
ಕೆ.ಆರ್.ಪುರ: ‘ಇಂದಿನ ಆಧುನಿಕ ಯುಗದಲ್ಲಿ ವಿಜ್ಞಾನ ಹಾಗೂ ತಂತ್ರಜ್ಞಾನದಲ್ಲಿ ಎಷ್ಟೇ ಮುಂದುವರೆದರೂ ನಮ್ಮ ಜೀವನದ ಆಧ್ಯಾತ್ಮಿಕತೆಯನ್ನು ಹೋಗಲಾಡಿಸಲು ಸಾಧ್ಯವಿಲ್ಲ’ ಎಂದು ಚಿತ್ರದುರ್ಗದ ಶ್ರೀ ಶಿವಶರಣ ಮಾದಾರಚನ್ನಯ್ಯ ಗುರುಪೀಠಾಧ್ಯಾಕ್ಷ ಶಿವಶರಣ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ಹೇಳಿದರು.
ಕೆ.ಆರ್.ಪುರ ಸಮೀಪದ ಹೂಡಿ ಗ್ರಾಮದಲ್ಲಿ ಅಣ್ಣಮ್ಮ ಹಾಗೂ ಮದ್ದೂರಮ್ಮ ದೇವಿಯ ನೂತನ ಬಿಂಬ ಪ್ರತಿಷ್ಠಾಪನೆ ಮತ್ತು ಮಹಾ ಕುಂಭಾಭಿಷೇಕ ಮಹೋತ್ಸವದಲ್ಲಿ ಅವರು ಮಾತನಾಡಿದರು.
‘ನಮ್ಮ ದೈನಂದಿನ ಜೀವನದಲ್ಲಿ ಆಹಾರ, ನೀರು, ಗಾಳಿ ಎಷ್ಟು ಅಗತ್ಯವೋ ಅಷ್ಟೇ ಮುಖ್ಯವಾಗಿ ಮನುಷ್ಯನಿಗೆ ಮಾನಸಿಕವಾಗಿ ಆಧ್ಯಾತ್ಮಿಕ ಮುಖ್ಯವಾಗಿದೆ. ಮಠ ಮಂದಿರಗಳು ಮನುಷ್ಯನಿಗೆ ನೆಮ್ಮದಿ, ಸುಖ, ಶಾಂತಿ ನೀಡುವ ಶ್ರದ್ಧಾಕೇಂದ್ರಗಳಾಗಿವೆ. ನಮ್ಮ ಜೀವನದ ಅನೇಕ ಸಮಸ್ಯೆಗಳ ಪರಿಹಾರಕ್ಕೆ ದೇವರ ಮೊರೆಹೋಗುತ್ತೇವೆ. ಪ್ರತಿನಿತ್ಯ ನಂಬಿಕೆ ಮತ್ತು ಭಕ್ತಿ ಭಾವನೆಗಳನ್ನು ತೋರ್ಪಡಿಸುವ ಮೂಲಕ ನಮ್ಮ ಜೀವನದಲ್ಲಿ ಆಗುವ ತಪ್ಪುಗಳನ್ನು ತಿದ್ದಿಕೊಂಡು ಸನ್ಮಾರ್ಗದಲ್ಲಿ ನಡೆಯಬೇಕಿದೆ’ ಎಂದರು.
ಗ್ರಾಮದ ಹಿರಿಯ ಮುಖಂಡರಾದ ಎಚ್.ವಿ.ವೆಂಕಟಸ್ವಾಮಿ ಮಾತನಾಡಿ, ‘20 ವರ್ಷಗಳ ನಂತರ ಮದ್ದೂರಮ್ಮ ಹಾಗೂ ಅಣ್ಣಮ್ಮ ದೇವಸ್ಥಾನವನ್ನು ಹೂಡಿ ಗ್ರಾಮಸ್ಥರು ಹಾಗೂ ದಾನಿಗಳ ನೆರವಿನಿಂದ ಜೀರ್ಣೋದ್ಧಾರ ಮಾಡಲಾಗಿದೆ. ನೂತನ ಬಿಂಬವನ್ನೂ ಪ್ರತಿಷ್ಠಾಪನೆ ಮಾಡಲಾಗಿದೆ’ ಎಂದು ಹೇಳಿದರು.
ಬಿಜೆಪಿ ಮಹದೇವಪುರ ಗ್ರಾಮಾಂತರ ಮಂಡಲ ಅಧ್ಯಕ್ಷ ಎಚ್.ಎಸ್.ಪಿಳ್ಳಪ್ಪ, ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಎಚ್.ವಿ.ಮಂಜುನಾಥ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.