ADVERTISEMENT

ಕೆ.ಆರ್.ಪುರ: ಕುಷ್ಠರೋಗ ಜಾಗೃತಿ ಜಾಥಾ

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಆಂದೋಲನ

​ಪ್ರಜಾವಾಣಿ ವಾರ್ತೆ
Published 30 ಜನವರಿ 2019, 19:17 IST
Last Updated 30 ಜನವರಿ 2019, 19:17 IST
ಜಿಲ್ಲಾ ಕುಷ್ಠರೋಗ ನಿರ್ಮೂಲನಾ ಅಧಿಕಾರಿ ಡಾ.ನದೀಮ್ ಅಹಮದ್‌ ಜಾಥಾಕ್ಕೆ ಚಾಲನೆ ನೀಡಿದರು
ಜಿಲ್ಲಾ ಕುಷ್ಠರೋಗ ನಿರ್ಮೂಲನಾ ಅಧಿಕಾರಿ ಡಾ.ನದೀಮ್ ಅಹಮದ್‌ ಜಾಥಾಕ್ಕೆ ಚಾಲನೆ ನೀಡಿದರು   

ಬೆಂಗಳೂರು: ‘ಕುಷ್ಠರೋಗ ಹಾಗೂ ಎಚ್1 ಎನ್1 ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲು ಜ. 30ದಿಂದ ಫೆ. 13ರವರೆಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಆಂದೋಲನ ಹಮ್ಮಿಕೊಳ್ಳಲಾಗಿದೆ’ ಎಂದು ಜಿಲ್ಲಾ ಕುಷ್ಠರೋಗ ನಿರ್ಮೂಲನಾ ಅಧಿಕಾರಿ ಡಾ.ನದೀಮ್ ಅಹಮದ್ ತಿಳಿಸಿದರು.

ಕೆ.ಆರ್.ಪುರದ ಸಾರ್ವಜನಿಕ ತಾಲ್ಲೂಕು ಆಸ್ಪತ್ರೆಯಲ್ಲಿ ಅಂದೋಲನಕ್ಕೆ ಚಾಲನೆ ನೀಡಿ ಮಾತನಾಡಿದರು.

‘ದೇಶವನ್ನು ಕುಷ್ಠರೋಗದಿಂದ ಮುಕ್ತಗೊಳಿಸಲು ಮಹಾತ್ಮ ಗಾಂಧೀಜಿಯವರ ಶ್ರಮ ಮಹತ್ವದ್ದು. ಅವರ ಸ್ಮರಣೆಯಲ್ಲಿ ಕುಷ್ಠರೋಗ ಹಾಗೂ ಎಚ್1 ಎನ್1 ಬಗ್ಗೆ ಅರಿವು ಮೂಡಿಸಲು 15 ದಿನಗಳ ಕಾಲ ಆಂದೋಲನ ಹಮ್ಮಿಕೊಳ್ಳಲಾಗಿದೆ. ಅಂಗವಿಕಲತೆಗೆ ಪ್ರಮುಖ ಕಾರಣವಾಗಿರುವ ಕುಷ್ಠರೋಗವನ್ನು ಸುಲಭವಾಗಿ ಪತ್ತೆಹಚ್ಚಿ ಸಂಪೂರ್ಣವಾಗಿ ಗುಣಪಡಿಸಬಹುದು’ ಎಂದರು.

ADVERTISEMENT

ದೇಹದ ಮೇಲೆ ಯಾವುದೇ ಸ್ವರ್ಶ ಜ್ಞಾನವಿಲ್ಲದೆ ತಿಳಿಬಿಳಿ ಅಥವಾ ತಾಮ್ರ ಬಣ್ಣದ ಮಚ್ಚೆಗಳು, ಹಾಗೂ ಮುಖ, ಕೈಕಾಲುಗಳಲ್ಲಿ ಎಣ್ಣೆ ಸವರಿದಂತೆ ಹೊಳಪು ಇರುವುದು ಕಂಡು ಬಂದರೆ ಕೂಡಲೇ ಚಿಕಿತ್ಸೆ ಪಡೆದು ಗುಣಮುಖರಾಗಬೇಕು ಎಂದು ಹೇಳಿದರು.

ತಾಲ್ಲೂಕು ಆರೋಗ್ಯಾಧಿಕಾರಿ, ಡಾ.ಚಂದ್ರಶೇಖರ್, ಕುಷ್ಠರೋಗಕ್ಕೆ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ದೊರೆಯುತ್ತದೆ. ಯಾವುದೇ ಕೀಳರಿಮೆ ಹೊಂದದೆ ಪ್ರಾರಂಭಿಕ ಹಂತದಲ್ಲಿಯೇ ರೋಗವನ್ನು ಪತ್ತೆ ಹಚ್ಚಿ ಚಿಕಿತ್ಸೆ ಪಡೆಯಬೇಕು ಎಂದು ಹೇಳಿದರು.

ವಿನಾಯಕ ಪ್ಯಾರಾ ಮೆಡಿಕಲ್ ವಿದ್ಯಾರ್ಥಿಗಳು ಮತ್ತು ಸೌತ್ ಈಸ್ಟ್ ಏಷಿಯನ್ ಕಾಲೇಜು ವಿದ್ಯಾರ್ಥಿಗಳು ಕೆ.ಆರ್.ಪುರ ಪ್ರಮುಖ ಬೀದಿಗಳಲ್ಲಿ ಜಾಥಾ ನಡೆಸಿದರು.

ಕೆ.ಆರ್.ಪುರ ಸಾರ್ವಜನಿಕ ತಾಲ್ಲೂಕು ಆಸ್ಪತ್ರೆ ಚರ್ಮರೋಗ ವೈದ್ಯೆ ಡಾ.ಸುಶೀಲಾ, ಸೌತ್ ಈಸ್ಟ್ ಏಷಿಯನ್ ಕಾಲೇಜು ಪ್ರಾಂಶುಪಾಲರಾದ ಸುನೀತಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.