ADVERTISEMENT

ಕೆ.ಆರ್.ಪುರ ಸ್ಫೋಟ: ವೃದ್ಧೆ ಸಾವು, ಮೂವರು ಗಂಭೀರ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2025, 15:36 IST
Last Updated 25 ಅಕ್ಟೋಬರ್ 2025, 15:36 IST
ಸ್ಫೋಟದಿಂದ ಕುಸಿದ ಮನೆ  
ಸ್ಫೋಟದಿಂದ ಕುಸಿದ ಮನೆ     

ಕೆ.ಆರ್.ಪುರ: ತ್ರಿವೇಣಿ ನಗರದ ಮನೆಯೊಂದರಲ್ಲಿ ಶನಿವಾರ ಮುಂಜಾನೆ ಸಂಭವಿಸಿದ ಸ್ಫೋಟದಲ್ಲಿ ವೃದ್ಧೆ ಮೃತಪಟ್ಟು ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ‌

ಅಕ್ಕಯ್ಯಮ್ಮ(80) ಅವರು ಮೃತಪಟ್ಟಿದ್ದಾರೆ. ಶೇಖರ್ (52) ಕಿರಣ್ (22) ಚಂದನ್ (25) ಅವರು ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

ಮನೆಯಲ್ಲಿದ್ದ ಸಿಲಿಂಡರ್‌ನಿಂದ ಅಡುಗೆ ಅನಿಲ ಸೋರಿಕೆಯಾಗಿ ಸ್ಫೋಟ ಸಂಭವಿಸಿದೆ ಎಂಬುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಸ್ಥಳದಲ್ಲಿ ಯಾವುದೇ ಸ್ಫೋಟಕ ವಸ್ತುಗಳು ಪತ್ತೆಯಾಗಿಲ್ಲ. ಕಟ್ಟಡದ ಅವಶೇಷಗಳ ತೆರವು ಕಾರ್ಯಾಚರಣೆ ನಡೆಯುತ್ತಿದೆ. ಕಾರ್ಯಾಚರಣೆ ಮುಗಿದ ಮೇಲೆ ನಿಖರವಾದ ಕಾರಣ ಪತ್ತೆಯಾಗಲಿದೆ ಎಂದು ಪೊಲೀಸರು ಹೇಳಿದರು.

ADVERTISEMENT

ಶನಿವಾರ ಬೆಳಿಗ್ಗೆ 7.30ರ ಸುಮಾರಿಗೆ ಘಟನೆ ನಡೆದಿದೆ. ಸ್ಫೋಟದ ತೀವ್ರತೆಯಿಂದ ಮನೆ ಸಂಪೂರ್ಣವಾಗಿ ಧ್ವಂಸಗೊಂಡಿದೆ. ಅಕ್ಕಪಕ್ಕದ ಮೂರು ಶೆಡ್‌ಗಳಿಗೂ ಹಾನಿಯಾಗಿದೆ. ಅಲ್ಲದೆ, ಕೆಲವು ಮನೆಗಳ ಬಾಗಿಲಿನ ಫ್ರೇಮ್ ಮತ್ತು ಕಿಟಕಿಗಳು ಬಿರುಕುಬಿಟ್ಟಿವೆ.

ಪಕ್ಕದ ಮನೆಯಲ್ಲಿ ವಾಸವಾಗಿದ್ದ ಕಾಂಚನಾ ಎಂಬ ಮಹಿಳೆಯ ತಲೆಗೆ ಪೆಟ್ಟು ಬಿದ್ದಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ಫೋಟದ ಶಬ್ದಕ್ಕೆ ತ್ರಿವೇಣಿ ನಗರ ನಿವಾಸಿಗಳು ಬೆಚ್ಚಿ ಬಿದ್ದಿದ್ದಾರೆ. ಅಕ್ಕಯ್ಯಮ್ಮ ಅವರ ಮಕ್ಕಳು ಫಾಸ್ಟ್‌ಫುಡ್ ವ್ಯಾಪಾರ ನಡೆಸುತ್ತಿದ್ದರು. ವರ್ಷದ ಹಿಂದೆ ತ್ರಿವೇಣಿ ನಗರದಲ್ಲಿ ರಮೇಶ್ ಎಂಬುವವರಿಗೆ ಸೇರಿದ ಬಾಡಿಗೆ ಮನೆಗೆ ಬಂದು ಅಕ್ಕಯ್ಯಮ್ಮ ಅವರು ತಮ್ಮ ಪುತ್ರ ಮತ್ತು ಮೊಮ್ಮಕ್ಕಳೊಂದಿಗೆ ನೆಲಸಿದ್ದರು.

ಗಂಭೀರವಾಗಿ ಗಾಯಗೊಂಡವರನ್ನು ಹತ್ತಿರದ ಟಿಸಿ ಪಾಳ್ಯದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಲ್ಲಿ ಬಹಳಷ್ಟು ಸುಟ್ಟಗಾಯಗಳಾಗಿರುವ ಚಂದನ್ ಸ್ಥಿತಿ ಗಂಭೀರವಾಗಿದೆ. ಅಡುಗೆ ಅನಿಲ ಸೋರಿಕೆಯಾಗಿ ಸ್ಫೋಟ ಸಂಭವಿಸಿರುವ ಸಾಧ್ಯತೆಯಿದೆ ಎಂದು ಪೊಲೀಸರು ತಿಳಿಸಿದರು.

ಘಟನಾ ಸ್ಥಳಕ್ಕೆ ಪೂರ್ವ ವಿಭಾಗದ ಹೆಚ್ಚುವರಿ ಕಮಿಷನರ್‌ ರಮೇಶ್ ಬಾನೋತ್, ವೈಟ್‌ಫೀಲ್ಡ್ ಡಿಸಿಪಿ ಪರಶುರಾಮ್ ಮತ್ತು ಕೆ.ಆರ್.ಪುರ ಪೊಲೀಸರು, ಸೊಕೊ ತಂಡ, ವಿಧಿ ವಿಜ್ಞಾನ ಪ್ರಯೋಗಾಲಯದ ತಜ್ಞರು, ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ಭೇಟಿ ಮಾಡಿ ಪರಿಶೀಲನೆ ನಡೆಸಿದರು. ಘಟನೆ ಸಂಬಂಧ ಹಲವು ಮಾಹಿತಿಗಳನ್ನು ಕಲೆ ಹಾಕಿದ್ದಾರೆ.

ಪೊಲೀಸರು ಸ್ಫೋಟದಿಂದ ಕುಸಿದ ಮನೆಯ ಪರಿಶೀಲನೆ ನಡೆಸಿದರು  
ಸಮಗ್ರ ತನಿಖೆಗೆ ಆಗ್ರಹ
ಅಡುಗೆ ಅನಿಲ ಸೋರಿಕೆಯಿಂದಲೇ ಈ ಅನಾಹುತ ಆಗಿದೆಯೇ ಅಥವಾ ಬೇರೆ ಏನಾದರೂ ಕಾರಣವಿದೆಯೇ ಎಂಬುದನ್ನು ಪೊಲೀಸರು ಪತ್ತೆ ಹಚ್ಚಬೇಕು. ಗಟ್ಟಿ ಮುಟ್ಟಾದ ಆರ್‌ಸಿಸಿ ಮನೆ ಸಂಪೂರ್ಣ ಹಾನಿಗೆ ಒಳಗಾಗಿದೆ. ಸಿಲಿಂಡರ್‌ನಿಂದ ಅಡುಗೆ ಅನಿಲ ಸೋರಿಕೆಯಾಗಿ ಸ್ಫೋಟವಾಗಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಹಾನಿಯಾಗಲು ಸಾಧ್ಯವೇ? ಈ ಘಟನೆ ಸಂಬಂಧ ಸೂಕ್ತ ರೀತಿಯಲ್ಲಿ ತನಿಖೆ ಆಗಬೇಕು. ಮೃತರಿಗೆ ಸರ್ಕಾರ ಪರಿಹಾರ ಕೊಡಬೇಕು
ಶೋಭಾ ಕರಂದ್ಲಾಜೆ, ಕೇಂದ್ರ ಸಚಿವೆ
ಕಾರಣ ಗೊತ್ತಾಗಲಿ
ಅನುಮಾನ ನಿವಾರಣೆಗೆ ಸರಿಯಾದ ತನಿಖೆ ಆಗಬೇಕು. ಶೇಖರಿಸಿದ್ದ ಸ್ಫೋಟಕ ಸ್ಫೋಟ ಆಗಿದೆಯೇ ಅನ್ನೋದು ಗೊತ್ತಾಗಬೇಕು. ಮೃತ ಅಕ್ಕಯ್ಯಮ್ಮ ಕುಟುಂಬಕ್ಕೆ ವೈಯಕ್ತಿಕವಾಗಿ ಒಂದು ಲಕ್ಷ ಪರಿಹಾರ ನೀಡುತ್ತೇನೆ.
ಬೈರತಿ ಬಸವರಾಜ ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.