆ.ಆರ್. ಮಾರುಕಟ್ಟೆ ಹಿಂಭಾಗದ ರಸ್ತೆಯಲ್ಲಿ ತ್ಯಾಜ್ಯ ಸುರಿದಿರುವುದು
ಪ್ರಜಾವಾಣಿ ಚಿತ್ರ: ಪ್ರಶಾಂತ್ ಎಚ್.ಜಿ.
ಕೆ.ಆರ್. ಮಾರುಕಟ್ಟೆ ಹಿಂಭಾಗದ ರಸ್ತೆಯಲ್ಲಿ ತ್ಯಾಜ್ಯ ಸುರಿದಿರುವುದು ಪ್ರಜಾವಾಣಿ ಚಿತ್ರ: ಪ್ರಶಾಂತ್ ಎಚ್.ಜಿ.   

ಬೆಂಗಳೂರು: ಮಾರುಕಟ್ಟೆಯ ಪ್ರಾಂಗಣದಲ್ಲಿ ಬಿದ್ದಿರುವ ಕಸದ ರಾಶಿ, ಮಳೆ ಬಂದಾಗಲೆಲ್ಲ ಕೆಸರು ಗದ್ದೆಯಾಗುವ ಅಂಗಳ, ಮಾರುಕಟ್ಟೆಯ ಹಿಂಭಾಗದ ರಸ್ತೆಯ ಮೇಲೆ ಹರಿಯುವ ಒಳಚರಂಡಿ ನೀರಿನಿಂದ ಇಡೀ ಪ್ರದೇಶವೇ ಗಬ್ಬೆದ್ದು ನಾರುತ್ತಿದೆ. ನಿತ್ಯ ಈ ದುರ್ವಾಸನೆಯ ನಡುವೆಯೇ ವ್ಯಾಪಾರ ವಹಿವಾಟು ನಡೆಯುತ್ತಿದೆ. 

ಕೆ.ಆರ್. ಮಾರುಕಟ್ಟೆಯ ಮುಖ್ಯ ಕಟ್ಟಡದ ಹಿಂಭಾಗದಿಂದ ಚಿಕ್ಕಪೇಟೆ ಮೆಟ್ರೊ ನಿಲ್ದಾಣಕ್ಕೆ ಹೋಗುವ ಮಾರ್ಗದಲ್ಲಿರುವ ಹಣ್ಣು, ತರಕಾರಿ, ಸೊಪ್ಪು ಮತ್ತು ತೆಂಗಿನಕಾಯಿ ವ್ಯಾಪಾರಿಗಳು ಇಂಥ ಅಶುಚಿತ್ವದ ಪರಿಸರದಲ್ಲೇ ವ್ಯಾಪಾರ ಮಾಡುವ ಪರಿಸ್ಥಿತಿ ಇದೆ.

ದುರ್ವಾಸನೆಗೆ ಕಾರಣವೇನು?: ಕೆ.ಆರ್. ಮಾರುಕಟ್ಟೆಯ ಕಟ್ಟಡದ ನೆಲಮಹಡಿಯ ವಾಹನ ನಿಲುಗಡೆ ಸ್ಥಳದಲ್ಲಿ ನಿತ್ಯ ತ್ಯಾಜ್ಯ ಸಂಗ್ರಹವಾಗುತ್ತದೆ.  ಬಿಬಿಎಂಪಿಯವರು ತ್ಯಾಜ್ಯವನ್ನು ಜೆಸಿಬಿ ಮೂಲಕ ಲಾರಿಗೆ ತುಂಬಿಸುವ ಸಂದರ್ಭದಲ್ಲಿ ಅದನ್ನು ಕಂಪ್ರೆಸ್‌ ಮಾಡುತ್ತಾರೆ. ಆಗ ಉತ್ಪತ್ತಿಯಾಗುವ ತ್ಯಾಜ್ಯ ನೀರನ್ನು ಪೈಪ್‌ ಮೂಲಕ ಚರಂಡಿಗೆ ಬಿಡುವ ಬದಲು ನಿತ್ಯ ರಸ್ತೆಯಲ್ಲಿ ಹರಿಸಲಾಗುತ್ತಿದೆ. ಇದೇ ದುರ್ವಾಸನೆ ಹೊಮ್ಮಲು ಕಾರಣವಾಗಿದೆ. ಮುಖ್ಯ ಕಟ್ಟಡದಿಂದ ಚರಂಡಿಗೆ ಜೋಡಿಸಿಬೇಕಿದ್ದ ಪೈಪ್‌ ಹಾಗೆಯೇ ಬಿಟ್ಟಿರುವುದರಿಂದ, ತ್ಯಾಜ್ಯ ನೀರು ರಸ್ತೆಗೆ ಹರಿಯುತ್ತಿದೆ.

ADVERTISEMENT

‘ವಾಹನ ನಿಲುಗಡೆ ಸ್ಥಳದಲ್ಲಿ ಸಂಗ್ರಹಿಸಿದ ತ್ಯಾಜ್ಯವನ್ನು ಬಿಬಿಎಂಪಿ ಸಿಬ್ಬಂದಿ ಜೆಸಿಬಿ ಮೂಲಕ ಮೇಲ್ಭಾಗಕ್ಕೆ ತೆಗೆದುಕೊಂಡು ಬಂದು ರಸ್ತೆಯಲ್ಲಿ ಸುರಿಯುತ್ತಾರೆ. ಸುರಿದ ತ್ಯಾಜ್ಯವನ್ನು ಇನ್ನೊಂದು ಜೆಸಿಬಿಯ ಮೂಲಕ ಟ್ರಕ್‌ಗಳಲ್ಲಿ ತುಂಬಿಸಿ ವಿಲೇವಾರಿ ಮಾಡಲಾಗುತ್ತಿದೆ. ಹಸಿ ಕಸ, ಒಣ ಕಸವೆಂದು ವಿಂಗಡಿಸದೇ ಅವೈಜ್ಞಾನಿಕ ವಾಗಿ ವಿಲೇವಾರಿ ಮಾಡುತ್ತಿದ್ದಾರೆ. ಇದೂ ನಮಗೆ ದೊಡ್ಡ ಸಮಸ್ಯೆಯಾಗಿದೆ’ ಎಂದು ವ್ಯಾಪಾರಿಗಳು ದೂರಿದರು.

‘ತೆಂಗಿನಕಾಯಿ, ಹಣ್ಣು, ತರಕಾರಿ, ಹೂವು ಸೇರಿದಂತೆ ವಿವಿಧ ಬಗೆಯ ಪದಾರ್ಥಗಳನ್ನು ಮಾರಾಟ ಮಾಡುವ ಹತ್ತಾರು ಅಂಗಡಿಗಳು ಇಲ್ಲಿ ಇವೆ. ಮಾರುಕಟ್ಟೆಗೆ ಸಂಪರ್ಕಿಸುವ ಎಲ್ಲ ಮಾರ್ಗಗಳಲ್ಲೂ ಅಷ್ಟೇ ಪ್ರಮಾಣದ ವ್ಯಾಪಾರ ನಡೆಯುತ್ತಿದೆ. ಆದರೆ, ಇಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಸ್ವಚ್ಛತೆ ಎಂಬುದು ಮರಿಚೀಕೆಯಾಗಿದೆ. ಶೌಚಾಲಯಗಳಿಗೆ ಮೂಗು ಮುಚ್ಚಿಕೊಂಡು ಹೋಗಬೇಕಾಗಿದೆ’ ಎಂದು ಅವರು ಅಳಲು ತೋಡಿಕೊಂಡರು.

ರಸ್ತೆಯಲ್ಲೇ ಮಳೆ ನೀರು: ಸ್ವಲ್ಪ ಜೋರಾಗಿ ಮಳೆ ಸುರಿದರೆ ಸಾಕು ಮಾರುಕಟ್ಟೆಯ ಸಂಪರ್ಕದ ರಸ್ತೆಗಳೆಲ್ಲ ಕಾಲುವೆಗಳಂತಾಗುತ್ತವೆ. ಅವೆನ್ಯೂ ರಸ್ತೆಯಲ್ಲಿ ಮಳೆ ಬಂದಾಗ ಒಳಚರಂಡಿಯ ಚೇಂಬರ್‌ಗಳು ತೆರೆದುಕೊಂಡು ಕೊಳಚೆ ನೀರು ಹೊರಗೆ ಹರಿಯುತ್ತದೆ. ಮಾರುಕಟ್ಟೆಯಲ್ಲಿ ಸರಿಯಾದ ಚರಂಡಿ ವ್ಯವಸ್ಥೆಯೇ ಇಲ್ಲ ಎಂದು ವ್ಯಾಪಾರಿಗಳು ಪರಿಸ್ಥಿತಿ ವಿವರಿಸಿದರು.

‘ರಸ್ತೆಯಲ್ಲಿ ಹರಿಯುವ ದ್ರವತ್ಯಾಜ್ಯದ ಸಮಸ್ಯೆಯನ್ನು ಬಗೆಹರಿಸುವಂತೆ ಬಿಬಿಎಂಪಿ ಸಿಬ್ಬಂದಿಗೆ ಹಲವಾರು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಇದು ನಮ್ಮ ವಿಭಾಗಕ್ಕೆ ಬರುವುದಿಲ್ಲವೆಂದು ಅಧಿಕಾರಿಗಳು ಒಬ್ಬರ ಮೇಲೆ ಇನ್ನೊಬ್ಬರು ಆರೋಪಿಸುತ್ತಿದ್ದಾರೆ. ಎರಡು ವರ್ಷಗಳಿಂದ ಈ ಸಮಸ್ಯೆ ಹಾಗೆಯೇ ಉಳಿದಿದೆ’ ಎಂದು ನಿಂಬೆ ಹಣ್ಣಿನ ವ್ಯಾಪಾರಿ ಸರೋಜಮ್ಮ ಅಳಲು ತೋಡಿಕೊಂಡರು. 

ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಬಿಎಸ್‌ಡಬ್ಲ್ಯುಎಂಎಲ್‌ನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ರಮಾಮಣಿ ಅವರಿಗೆ ಕರೆ ಮಾಡಿದರು ಸ್ವೀಕರಿಸಲಿಲ್ಲ.

ಕೆ.ಆರ್. ಮಾರುಕಟ್ಟೆ ವಾಹನ ನಿಲುಗಡೆ ಸ್ಥಳದಲ್ಲಿ ಸಂಗ್ರಹಿಸಿರುವ ತ್ಯಾಜ್ಯದಲ್ಲಿ ನಿಲುಗಡೆ ಮಾಡಿರುವ ಜೆಸಿಬಿ ಪ್ರಜಾವಾಣಿ ಚಿತ್ರ: ಪ್ರಶಾಂತ್ ಎಚ್.ಜಿ.
ಕೃಷ್ಣಮೂರ್ತಿ ನಿಂಬೆ ಹಣ್ಣಿನ ವ್ಯಾಪಾರಿ
ಸೆಂಥಿಲ್ ವ್ಯಾಪಾರಿ
ಮಂಜುನಾಥ್ ತೆಂಗಿನಕಾಯಿ ವ್ಯಾಪಾರಿ

ವಾಹನ ನಿಲುಗಡೆ ತಾಣವೂ ಗಲೀಜು  ಕೆ.ಆರ್. ಮಾರುಕಟ್ಟೆಯ ವಾಹನ ನಿಲುಗಡೆ ಸ್ಥಳದಲ್ಲಿ ತ್ಯಾಜ್ಯ ಸಂಗ್ರಹಿಸಲಾಗುತ್ತಿದೆ. ಇದರಿಂದ ಇಡೀ ಪ್ರದೇಶ ಗಬ್ಬೆದ್ದು ನಾರುತ್ತಿದೆ. ಹಣ ಪಾವತಿಸಿ ವಾಹನ ನಿಲುಗಡೆ ಮಾಡುವ ಗ್ರಾಹಕರು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ಬೀಡಾಡಿ ದನಗಳ ವಿಶ್ರಾಂತಿ ತಾಣವಾಗಿಯೂ ಮಾರ್ಪಟ್ಟಿದೆ. ಸಾರ್ವಜನಿಕರು ಇಲ್ಲಿಯೇ ಮಲ ಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ ಎಂದು ವ್ಯಾಪಾರಿಗಳು ದೂರುತ್ತಾರೆ.

- ವ್ಯಾಪಾರಿಗಳು ಏನಂತಾರೆ? ಇಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕು. ರಸ್ತೆಯಲ್ಲಿ ಹರಿಯುವ ತ್ಯಾಜ್ಯ ನೀರಿನ ಸಮಸ್ಯೆಗೆ ಮೊದಲು ಪರಿಹಾರ ಕಲ್ಪಿಸಬೇಕು. ಕೃಷ್ಣಮೂರ್ತಿ ನಿಂಬೆಹಣ್ಣಿನ ವ್ಯಾಪಾರಿ

ತಾಜ್ಯದಿಂದ ರೋಗ–ರುಜಿನಗಳು ಹರಡುವ ಸಾಧ್ಯತೆ ಇದೆ. ಇದು ನಮ್ಮ ವ್ಯಾಪಾರ–ವಹಿವಾಟಿಗೂ ಸಮಸ್ಯೆ ಮಾಡುತ್ತಿದೆ. ನಿತ್ಯ ರಸ್ತೆಯಲ್ಲಿ ಹರಿಯುವ ದ್ರವತ್ಯಾಜ್ಯವನ್ನು ಮೋರಿಗೆ ಹರಿಯುವಂತೆ ಕೊಳವೆ ಜೋಡಿಸಬೇಕು.   ಸೆಂಥಿಲ್ ವ್ಯಾಪಾರಿ

ಕೆ.ಆರ್. ಮಾರುಕಟ್ಟೆಯ ಮುಖ್ಯ ಕಟ್ಟಡದ ಹಿಂಭಾಗದಲ್ಲಿ ತ್ಯಾಜ್ಯದಿಂದ ಉತ್ಪತ್ತಿಯಾಗುವ ದ್ರವತ್ಯಾಜ್ಯ ರಸ್ತೆಯಲ್ಲಿ ಹರಿಯುತ್ತಿದೆ. ಇದರಿಂದ ಇಡೀ ಮಾರುಕಟ್ಟೆ ಪ್ರದೇಶವೇ ಗಬ್ಬೆದ್ದು ನಾರುತ್ತಿದೆ. ವ್ಯಾಪಾರಿಗಳಿಗೆ ನಾನಾ ರೋಗಗಳು ಬರುತ್ತಿವೆ. ಈ ಬಗ್ಗೆ ಬಿಬಿಎಂಪಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಕೂಡಲೇ ಈ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕು.

ಮಂಜುನಾಥ್ ತೆಂಗಿನಕಾಯಿ ವ್ಯಾಪಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.