
ಕೆ.ಆರ್.ಪುರ: ಕೊಳಚೆ ನೀರು ಹಾಗೂ ದುರ್ವಾಸನೆಗೆ ಬೇಸತ್ತು ಸಮರ್ಪಕ ಚರಂಡಿ ನಿರ್ಮಿಸುವಂತೆ ಒತ್ತಾಯಿಸಿ ಮಂಜುನಾಥ್ ನಗರ ಮತ್ತು ಕಲ್ಕೆರೆ ನಿವಾಸಿಗಳು ಜಿಬಿಎ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಅಣ್ಣಯ್ಯಪ್ಪ ತೆಂಗಿನ ತೋಟದ ಬಡಾವಣೆ ಸಮೀಪದ ಕಲ್ಕೆರೆಯಿಂದ ಮಂಜುನಾಥ್ ನಗರ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಕೆಲ ವರ್ಷಗಳಿಂದ ಸಮರ್ಪಕ ಒಳಚರಂಡಿ ವ್ಯವಸ್ಥೆ ಇಲ್ಲದೆ ಕೊಳಚೆ ನೀರು ರಸ್ತೆಯ ಮೇಲೆ ಹರಿಯುತ್ತಿದೆ. ಪ್ರತಿದಿನ ಸಾರ್ವಜನಿಕರು ದುರ್ವಾಸನೆಗೆ ಹೈರಾಣಾಗಿದ್ದಾರೆ. ನಿತ್ಯದ ಸಂಚಾರಕ್ಕೆ ಅಡಚಣೆಯಾಗಿ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ.
ಕೊಳಚೆ ನೀರು ಹರಿದು ರಸ್ತೆ ಸಂಪೂರ್ಣವಾಗಿ ಹಾಳಾಗಿದೆ. ವಾಹನ ಸವಾರರು ಹಾಗೂ ವಿದ್ಯಾರ್ಥಿಗಳು ಪ್ರತಿನಿತ್ಯ ಕಿರಿಕಿರಿ ಅನುಭವಿಸುತ್ತಿದ್ದಾರೆ. ಈ ಬಗ್ಗೆ ಶಾಸಕ ಬೈರತಿ ಬಸವರಾಜ ಮತ್ತು ಜಿಬಿಎ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಮಂಜುನಾಥ್ ನಗರ ನಿವಾಸಿ ಕೆ.ವಿ.ಶ್ರೀನಿವಾಸ್ ಅಸಮಾಧಾನ ವ್ಯಕ್ತಪಡಿಸಿದರು.
‘ರಸ್ತೆಯಲ್ಲಿ ಗುಂಡಿಗಳು ನಿರ್ಮಾಣವಾಗಿದೆ. ಅಕ್ಕಪಕ್ಕದಲ್ಲಿರುವ ನಾಲ್ಕೈದು ಮನೆಯವರು ಉದ್ದೇಶಪೂರ್ವಕವಾಗಿ ಚರಂಡಿ ನಿರ್ಮಿಸಲು, ಕಾವೇರಿ ಪೈಪಲೈನ್ ಆಳವಡಿಕೆಗೆ ಹಾಗೂ ಒಳಚರಂಡಿ ನಿರ್ಮಾಣಕ್ಕೆ ಅಡ್ಡಿಪಡಿಸುತ್ತಿದ್ದಾರೆ. ವಿದ್ಯುತ್ ಕಂಬ ಹಾಕಲು ಬಿಡುತ್ತಿಲ್ಲ. ಸಾರ್ವಜನಿಕ ರಸ್ತೆಯನ್ನು ತಮಗೆ ಸೇರಿದ್ದು, ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡುವಂತಿಲ್ಲ ಧಮ್ಕಿ ಹಾಕುತ್ತಿದ್ದಾರೆ’ ಎಂದು ಕಲ್ಕೆರೆ ನಿವಾಸಿ ಕೆ.ಪಿ.ಶಂಕರಪ್ಪ ದೂರಿದರು.
ಆದಷ್ಟು ಬೇಗ ಚರಂಡಿ ನಿರ್ಮಾಣ ಮಾಡುವಂತೆ ಕಲ್ಕೆರೆ ನಿವಾಸಿ ಮೂರ್ತಿ, ಮುಖಂಡ ಬೀರಪ್ಪ ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.