ADVERTISEMENT

ಕರ್ನಾಟಕ ರೈಲು ಮೂಲಸೌಕರ್ಯ ಅಭಿವೃದ್ಧಿಯನ್ನು ಹಳಿಗೆ ತರುತ್ತೇನೆ: ಲಕ್ಷ್ಮಣ್ ಸಿಂಗ್

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2025, 15:53 IST
Last Updated 1 ಡಿಸೆಂಬರ್ 2025, 15:53 IST
ಲಕ್ಷ್ಮಣ್‌ ಸಿಂಗ್ ಅವರನ್ನು ಗೋವಿಂದ ರೆಡ್ಡಿ ಅವರು ಹೂಗುಚ್ಛ ನೀಡಿ ಸ್ವಾಗತಿಸಿದರು
ಲಕ್ಷ್ಮಣ್‌ ಸಿಂಗ್ ಅವರನ್ನು ಗೋವಿಂದ ರೆಡ್ಡಿ ಅವರು ಹೂಗುಚ್ಛ ನೀಡಿ ಸ್ವಾಗತಿಸಿದರು   

ಬೆಂಗಳೂರು: ‘ಕರ್ನಾಟಕ ರೈಲು ಮೂಲಸೌಕರ್ಯ ಅಭಿವೃದ್ಧಿ ಎಂಟರ್‌ಪ್ರೈಸಸ್‌ (ಕೆ- ರೈಡ್) ಅನ್ನು ಹಳಿಗೆ ತರುತ್ತೇನೆ. ಬೆಂಗಳೂರು ಉಪನಗರ ರೈಲು ಯೋಜನೆಯ (ಬಿಎಸ್‌ಆರ್‌ಪಿ) ಕಾಮಗಾರಿಗಳಿಗೆ ವೇಗ ನೀಡುತ್ತೇನೆ’ ಎಂದು ಕೆ- ರೈಡ್ ವ್ಯವಸ್ಥಾಪಕ ನಿರ್ದೇಶಕ ಲಕ್ಷ್ಮಣ್‌ ಸಿಂಗ್‌ ಹೇಳಿದರು.

ಸೋಮವಾರ ಅಧಿಕಾರ ಸ್ವೀಕರಿಸಿದ ಬಳಿಕ ಮಾತನಾಡಿದ ಅವರು, ‘ಬಿಎಸ್‌ಆರ್‌ಪಿಯ ನಾಡಿಮಿಡಿತ ಮತ್ತು ಅದರ ಮಹತ್ವ, ಎದುರಿಸುತ್ತಿರುವ ಸವಾಲುಗಳನ್ನು ಅರ್ಥ ಮಾಡಿಕೊಂಡಿದ್ದೇನೆ. ನಮ್ಮ ಮುಂದಿರುವ ಕೆಲಸ ಎಷ್ಟು ಎಂಬುದು ಗೊತ್ತು. ಅದನ್ನು ಸಾಧಿಸಲು ಕೆ–ರೈಡ್‌ ಸಮರ್ಥವಾಗಿದೆ’ ಎಂದು ತಿಳಿಸಿದರು.

‘ಕಠಿಣ ಸಮಸ್ಯೆಗಳು ಎಂಜಿನಿಯರ್‌ಗಳಿಗೆ ಹೊಸದಲ್ಲ. ವಾಸ್ತವವಾಗಿ, ಸಮಸ್ಯೆಗಳು ಇರುವುದರಿಂದ ಎಂಜಿನಿಯರಿಂಗ್ ಅಸ್ತಿತ್ವದಲ್ಲಿದೆ. ಅಡೆತಡೆಗಳಿಂದ ವಿಚಲಿತರಾಗುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

ADVERTISEMENT

‘ಈ ಯೋಜನೆಯು ಕಠಿಣ ಪರಿಶ್ರಮ ಮತ್ತು ಸ್ಮಾರ್ಟ್‌ ಕೆಲಸವನ್ನು ಬಯಸುತ್ತದೆ. ಎಲ್ಲರೂ ಒಟ್ಟಾಗಿ ಕೆಲಸ ಮಾಡಿ ಕೆ–ರೈಡ್‌ ಅನ್ನು ಹಳಿಗೆ ತರೋಣ. ಸ್ಪಷ್ಟ ಮತ್ತು ತ್ವರಿತ ಪ್ರತಿಕ್ರಿಯೆ, ಸರಿಯಾದ ನಿರ್ಧಾರ ಮತ್ತು ಸಂಯೋಜನೆಗಳೊಂದಿಗೆ ಕೆಲಸ ಮಾಡುವ ಮೂಲಕ ಗುರಿ ಸಾಧಿಸೋಣ’ ಎಂದು ಹೇಳಿದರು.

ಅಧಿಕಾರ ಹಸ್ತಾಂತರಿಸಿದ ನಿರ್ಗಮಿತ ವ್ಯವಸ್ಥಾಪಕ ನಿರ್ದೇಶಕ ಗೋವಿಂದ ರೆಡ್ಡಿ ಮಾತನಾಡಿ, ‘ಲಕ್ಷ್ಮಣ್ ಸಿಂಗ್ ಅವರು ಭಾರತೀಯ ರೈಲ್ವೆಯಲ್ಲಿ ಮೂರು ದಶಕಗಳಿಂದ ಕೆಲಸ ಮಾಡುತ್ತಿದ್ದಾರೆ. ಅಸಾಧಾರಣ ತಾಂತ್ರಿಕ ಪರಿಣತಿ, ದೂರದೃಷ್ಟಿಯ ನಾಯಕತ್ವ ಇರುವ ಅವರು ನುರಿತ ತಂತ್ರಜ್ಞರಾಗಿದ್ದಾರೆ. ದೇಶದ ವಿವಿಧೆಡೆ ಸಂಕೀರ್ಣವಾದ ಮತ್ತು ಪ್ರಮುಖ ಯೋಜನೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಇಲ್ಲಿಯೂ ಬಿಎಸ್‌ಆರ್‌ಪಿಯಂಥ ಮೂಲಸೌಕರ್ಯ ಯೋಜನೆಗೆ ವೇಗ ನೀಡಲಿದ್ದಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಲಕ್ಷ್ಮಣ್ ಸಿಂಗ್:

ಭಾರತೀಯ ರೈಲ್ವೆ ಎಂಜಿನಿಯರಿಂಗ್‌ ಸೇವೆಯ (ಐಆರ್‌ಎಸ್‌ಇ) 1994ರ ಬ್ಯಾಚ್‌ನ ಲಕ್ಷ್ಮಣ್‌ ಸಿಂಗ್‌ ಅವರು ಭಾರತೀಯ ರೈಲ್ವೆಯಲ್ಲಿ ವಿಭಾಗೀಯ ರೈಲ್ವೆ ಹೆಚ್ಚುವರಿ ವ್ಯವಸ್ಥಾಪಕರಾಗಿ ವ್ಯವಸ್ಥಾಪಕರಾಗಿ ಮುಖ್ಯ ಎಂಜಿನಿಯರ್‌ ಆಗಿ ಕಾರ್ಯನಿರ್ವಹಿಸಿದ್ದಾರೆ. ಒಡಂಬಡಿಕೆಗಳು ಮೂಲಸೌಕರ್ಯ ಅಭಿವೃದ್ಧಿ ಕಾನೂನು ವ್ಯವಹಾರಗಳು ಅತಿಕ್ರಮಣ ನಿರ್ವಹಣೆ ಮಾನವ ಸಂಪನ್ಮೂಲ ಬಜೆಟ್ ದಾಸ್ತಾನು ನಿಯಂತ್ರಣ ಮತ್ತು ಕರ್ನಾಟಕ ಆಂಧ್ರಪ್ರದೇಶ ಮತ್ತು ತಮಿಳುನಾಡು ಸರ್ಕಾರಗಳೊಂದಿಗೆ ಅಂತರ-ಸಚಿವಾಲಯ ಸಮನ್ವಯದಲ್ಲಿ ಜವಾಬ್ದಾರಿಗಳನ್ನು ನಿರ್ವಹಿಸಿದ್ದರು. ವಿಜಯಪುರ–ಸೋಲಾಪುರ ಸಂಪರ್ಕಿಸುವ ನೈಋತ್ಯ ರೈಲ್ವೆಯ ಅತಿ ಉದ್ದದ (676 ಮೀಟರ್) 25ಟಿ ಆಕ್ಸಲ್-ಲೋಡ್‌ನ ಭೀಮಾ ರೈಲು ಸೇತುವೆ ಕಾಮಗಾರಿ ಸರ್‌ ಎಂ. ವಿಶ್ವೇಶ್ವರಯ್ಯ ಟರ್ಮಿನಲ್‌ನಲ್ಲಿ ಮೊದಲ ಹವಾನಿಯಂತ್ರಿತ ರೈಲು ನಿಲ್ದಾಣ ನಿರ್ಮಾಣ ಭಾರತೀಯ ರೈಲ್ವೆಯಾದ್ಯಂತ ಲೆವೆಲ್ ಕ್ರಾಸಿಂಗ್‌ಗಳನ್ನು ತೆಗೆದುಹಾಕಲು ಸುಮಾರು 250 ರಸ್ತೆ ಕೆಳ ಸೇತುವೆಗಳು ಮತ್ತು ಮೇಲ್ಸೇತುವೆಗಳ ಯೋಜನೆ ಮತ್ತು ನಿರ್ಮಾಣ ಜಲವಿದ್ಯುತ್ ಸುರಂಗ ಸರ್ಜ್ ಶಾಫ್ಟ್ ಪವರ್‌ಹೌಸ್‌ಗಳ ವಿನ್ಯಾಸ ಮತ್ತು ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ದೆಹಲಿಯವರಾದ ಲಕ್ಷ್ಮಣ್‌ ಸಿಂಗ್‌ ಅವರು 2023ರಿಂದ ಬಿಎಂಆರ್‌ಸಿಎಲ್‌ನಲ್ಲಿ ಮುಖ್ಯ ಪ್ರಧಾನ ವ್ಯವಸ್ಥಾಪಕರಾಗಿ (ಸಿವಿಲ್‌) ಕಾರ್ಯನಿರ್ವಹಿಸುತ್ತಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.